ಬಿಜೆಪಿ ಟಿಕೆಟ್ ಸಿಗದಿದ್ದರೆ ಪಕ್ಷೇತರನಾಗಿ ಸ್ಪರ್ಧಿಸುವುದು ಖಂಡಿತ ; ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ ಶೀರೂರು ಸ್ವಾಮೀಜಿ
ಉಡುಪಿ: ವಿಧಾನಸಭೆ ಚುನಾವಣೆಗೆ ಬಿಜೆಪಿ ಟಿಕೆಟ್ ಸಿಗದಿದ್ದರೆ ಪಕ್ಷೇತರನಾಗಿ ಸ್ಪರ್ಧಿಸುವುದು ಖಂಡಿತ ಎಂದು ಉಡುಪಿಯ ಅಷ್ಟಮಠಗಳಲ್ಲೊಂದಾದ ಶೀರೂರು ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರು ಘೋಷಿಸಿದ್ದಾರೆ.

ಅವರು ಭಾನುವಾರ ಮಲ್ಪೆ ವಂಡಭಾಂಡೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದರು.
ಉಡುಪಿಯ ಮತದಾರರಲ್ಲಿ ಕೇವಲ 60-65 ಶೇಕಡಾ ಮಾತ್ರ ಮತದಾನ ಮಾಡುತ್ತಿದ್ದು ಅದು 100 ಶೇಕಡಾಕ್ಕೆ ತಲುಪಬೇಕು ಎನ್ನುವುದು ನಮ್ಮ ಪ್ರಮುಖ ಉದ್ದೇಶವಾಗಿದೆ. ಈ ಸಂಬಂಧ ದೇವರಲ್ಲಿ ಪ್ರಾರ್ಥನೆ ಮಾಡಿ ಇಲ್ಲಿಂದ ನಮ್ಮ ಪ್ರಚಾರವನ್ನು ಆರಂಭಿಸಲು ನಿರ್ಧರಿಸಿದ್ದೇವೆ. ಮೊದಲು ಮತದಾರರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವುದು ನಮ್ಮ ಉದ್ದೇಶವಾಗಿದೆ.
ಬಿಜೆಪಿ ಪಕ್ಷ ತನಗೆ ಉಡುಪಿಯಿಂದ ಟಿಕೇಟ್ ನೀಡುವ ಕುರಿತು ಇನ್ನೂ ಕೂಡ ಯಾವುದೇ ನಿರ್ಧಾರವಾಗಿಲ್ಲ ಅಲ್ಲದೆ ರಾಜ್ಯದ 224 ಕ್ಷೇತ್ರಗಳಿಗೂ ಸಹ ಟಿಕೇಟ್ ಘೋಷಣೆಯಾಗಿಲ್ಲ ಆದ್ದರಿಂದ ನಾವು ಇನ್ನೂ ಕೂಡ ಆಶಾದಾಯಕರಾಗಿದ್ದೇವೆ. ಒಂದು ವೇಳೆ ಬಿಜೆಪಿಯಿಂದ ಟಿಕೇಟ್ ನೀಡದೇ ಹೋದರೂ ಕೂಡ ನಾನು ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುವುದು ನಿಶ್ಚಿತವಾಗಿದೆ ಅದರಲ್ಲಿ ಯಾವುದೇ ಬದಲಾವಣೆಯಿಲ್ಲ. ನಾಳೆಯಿಂದಲೇ ಕ್ಷೇತ್ರದಲ್ಲಿನ ಹಳ್ಳಿಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆ ಅರಿಯುವ ಕೆಲಸ ಮಾಡುತ್ತೇನೆ. ಚುನಾವಣಾ ಆಯೋಗದ ಅನುಮತಿ ಅಗತ್ಯ ಇರುವುದರಿಂದ ಅವರ ಅನುಮತಿ ನಾಳೆಯಿಂದ ಸಿಗುತ್ತದೆ ಅದರ ಬಳಿಕ ಪ್ರಚಾರ ಆರಂಭವಾಗಲಿದೆ ಎಂದರು. ನಮ್ಮ ಪ್ರಚಾರದಲ್ಲಿ ಯಾವುದೇ ಸಭೆಗಳು ಇರುವುದಿಲ್ಲ ಅಲ್ಲದೆ ಪ್ರತ್ಯೇಕ ಚುನಾವಣಾ ಪ್ರಣಾಳಿಕೆ ಎನ್ನುವುದು ಇಲ್ಲ ಗ್ರಾಮೀಣ ಭಾಗದ ಸಮಸ್ಯೆಗಳಿಗೆ ಹೆಚ್ಚಿನ ಒತ್ತು ಕೊಡುವುದು ನಮ್ಮ ಉದ್ದೇಶ ಎಂದರು.
ಅಷ್ಟ ಮಠಗಳ ಸ್ವಾಮೀಜಿಗಳು ಚುನಾವಣೆಗೆ ಸ್ಪರ್ಧಿಸುವುದಕ್ಕೆ ಬೆಂಬಲ ನೀಡಿದ್ದಾರೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸ್ವಾಮೀಜಿಯವರು ಪೇಜಾವರ ಸ್ವಾಮೀಗಳು ನಮಗೆಲ್ಲಾ ಹಿರಿಯರು ಹಾಗೂ ಗೌರವಕ್ಕೆ ಪಾತ್ರರಾದವರು ಅವರ ಆಶೀರ್ವಾದ ನಮಗೆ ಸದಾ ಇದೆ. ಇತರ ಸ್ವಾಮೀಗಳು ನೀಡುವರು ಎಂಬ ವಿಶ್ವಾಸವೂ ಇದೆ. ಎಲ್ಲದಕ್ಕಿಂತ ಹೆಚ್ಚಾಗಿ ನಮಗೆ ಭಗವಂತನ ಬೆಂಬಲ ಇದೆ ಎಂದರು.













