ಬಡವರ ಕಣ್ಣೀರೊರೆಸುವ ಕಾರ್ಯಕ್ಕಿಂತ ಮಿಗಿಲಾದ ಸೇವೆ ಇನ್ನೊಂದಿಲ್ಲ : ಬಿಷಪ್ ಜೆರಾಲ್ಡ್ ಲೋಬೊ

Spread the love

ಬಡವರ ಕಣ್ಣೀರೊರೆಸುವ ಕಾರ್ಯಕ್ಕಿಂತ ಮಿಗಿಲಾದ ಸೇವೆ ಇನ್ನೊಂದಿಲ್ಲ : ಬಿಷಪ್ ಜೆರಾಲ್ಡ್ ಲೋಬೊ

ಉಡುಪಿ: ಬಡವರ ಕಣ್ಣೀರೊರೆಸುವ ಕಾರ್ಯಕ್ಕಿಂತ ಮಿಗಿಲಾದ ಸೇವೆ ಇನ್ನೊಂದಿಲ್ಲ ಇದು ಪವಿತ್ರ ಧರ್ಮಸಭೆಯ ಆಶಯವೂ ಕೂಡ ಆಗಿದ್ದು ಪ್ರತಿಯೊಬ್ಬರು ಇನ್ನೊಬ್ಬರ ನೋವಿಗೆ ಸ್ಪಂದಿಸುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಉಡುಪಿ ಕಥೊಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಅಭಿಪ್ರಾಯಪಟ್ಟರು.

ಅವರು ಭಾನುವಾರ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ಸಭಾಂಗಣದಲ್ಲಿ ಮೂತ್ರಪಿಂಡ ವೈಫಲ್ಯದಿಂದ ನರಳುತ್ತಿರುವ, ಉಡುಪಿ ಜಿಲ್ಲೆಯ ಅರ್ಹ ಬಡರೋಗಿಗಳಿಗಾಗಿ 50% ರಿಯಾಯತಿ ದರದಲ್ಲಿ ಡಯಾಲಿಸಿಸ್ ಚಿಕಿತ್ಸೆ ಪಡೆಯುವ ನಿಟ್ಟಿನಲ್ಲಿ ಕಥೊಲಿಕ್ ಸಭಾ ಉಡುಪಿ ಪ್ರದೇಶ ಹಾಗೂ ದಾನಿ ಜೋಸೆಫ್ ಮಿನೇಜಸ್ ಸಾಸ್ತಾನ ಇವರ ನೇತೃತ್ವದಲ್ಲಿ ಮತ್ತು ಫ್ರೀಡಾ ರೇಗೊ ಮತ್ತು ಬೆಸಿಲ್ ಪಿಂಟೊ ಇವರ ಸಹಕಾರದೊಂದಿಗೆ ಟ್ರಿನಿಟಿ ಮೆಡಿಕೇರ್ ಸರ್ವಿಸ್ ಯೋಜನೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಬಡವರ ನೋವಿಗೆ ಎಷ್ಟು ನಾವು ದನಿಯಾಗುತ್ತೇವೆಯೋ ಅಷ್ಟು ನಾವು ದೇವರ ಪ್ರೀತಿಯನ್ನು ಗಳಿಸುವಂತವರಾಗುತ್ತೇವೆ. ಸಮಾಜದ ಅತ್ಯಂತ ಬಡವರ, ನೊಂದವರ ಕಣ್ಣೊರೆಸಿದಾಗ ಅಂತಹ ಸೇವೆ ದೇವರನ್ನು ತಲುಪುತ್ತದೆ. ಇಂತಹ ಸೇವೆ ಜೊಸೇಫ್ ಮಿನೇಜಸ್ ಮತ್ತವರ ತಂಡ ಕಥೊಲಿಕ್ ಸಭಾ ಸಂಘಟನೆಯ ಮೂಲಕ ಮಾಡಲು ಮುಂದೆ ಬಂದಿರುವುದು ಶ್ಲಾಘನೀಯ ಸಂಗತಿಯಾಗಿದೆ. ಈ ಸೇವೆ ನಿರಂತರವಾಗಿ ನೆರವೇರಲಿ ಎಂದು ಶುಭಹಾರೈಸಿದರು.

ಆಶೀರ್ವಚನ ನೀಡಿದ ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ|ಡೆನಿಸ್ ಡೆಸಾ ಮಾತನಾಡಿ ತನ್ನ ಸೇವೆಯ ಮೂಲಕ ಇನ್ನೊಬ್ಬರ ಜೀವನದಲ್ಲಿ ಸಂತೋಷವನ್ನು ಕಾಣುವುದು ಪ್ರತಿಯೊಬ್ಬರ ಮಾನವನ ಉದ್ದೇಶವಾದಾಗ ಸಮಾಜದಲ್ಲಿ ಬಡವರೂ ಕೂಡ ನೆಮ್ಮದಿಯ ಬದುಕು ಕಾಣಲು ಸಾಧ್ಯವಿದೆ. ಪ್ರತಿಯೊಬ್ಬರಿಗೂ ಜನನ ಉಚಿತ ಮರಣ ಖಚಿತ ಆದರೆ ಅವೆರಡರ ನಡುವಿನ ನಮ್ಮ ಜೀವನ ಪರರ ಸೇವೆಯಲ್ಲಿ ವಿನಿಯೋಗಿಸಿದಾಗ ಸಾರ್ಥಕತೆ ಕಾಣುತ್ತದೆ ಎಂದರು.

ನಗರದ ಹೆಸರಾಂತ ವೈದ್ಯರಾದ ಡಾ|ಮೇಘಾ ಪೈ ಮಾತನಾಡಿ ಮೊದಲಿನ ಆಹಾರ ಪದ್ಧತಿಗೂ ಇಂದಿನ ಆಹಾರ ಪದ್ಧತಿಗೂ ವ್ಯತ್ಯಾಸಗೊಂಡು ಆರೋಗ್ಯದಲ್ಲಿನ ವ್ಯವಸ್ಥೆಯೂ ಸಹ ವ್ಯತ್ಯಾಸಗೊಂಡಿದೆ. ಇಂದಿನ ಜಂಕ್ ಫುಡ್ ಆಹಾರ ಶೈಲಿಯಿಂದಾಗಿ ಹೃದಯ ಸಂಬಂಧಿ ತೊಂದರೆ, ಡಯಾಬಿಟಿಸ್, ಕಿಡ್ನಿ ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗಿದೆ. ಆದ್ದರಿಂದ ಆಹಾರ ಪದ್ದತಿಯಲ್ಲಿ ಹಿತಮಿತವನ್ನು ಕಾಪಾಡಿಕೊಳ್ಳುವುದರಿಂದ ಮೂತ್ರಪಿಂಡದಂತಹ ಸಮಸ್ಯೆಗಳಿಂದ ದೂರವಿರಲು ಸಾಧ್ಯವಿದೆ ಎಂದರು.

ಕಾರ್ಯಕ್ರಮಲ್ಲಿ ಕಥೊಲಿಕ್ ಸಭಾ ಉಡುಪಿ ಪ್ರದೇಶ ವತಿಯಿಂದ ಹೊರತಂದ ರಕ್ತದಾನಿಗಳ ವಿವರವುಳ್ಳ ಡೈರಕ್ಟರಿ, ಮುಂದಿನ ವರ್ಷದಲ್ಲಿ ಆರೋಗ್ಯ ಯೋಜನೆಗಳ ಸಹಾಯಾರ್ಥವಾಗಿ ಹಮ್ಮಿಕೊಂಡ ಜೋಶಲ್ ಅವರ ಸಂಗೀತ ಕಾರ್ಯಕ್ರಮದ ಪೋಸ್ಟರ್ ನ್ನು ಧರ್ಮಾಧ್ಯಕ್ಷರು ಅನಾವರಣಗೊಳಿಸಿದರು.

ಸಾಂಕೇತಿಕವಾಗಿ ಮೂರು ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಗುರುತಿನ ಕಾರ್ಡ್ ಗಳನ್ನು ಹಸ್ತಾಂತರಿಸಲಾಯಿತು. ಜೊಸೇಫ್ ಮಿನೇಜಸ್ ಅವರು ಯೋಜನೆಯನ್ನು ಆರಂಭಿಸಿದ ಉದ್ದೇಶವನ್ನು ಸಭೆಗೆ ವಿವರಿಸಿದರು

ಇದೇ ವೇಳೆ ಕಥೊಲಿಕ್ ಸಭಾ ವತಿಯಿಂದ ಟ್ರಿನಿಟಿ ಮೆಡಿಕೇರ್ ಸರ್ವಿಸ್ ಯೋಜನೆಯ ರೂವಾರಿಗಳಾದ ಜೊಸೇಫ್ ಮಿನೇಜಸ್ ಸಾಸ್ತಾನ ಮತ್ತು ಬೆಸಿಲ್ ಪಿಂಟೊ ದಂಪತಿಗಳನ್ನು ಹಾಗೂ ಸ್ನೇಹಾಲಯ ಆಶ್ರಮದ ನಿರ್ದೇಶಕರಾದ ಜೋಸೇಫ್ ಕ್ರಾಸ್ತಾ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಥೊಲಿಕ್ ಸಭಾ ಉಡುಪಿ ಪ್ರದೇಶ ಅಧ್ಯಕ್ಷರಾದ ರೊನಾಲ್ಡ್ ಆಲ್ಮೇಡಾ ವಹಿಸಿದ್ದರು. ವಾಗ್ಮಿ ರಫೀಕ್ ಮಾಸ್ಟರ್ ಮಂಗಳೂರು, ಕಥೊಲಿಕ್ ಸಭಾ ಉಡುಪಿ ಪ್ರದೇಶ ನಿಕಟಪೂರ್ವ ಅಧ್ಯಕ್ಷ ಸಂತೋಷ್ ಕರ್ನೆಲಿಯೊ, ಕೋಶಾಧಿಕಾರಿ ಉರ್ಬಾನ್ ಲೂವಿಸ್ ಹಾಗೂ ಇತರರು ಉಪಸ್ಥಿತರಿದ್ದರು.

ರೊನಾಲ್ಡ್ ಆಲ್ಮೇಡಾ ಸ್ವಾಗತಿಸಿ, ಜೊಯೇಲ್ ಆಲ್ಮೇಡಾ ವಂದಿಸಿದರು, ಆಲ್ವಿನ್ ಅಂದ್ರಾದ್ರೆ ಕಾರ್ಯಕ್ರಮ ನಿರೂಪಿಸಿದರು.

ಉಡುಪಿ ಜಿಲ್ಲಾ ವ್ಯಾಪ್ತಿಯ ನಿಗದಿತ ಅಸ್ಪತ್ರೆಗಳಲ್ಲಿ ಈ ಸೌಲಭ್ಯವನ್ನು ಆರಂಭಿಸಲಾಗಿದ್ದು ಪ್ರಾಥಮಿಕ ಹಂತದಲ್ಲಿ ಕಲ್ಯಾಣಪುರ ಸಂತೆಕಟ್ಟೆಯ ಗೊರೆಟ್ಟಿ ಆಸ್ಪತ್ರೆ ಮತ್ತು ಬ್ರಹ್ಮಾವರದ ಮಹೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ವ್ಯವಸ್ಥೆಯನ್ನು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಕಾರ್ಕಳ ಮತ್ತು ಕುಂದಾಪುರದ ನಿಗದಿತ ಆಸ್ಪತ್ರೆಗಳಿಗೆ ಕೂಡ ಸೇವೆಯನ್ನು ವಿಸ್ತರಿಸಲಾಗುವುದು.

ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಡಯಾಲಿಸಿಸ್ ಅಗತ್ಯವಿರುವ ಬಡ ರೋಗಿಗಳು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು. ಈ ಯೋಜನೆ ಎಲ್ಲಾ ಧರ್ಮ ಮತ್ತು ವರ್ಗದವರಿಗೂ ಕೂಡ ಲಭ್ಯವಾಗಿದ್ದು ಸ್ಥಳೀಯ ಚರ್ಚಿನ ಕಥೊಲಿಕ್ ಸಭಾ ಘಟಕದ ಶಿಫಾರಸು ಅರ್ಜಿಯೊಂದಿಗೆ ಯೋಜನೆಯ ಪ್ರಯೋಜನ ಪಡೆಯಲು ಅವಕಾಶವಿದೆ. ಡಯಾಲಿಸಿಸ್ ರೋಗಿಗಳಿಗೆ ಯೋಜನೆಗೆ ನೊಂದಣಿಯಾದ ಬಳಿಕ ಅಧಿಕೃತ ಗುರುತು ಪತ್ರ ನೀಡಲಾಗುತ್ತಿದ್ದು ಅದರ ಆಧಾರದಲ್ಲಿ ನಿರಂತರವಾಗಿ 50% ರಿಯಾಯತಿ ದರದಲ್ಲಿ ಚಿಕಿತ್ಸೆಯನ್ನು ನಿಗದಿಪಡಿಸಿದ ಆಸ್ಪತ್ರೆಯಲ್ಲಿ ಪಡೆಯಬಹುದಾಗಿದೆ. ಡಯಾಲಿಸಿಸ್ ಸೇವೆಗೆ ತಗುಲುವ 50% ವೆಚ್ಚವನ್ನು ರೋಗಿಗಳು ಭರಿಸಬೇಕಾಗಿದ್ದು ಉಳಿದ 50% ವೆಚ್ಚವನ್ನು ಜೋಸೆಫ್ ಮಿನೇಜಸ್ ಮತ್ತು ಅವರ ತಂಡ ಕಥೊಲಿಕ್ ಸಭಾ ಉಡುಪಿ ಪ್ರದೇಶದ ಮುಖಾಂತರ ಆಸ್ಪತ್ರೆಗಳಿಗೆ ಭರಿಸಲಿದೆ.


Spread the love
Subscribe
Notify of

0 Comments
Inline Feedbacks
View all comments