ಬಂಟ್ವಾಳ: ಮನೆ ಮೇಲೆ ಜರಿದು ಬಿದ್ದ ಗುಡ್ಡ: ಆರು ವರ್ಷದ ಮಗು ಮೃತ್ಯು

Spread the love

ಬಂಟ್ವಾಳ:  ಮನೆಯೊಂದರ ಮೇಲೆ ಸಮೀಪ ಗುಡ್ಡವೊಂದು ಜರಿದು, ಮನೆಯೊಳಗೆ ಮಲಗಿದ್ದ 6 ವರ್ಷದ ಮಗು ಮೃತಪಟ್ಟ ಘಟನೆ ಗುರುವಾರ ರಾತ್ರಿ ಫರಂಗಿಪೇಟೆ ಸಮೀಪ ನ48023599ಡೆದಿದೆ. ಮೃತ ಮಗುವನ್ನು ಪುದು ಗ್ರಾಮದ ಅಮ್ಮೆಮಾರ್ ಕುಂಜತ್‌ಕಳ ನಿವಾಸಿ ಮಹಮ್ಮದ್ ಹನೀಫ್ ಎಂಬವರ ಪುತ್ರ ಮಹಮ್ಮದ್ ಅರ್ಶದ್ (6) ಗುರುತಿಸಲಾಗಿದೆ.

ರಾತ್ರಿ 10ರ ಸುಮಾರಿಗೆ ಸುರಿದ ಭಾರಿ ಮಳೆಗೆ ಹನೀಫ್ ಅವರ ಮನೆಯ ಸಮೀಪದ ಗುಡ್ಡ ಜರಿಯಿತು. ಮನೆ ಮಂದಿ ಹೊರಗೆ ಬಂದು ನೋಡುತ್ತಿದ್ದಂತೆಯೇ, ಮನೆಯ ಒಂದು ಪಾರ್ಶ್ವಕ್ಕೆ ಗುಡ್ಡದ ಮಣ್ಣು ಜರಿದು, ಮನೆಗೆ ಭಾಗಶಃ ಹಾನಿಯಾಗಿದೆ. ಮನೆಯ ಕೊಠಡಿಯಲ್ಲಿ ಮಲಗಿದ್ದ ಅರ್ಶದ್ ಮೇಲೆಯೇ ಮಣ್ಣು ಬಿದ್ದು, ದೇಹ ಜಖಂಗೊಂಡಿದೆ.

ಘಟನಾ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಹಾಗೂ ಗ್ರಾಮಾಂತರ ಠಾಣೆ ಪೊಲೀಸರು ಮಗುವನ್ನು ಮೇಲೆತ್ತಿದರು. ಆದರೆ ಅದಾಗಲೇ ಮಗುವಿನ ಮೇಲೆ ಒಂದಡಿಯಷ್ಟು ಮಣ್ಣು ಬಿದ್ದಿದ್ದು, ಉಸಿರುಗಟ್ಟಿ ಅಸ್ವಸ್ಥಗೊಂಡಿತ್ತು ಎಂದು ಸ್ಥಳೀಯ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಅಸ್ವಸ್ಥಗೊಂಡ ಮಗುವನ್ನು ತಕ್ಷಣ ಮಂಗಳೂರು ಖಾಸಗಿ ಆಸ್ಪತ್ರೆಗೆ ಸಾಗಿಸಲಾದರೂ, ಮಗು ದಾರಿ ಮಧ್ಯೆ ಮೃತಪಟ್ಟಿರುವುದಾಗಿ ವೈದ್ಯರು ಪ್ರಕಟಿಸಿದರು. ಬಳಿಕ ಮಗುವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಿ, ಮರಣೋತ್ತರ ಪರೀಕ್ಷೆ ನಡೆಸಿ ಮಗುವಿನ ಅಂತ್ಯ ಸಂಸ್ಕಾರ ನಡೆಸಲಾಯಿತು.


Spread the love