ಬಾಲ್ಯವಿವಾಹ – ಅಪರಾಧಿಗಳಿಗೆ ಕಠಿಣ ಶಿಕ್ಷೆ

Spread the love

ಬಾಲ್ಯವಿವಾಹ – ಅಪರಾಧಿಗಳಿಗೆ ಕಠಿಣ ಶಿಕ್ಷೆ

ಮಂಗಳೂರು : ಬಾಲ್ಯವಿವಾಹ ನಿಷೇಧ ಕಾಯ್ದೆ 2006 ತಿದ್ದುಪಡಿ 2016 ರ ಪ್ರಕಾರ 18 ವರ್ಷದೊಳಗಿನ ಯಾವುದೇ ಹೆಣ್ಣು ಮಕ್ಕಳಿಗೆ ಹಾಗೂ 21 ವರ್ಷದೊಳಗಿನ ಯಾವುದೇ ಗಂಡು ಮಕ್ಕಳಿಗೆ ಮದುವೆಯಾದಲ್ಲಿ ಅದನ್ನು ಬಾಲ್ಯವಿವಾಹ ಎಂದು ಪರಿಗಣಿಸಲಾಗಿದೆ.

ಈ ಕಾಯ್ದೆ ಪ್ರಕಾರ ಅಪ್ರಾಪ್ತ ವಯಸ್ಸಿನಲ್ಲಿ ಮದುವೆ ಮಾಡಿಸಿದರೆ ಕೇವಲ ಹುಡುಗ, ಹುಡುಗಿಯರ ತಂದೆ ತಾಯಿ ಮಾತ್ರವಲ್ಲದೆ ಮದುವೆ ಮಾಡಿಸಿದ ಪುರೋಹಿತರು, ಧಾರ್ಮಿಕ ಮುಖಂಡರು, ಸಂಬಂಧಿಗಳು, ಮದುವೆ ಮಾಡಲು ಉತ್ತೇಜನ ನೀಡಿದವರು, ಭಾಗವಹಿಸದವರು ಎಲ್ಲರೂ ಅಪರಾಧಿಗಳಾಗುತ್ತಾರೆ. ಅಂತಹವರು ಕನಿಷ್ಠ ಒಂದು ವರ್ಷದಿಂದ ಗರಿಷ್ಠ ಎರಡು ವರ್ಷದವರೆಗೆ ಜೈಲು ಶಿಕ್ಷೆ ಹಾಗೂ ಒಂದು ಲಕ್ಷ ರೂ ದಂಡದ ಶಿಕ್ಷೆಗೆ ಗುರಿಯಾಗುತ್ತಾರೆ.

ಮದುವೆ ಆಮಂತ್ರಣ ಮುದ್ರಿಸುವ ಮುದ್ರಣ ಸಂಸ್ಥೆಗಳು ಮದುವೆ ಆಮಂತ್ರಣ ಮುದ್ರಿಸುವ ಮೊದಲು ವಧು-ವರರ ವಯಸ್ಸಿನ ಬಗ್ಗೆ ಖಾತ್ರಿ ಪಡಿಸಿಕೊಳ್ಳಲು ದಾಖಲೆಗಳನ್ನು ಇಟ್ಟುಕೊಳ್ಳಬೇಕು. ಒಂದು ವೇಳೆ ಮದುವೆಯು ಬಾಲ್ಯವಿವಾಹವೆಂದು ಕಂಡು ಬಂದಲ್ಲಿ ಮದುವೆ ಆಮಂತ್ರಣ ಮುದ್ರಿಸಿದ ಮುದ್ರಣ ಸಂಸ್ಥೆಗಳನ್ನು ಕೂಡಾ ತಪ್ಪಿತಸ್ಥರೆಂದು ಪರಿಗಣಿಸಿ ಶಿಕ್ಷೆ ವಿಧಿಸಲು ಈ ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ.

ಮದುವೆ ನಡೆಸುವ ಮಠ/ಚರ್ಚ್/ಮಸೀದಿಗಳ ಧಾರ್ಮಿಕ ಮುಖಂಡರು, ಸಾಮೂಹಿಕ ವಿವಾಹಗಳನ್ನು ನೆರವೇರಿಸು ಆಯೋಜಕರು, ಕಲ್ಯಣ ಮಂಟಪಗಳ ವ್ಯವಸ್ಥಾಪಕರು ಕೂಡಾ ಮದುವೆ ಆಗುವ ಹುಡುಗ, ಹುಡುಗಿಯರ ವಯಸ್ಸಿನ ದಾಖಲೆಗಳನ್ನು ಪಡೆದುಕೊಂಡು ಖಚಿತ ಪಡಿಸಿಕೊಂಡ ನಂತರವೇ ಮದುವೆಗೆ ಸ್ಥಳ ಮತ್ತು ದಿನಾಂಕ ನಿಗದಿಪಡಿಸಲು ಒಪ್ಪಿಕೊಳ್ಳಬೇಕು. ಒಂದು ವೇಳೆ ನಡೆಸಂತಹ ಮದುವೆಯು ಬಾಲ್ಯವಿವಾಹವೆಂದು ನಂತರ ತಿಳಿದಲ್ಲಿ ಸಂಬಂಧ ಪಟ್ಟವರನ್ನು ನೇರ ಹೊಣೆಗಾರರನ್ನಾಗಿ ಮಾಡಿ ಶಿಕ್ಷೆಗೆ ಒಳಪಡಿಸಲು ಕಾಯ್ದೆಯನ್ನು ಅವಕಾಶ ಕಲ್ಪಿಸಲಾಗಿದೆ.

ಇಲಾಖೆಯ ಅಧಿಕಾರಿಗಳು ಮದುವೆ ನಡೆಯುವ ಸಂಸ್ಥೆ/ಕಲ್ಯಾಣ ಮಂಟಪಗಳಿಗೆ ದಾಖಲೆಗಳನ್ನು ಪರಿಶೀಲಿಸಲು ಬಂದಾಗ ಸೂಕ್ತ ದಾಖಲೆಗಳನ್ನು ಒದಗಿಸಬೇಕು. ಈ ಬಗ್ಗೆ ಜಿಲ್ಲೆಯ ಎಲ್ಲಾ ಧಾರ್ಮಿಕ ಸಂಸ್ಥೆಗಳಿಗೆ, ಕಲ್ಯಾಣ ಮಂಟಪಗಳಿಗೆ ಹಾಗೂ ಮುದ್ರಣ ಸಂಸ್ಥೆಗಳಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಂದ ಈಗಾಗಲೇ ವಿಶೇಷ ಸೂಚನಾ ಪತ್ರಗಳನ್ನು ಹೊರಡಿಸಲಾಗಿದೆ.

ಬಾಲ್ಯವಿವಾಹವು ಒಂದು ಅಭಿವೃದ್ಧಿಗೆ ಮಾರಕವಾಗಿರುವ ಸಮಸ್ಯೆ. ಬಾಲ್ಯವಿವಾಹವನ್ನು ತಡೆಗಟ್ಟುವುದು ನಮ್ಮೆಲ್ಲರ ಕರ್ತವ್ಯ. ಈ ಬಗ್ಗೆ ವ್ಯಾಪಕ ಪ್ರಚಾರ ನೀಡಿ ಈ ಪಿಡುಗನ್ನು ನಿವಾರಿಸಲು ಸಹಕರಿಸಬೇಕಾಗಿ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದ.ಕ.ಜಿಲ್ಲೆ., ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.


Spread the love