ಬಶೀರ್  ಕೊಲೆಯಲ್ಲಿ ಭಾಗಿಯಾದ ಇನ್ನಿಬ್ಬರು ಆರೋಪಿಗಳ ಬಂಧನ

Spread the love

ಬಶೀರ್  ಕೊಲೆಯಲ್ಲಿ ಭಾಗಿಯಾದ ಇನ್ನಿಬ್ಬರು ಆರೋಪಿಗಳ ಬಂಧನ

ಮಂಗಳೂರು: ಮಂಗಳೂರು ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೊಟ್ಟಾರ ಚೌಕಿ  ಬಳಿಯಲ್ಲಿ ಅಬ್ದುಲ್ ಬಶೀರ್ ಎಂಬವರ ಕೊಲೆಯಲ್ಲಿ ಭಾಗಿಯಾದ ಇನ್ನಿಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಮಂಗಳೂರು ನಗರ ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.

ದಿನಾಂಕ: 03-01-2018 ರಂದು ರಾತ್ರಿ 10-00 ಗಂಟೆಗೆ ಮಂಗಳೂರು ನಗರದ ಕೊಟ್ಟಾರ ಚೌಕಿ ಬಳಿ ಫಾಸ್ಟ್ ಪುಡ್  ವ್ಯಾಪಾರವನ್ನು ನಡೆಸುತ್ತಿದ್ದ ಅಬ್ದುಲ್ ಬಶೀರ್ ಎಂಬವರು ತನ್ನ ಫಾಸ್ಟ್ ಪುಡ್ ಹೊಟೇಲ್ ನ್ನು ಬಂದ್ ಮಾಡಿ ಮನೆಗೆ ಹೋಗುವಷ್ಟರಲ್ಲಿ ಬೈಕ್ ನಲ್ಲಿ ಬಂದ ಆರೋಪಿಗಳು ಅಬ್ದುಲ್ ಬಶೀರ್ ನನ್ನು ಮರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದು, ಗಂಭೀರವಾಗಿ ಗಾಯಗೊಂಡ ಅಬ್ದುಲ್ ಬಶೀರ್ ರವರು ಚಿಕಿತ್ಸೆ ಬಗ್ಗೆ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಈ ಬಗ್ಗೆ ಅಬ್ದುಲ್ ಬಶೀರ್ ರವರ ಅಣ್ಣ ಅಬ್ದುಲ್ ಲತೀಫ್ ರವರು ನೀಡಿದ ದೂರಿನಂತೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ. ಈ ಮಧ್ಯೆ ಗಂಭೀರ ಗಾಯಗೊಂಡ ಅಬ್ದುಲ್ ಬಶೀರ್ ರವರು ಚಿಕಿತ್ಸೆಯಲ್ಲಿದ್ದ ಸಮಯ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 07-01-2018 ರಂದು ಮೃತಪಟ್ಟಿದ್ದರು.

ಈ ಕೊಲೆ ಕೃತ್ಯದಲ್ಲಿ ಭಾಗಿಯಾದ 4 ಮಂದಿ ಆರೋಪಿಗಳಾದ  ಶ್ರೀಜಿತ್ ಪಿ.ಕೆ @ ಶ್ರೀಜು, ಕಿಶನ್ ಪೂಜಾರಿ, ಧನುಷ್ ಪೂಜಾರಿ, ಸಂದೇಶ್ ಕೋಟ್ಯಾನ್ ಎಂಬವರನ್ನು ಈಗಾಗಲೇ ಮಂಗಳೂರು ಸಿಸಿಬಿ ಪೊಲೀಸರು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ಆರೋಪಿಗಳನ್ನು ಸಮಗ್ರ ತನಿಖೆ ನಡೆಸಿದಾಗ  ಈ ಕೊಲೆ ಕೃತ್ಯದಲ್ಲಿ ಇತರರು ಕೂಡಾ ಭಾಗಿಯಾದ ಬಗ್ಗೆ ತಿಳಿದುಬಂದಂತೆ ಮಂಗಳೂರು ಸಿಸಿಬಿ ಪೊಲೀಸರು ಈ ಕೊಲೆ ಕೃತ್ಯದಲ್ಲಿ ಭಾಗಿಯಾದ  ಕಾಸರಗೋಡು ನಿವಾಸಿ ಲತೀಶ್ (24) ಮತ್ತು ಪುಷ್ಪರಾಜ್ (23) ಎಂಬವರನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮಕ್ಕಾಗಿ ಕಾವೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿರುತ್ತದೆ.

ಆರೋಪಿಗಳ ಪತ್ತೆ ಕಾರ್ಯದಲ್ಲಿ ಮಂಗಳೂರು ಸಿಸಿಬಿ ಪೊಲೀಸ್ ಇನ್ಸ್ ಪೆಕ್ಟರ್‌ ಶಾಂತಾರಾಮ್, ಪಿಎಸ್ಐ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.


Spread the love