‘ಪ್ರೀತಿಯಿಂದ ಸಹ-ಬಾಳ್ವೆ ನಡೆಸುವುದು ಪ್ರಸ್ತುತ’ – ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನ್ಹ

Spread the love

‘ಪ್ರೀತಿಯಿಂದ ಸಹ-ಬಾಳ್ವೆ ನಡೆಸುವುದು ಪ್ರಸ್ತುತ’ – ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನ್ಹ

ಮಂಗಳೂರು: “ಎಲ್ಲಾ ಸಮುದಾಯಾದವರು ಒಟ್ಟಿಗೆ ಪ್ರೀತಿಯಿಂದ ಸಹ-ಬಾಳ್ವೆ ನಡೆಸುವುದು ಪ್ರಸ್ತುತ ಕಾಲಕ್ಕೆ ಸಮಂಜಸವಾಗಿದೆ. ಪ್ರತಿಯೊಬ್ಬ ಕ್ರಿಶ್ಚಿಯನ್ನರಿಗೆ ಒಂದು ಮಹತ್ವದ ಜವಾಬ್ದಾರಿ ಇದೆ.

ಕಿರು ಕ್ರಿಶ್ಚಿಯನ್ ಸಮುದಾಯ ಸಮಾಜ ರೂಪಿಸುವ ಅಡಿಗಲ್ಲು ಆಗಿದೆ. ನಿರಂತರ ಹರಿಯುವ ಜಲಧಾರೆಯಂತೆ ಎಲ್ಲಾ ಜಾತಿ ಧರ್ಮದವರೊಡನೆ ಒಳ್ಳೆಯ ಸಂಬಂದವಿರುಸುವುದೇ ಎಲ್ಲರ ಕರ್ತವ್ಯ. ಒಟ್ಟಿಗೆ ಪ್ರೀತಿಯಿಂದ ಬಾಳುವುದು ನಮ್ಮ ಗುರಿಯಾಗಲಿ” ಎಂದು ಮಂಗಳೂರು ಡಯಾಸಿಸ್‍ನ ಬಿಷಪ್ ಅತೀ ಪೂಜನೀಯ ಡಾ| ಪೀಟರ್ ಪಾವ್ಲ್ ಸಲ್ಡಾನ್ಹ, ಮೇರಮಜಲು ಪವಿತ್ರ ಕುಟುಂಬ ಇಗರ್ಜಿಯ ಕಿರು ಕ್ರಿಶ್ಚಿಯನ್ ಸಮುದಾಯಾದ ಬೆಳ್ಳಿ ಹಬ್ಬದ ಸಮಾರೋಪ ಕಾರ್ಯಕ್ರಮದಲ್ಲಿ ಮಾತಾನಾಡಿದರು.

ಮೊದಲು ಇಗರ್ಜಿಯ ಮಾಜಿ ಗುರುಗಳು, ಈಗಿನ ಗುರುಗಳಾದ ವಂದನೀಯ ಆಲ್ವಿನ್ ಡಿ’ಕುನ್ಹಾ, ಬಿಷಪ್ ಅತೀ ಪೂಜನೀಯ ಡಾ| ಪೀಟರ್ ಪಾವ್ಲ್ ಸಲ್ಡಾನ್ಹರವರ ಮುಂದಾಳತ್ವದಲ್ಲಿ ಬಲಿಪೂಜೆಯನ್ನು ನೇರವೇರಿಸಿದರು. ನಂತರ ಸಭಾ ಕಾರ್ಯಕ್ರಮದಲ್ಲಿ ಕಿರು ಕ್ರಿಶ್ಚಿಯನ್ ಸಮುದಾಯದ ಸ್ಥಾಪನೆ ಮತ್ತು ಏಳಿಗೆಗಾಗಿ ಶ್ರಮಿಸಿದ ಇಗರ್ಜಿಯ ಧರ್ಮಗುರುಗಳಾದ ವಂ| ಕ್ಸೇವಿಯರ್ ಪಿಂಟೊ, ವಂ| ಆ್ಯಂಡ್ರು ಡಿ’ಸೋಜಾ, ವಂ| ಸಿರಿಲ್ ಪಿಂಟೊ, ವಂ| ಎಡ್ವಿನ್ ಮಸ್ಕರೆಂಞಸ್, ವಂ| ಜೋಕಿಮ್ ಫೆರ್ನಾಂಡಿಸ್, ವಂ| ಬೊನಿಫಾಸ್ ಪಿಂಟೊ ಹಾಗೂ ಪ್ರಸ್ತುತ ಧರ್ಮಗುರುಗಳಾದ ವಂ| ಆಲ್ವಿನ್ ಡಿ’ಕುನ್ಹಾರವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಕಿರು ಕ್ರಿಶ್ಚಿಯನ್ ಸಮುದಾಯದ ಸಂಚಾಲಕರು ಶ್ರೀ ಜೋಸೆಫ್ ವೇಗಸ್, ಶ್ರೀ ಪ್ಯಾಟ್ರಿಕ್ ಪಿಂಟೊ, ಶ್ರೀ ಜೇಮ್ಸ್ ಲುವಿಸ್ ಮತ್ತು ಶ್ರೀಮತಿ ಫಿಲೊಮೆನಾ ಮೊಂತೆರೊ ಇವರಿಗೆ, ಹಾಗೂ ಸಂದ ವರ್ಷದಲ್ಲಿ ಬಂಗಾರ ಹಾಗೂ ಬೆಳ್ಳಿ ವಿವಾಹ ಆಚರಿಸಿದ ಇಗರ್ಜಿಯ ದಂಪತಿಗಳಿಗೆ ಸನ್ಮಾನಿಸಲಾಯಿತು.

ಪ್ರಥ್ವಿ ವಿಜ್ಞಾನ ಮಂತ್ರಾಲಯ, ದೆಹಲಿ ಇವರಿಂದ ರಾಷ್ಟ್ರ ಪ್ರಶಸ್ತಿ ವಿಜೇತ ಸ್ಥಳೀಯ ಶ್ರೀ ರೊನಾಲ್ಡ್ ಜೋನ್ ವಾಜ್ ಇವರನ್ನು ಸನ್ಮಾನಿಸಲಾಯಿತು. ವಂ| ಆಲ್ವಿನ್ ಡಿ’ಕುನ್ಹಾ ಇವರ ಮಾರ್ಗದರ್ಶನದಲ್ಲಿ ಕಿರು ಕ್ರಿಶ್ಚಿಯನ್ ಸಮುದಾಯದ ಬೆಳ್ಳಿ ಹಬ್ಬದ ವಿವಿಧ ಕಾರ್ಯಕ್ರಮಗಳು ವರ್ಷ ಪೂರ್ತಿ ಕೈಗೊಳ್ಳಲಾಯಿತು.


Spread the love