ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತುಳು ಚಿತ್ರದಲ್ಲಿ ಅಭಿನಯಿಸುವೆ; ನಟ ಸುನೀಲ್ ಶೆಟ್ಟಿ

Spread the love

ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತುಳು ಚಿತ್ರದಲ್ಲಿ ಅಭಿನಯಿಸುವೆ; ನಟ ಸುನೀಲ್ ಶೆಟ್ಟಿ

ಉಡುಪಿ: ಸದ್ಯದಲ್ಲಿಯೇ ನಾನು ತುಳು ಚಿತ್ರದಲ್ಲಿ ಅಭಿನಯಿಸಲಿದ್ದು, ಈ ಚಿತ್ರದಿಂದ ಬರುವ ಹಣವನ್ನು ಸಮುದಾಯದ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡಲು ನಿರ್ಧರಿಸಿದ್ದೇನೆ ಎಂದು ಬಾಲಿವುಡ್ ನಟ ಸುನೀಲ್ ಶೆಟ್ಟಿ ತಿಳಿಸಿದರು.

ಜಾಗತಿಕ ಬಂಟ ಸಂಘಗಳ ಒಕ್ಕೂಟ, ಉಡುಪಿ ಬಂಟರ ಸಂಘಗಳ ಸಹಯೋಗದಲ್ಲಿ ಭಾನುವಾರ ನಗರದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾ ಭವನದಲ್ಲಿ ಆಯೋಜಿಸಿದ್ದ ವಿಶ್ವ ಬಂಟರ ಸಮ್ಮೇಳನದ ‘ತಾರ ಸಮ್ಮಿಲನ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಾನು ಮಾತ್ರವಲ್ಲದೇ, ಶಿಲ್ಪ ಶೆಟ್ಟಿ, ಐಶ್ವರ್ಯ ರೈ, ರೋಹಿತ್ ಶೆಟ್ಟಿ ಅವರು ಈ ಕಾರ್ಯಕ್ಕೆ ಕೈ ಜೋಡಿಸಲಿದ್ದಾರೆ. ನಿರ್ಮಾಪಕರು ಯಾರೇ ಅಗಿರಲಿ, ನಾನು ಸಮುದಾಯದ ಅಭಿವೃದ್ಧಿಗೆ ಈ ಕಾರ್ಯ ಮಾಡಲು ಸಿದ್ಧನಿದ್ದೇನೆ ಎಂದರು.

ನಾನು ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಆದರೆ ಕಡಿಮೆ ಸಮಯದಲ್ಲಿ ತತ್ವರಿತವಾಗಿ ಸಂಯೋಜಿಸಿದ ಇಷ್ಟು ದೊಡ್ಡ ಸಮಾರಂಭವನ್ನು ನಾನು ಎಲ್ಲೂ ನೋಡಿಲ್ಲ. ನನ್ನ ತಂದೆಯ ಅನಾರೋಗ್ಯದ ಕಾರಣದಿಂದಾಗಿ ನಾನು ಯಾವುದೇ ಹಿಂದಿ ಸಿನಿಮಾದಲ್ಲಿ ನಟಿಸಿಲ್ಲ. ನಾಲ್ಕು ವರ್ಷದ ದೀರ್ಘ ಬಿಡುವಿನ ಬಳಿಕ ಕನ್ನಡ ಸಿನಿಮಾವೊಂದರ ಮೂಲಕ ಮತ್ತೆ ನಟನೆಯನ್ನು ಶುರು ಮಾಡಿದ್ದೇನೆ. ಇನ್ನು ಹಲವು ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿದೆ. ನಾನು ಸಿನಿಮಾದಲ್ಲಿ ನಟಿಸಲು ಮರಳಿ ಬಂದಿದ್ದು, ನನ್ನನ್ನು ಜನರು ಮತ್ತೆ ಪ್ರೋತ್ಸಾಹಿಸುತ್ತಾರೆ ಎಂಬ ವಿಶ್ವಾಸವಿದೆ. ದುರ್ಗಪರಮೇಶ್ವರಿ ಅಮ್ಮನವರ ಆರ್ಶಿವಾದದಿಂದ ಚಲನಚಿತ್ರ ರಂಗದಲ್ಲಿ ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು.

ಇಂದಿನ ಮಕ್ಕಳು ತುಂಬಾ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಇದರಿಂದಾಗಿ ಅವರು ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಿದ್ದಾರೆ ಎಂಬ ಸುದ್ದಿಗಳು ಬರುತ್ತಿವೆ. ಯಾವ ಕುಟುಂಬದಲ್ಲಿ ಮಕ್ಕಳಿಗೆ ಪೋಷಕರ ಪ್ರೋತ್ಸಾಹ ಸಿಗುವುದಿಲ್ಲವೋ ಅಂತಹ ಕುಟುಂಬದಲ್ಲಿ ಮಕ್ಕಳು ಒತ್ತಡಕ್ಕೆ ಒಳಗಾಗುತ್ತಾರೆ. ಆದರೆ ಬಂಟ ಸಮುದಾಯದ ಜನರಲ್ಲಿರುವಷ್ಟು ಆತ್ಮಸ್ಥೈರ್ಯ ಇತರೆ ಯಾವುದೇ ಸಮಾಜದಲ್ಲಿ ಇಲ್ಲ ಎಂದು ಹೇಳಿದರು.

ಬಂಟ ಸಮುದಾಯದ ಹಿರಿಯರು ಹಿಂದೆ ಮುಂಬೈಗೆ ಹೋದಂತಹ ಸಂದರ್ಭದಲ್ಲಿ ಅವರು ಅನೇಕ ಸವಾಲುಗಳನ್ನು ಎದುರಾಗಿತ್ತು. ಆದರೆ ಅವರು ಎದೆಗುಂದದೆ ಆ ಸವಾಲುಗಳನ್ನು ಎದುರಿಸಿ ಮನೆಯನ್ನು ಕಟ್ಟಿ ಸ್ವಂತ ಉದ್ಯೋಗವನ್ನು

ಆರಂಭಿಸಿದರು. ಇದು ಬಂಟರ ನಿಜವಾದ ತಾಕತ್ತು. ಮುಂಬಯಿಯ ಹೆಚ್ಚಿನ ಹೋಟೇಲ್ ಉದ್ಯಮಿಗಳು ಬಂಟರೆಂದರೆ ನಂಬಲು ಕಷ್ಟವಾಗುತ್ತದೆ,ಆದರೆ ಅದು ಸತ್ಯ. ಮುಂಬಯಿ ಮಾತ್ರವಲ್ಲದೆ ದೂರದ ದೇಶಗಳಿಗೆ ತೆರಳಿನ ಅಲ್ಲಿನ ಸವಾಲು ಎದುರಿಸಿ ಉತ್ತಮವಾದ ಜೀವನ ನಡೆಸುತ್ತಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಟ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ರಾಜೇಶ್ ಶೆಟ್ಟಿ,ಶೈನ್ ಶೆಟ್ಟಿ, ಆಶ್ರಿತ ಶೆಟ್ಟಿ, ದಿಲೀಪ್ ಶೆಟ್ಟಿ, ಆರಾಧ್ಯ ಶೆಟ್ಟಿ, ಪ್ರತೀಕಾ ಶೆಟ್ಟಿ, ರಾಘವೇಂದ್ರ ರೈ, ದಯಾ ಶೆಟ್ಟಿ, ಸಂದೀಪ್ ಶೆಟ್ಟಿ, ರಕ್ಷಿತ್ ಶೆಟ್ಟಿ ಕುಂದಾಪುರ, ಮಂಜು ರೈ, ವಿಜಯ ಕುಮಾರ್ ರೈ, ಗುರುಕಿರಣ್, ಆಸ್ತಿಕ್ ಪವಿತ್ರ ಶೆಟ್ಟಿ ಸೇರಿದಂತೆ ಅನೇಕ ಸಿನಿಮ ನಟ– ನಟಿಯರು ಭಾಗವಹಿಸಿದರು.


Spread the love