ಹಾಲಾಡಿ ಬಿಜೆಪಿ ಅಭ್ಯರ್ಥಿ, ಹಾಗಂತ ನಾವು ಒಪ್ಪಲೇಬೇಕಾಗಿಲ್ಲ – ಕಿಶೋರ್ ಕುಮಾರ್

Spread the love

ಹಾಲಾಡಿ ಬಿಜೆಪಿ ಅಭ್ಯರ್ಥಿ, ಹಾಗಂತ ನಾವು ಒಪ್ಪಲೇಬೇಕಾಗಿಲ್ಲ – ಕಿಶೋರ್ ಕುಮಾರ್

ಕುಂದಾಪುರ: ವಿಧಾನಸಭಾ ಚುನಾವಣೆಗೆ ಬಿಜೆಪಿಯ ಸ್ಪರ್ಧಾಕಾಂಕ್ಷಿಗಳ, ಗೊಂದಲಗಳಿಲ್ಲದ ಕ್ಷೇತ್ರಗಳ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದರೂ, ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಗ್ಗೆ ಇದುವರೆಗೆ ಇದ್ದ ಗೊಂದಲಕ್ಕಿಂತಲೂ ಇನ್ನು ಮುಂದೆ ಗೊಂದಲ ಹೆಚ್ಚಾಗುವ ಲಕ್ಷಣಗಳು ಕಾಣುತ್ತಿವೆ.

ಕುಂದಾಪುರ ಕ್ಷೇತ್ರದಲ್ಲಿ ಹಾಲಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಅವರು ಬಿಜೆಪಿಯ ಶಾಸಕರಾಗಿದ್ದು, ಸಚಿವ ಸ್ಥಾನ ವಂಚಿತರಾಗಿ, ಬಿಜೆಪಿಗೆ ರಾಜೀನಾಮೆ ನೀಡಿದ್ದರು. ನಂತರ ಪಕ್ಷೇತರರಾಗಿ ಸ್ಪರ್ಧಿಸಿ, ಬಿಜೆಪಿಯ ಅಧಿಕೃತ ಅಭ್ಯರ್ಥಿ ಕಿಶೋರ್ ಕುಮಾರ್ ಅವರನ್ನು ಸೋಲಿಸಿದ್ದರು. 5 ವರ್ಷಗಳ ಕಾಲ ಪಕ್ಷೇತರಾಗಿದ್ದು, ಇತ್ತೀಚೆಗೆ ಪುನಃ ಬಿಜೆಪಿಗೆ ಸೇರಿದ್ದಾರೆ.

ಹಾಲಾಡಿ ಶೆಟ್ಟರು ಬಿಜೆಪಿ ಸೇರುವುದಕ್ಕೆ ಕಿಶೋರ್ ಕುಮಾರ್ ಮತ್ತು ಇನ್ನೂ ಅನೇಕ ಮಂದಿ ಬಿಜೆಪಿ ನಾಯಕರು ಪ್ರಭಲ ವಿರೋಧ ವ್ಯಕ್ತಪಡಿಸಿದ್ದರು. ಆದರೂ ಬಿಜೆಪಿ ವರಿಷ್ಠರು ಹಾಲಾಡಿ ಶೆಟ್ಟರನ್ನು ಪಕ್ಷಕ್ಕೆ ಸೇರಿ, ಟಿಕೇಟನ್ನೂ ನೀಡಿದ್ದಾರೆ. ಇದು ಅವರ ವಿರೋಧಿ ಬಣವನ್ನು ಬಡಿದೆಬ್ಬಿಸಿದೆ.

ಹಾಲಾಡಿ ಶೆಟ್ಟರ ವಿರೋಧಿ ಬಣದ, ಸಮಾನ ಮನಸ್ಕರ ಸಮಾಲೋಚನೆ ನಡೆಯಲಿದೆ, ಇದರ ನಂತರ ಅವರ ಮುಂದಿನ ನಡೆ ಘೋಷಣೆಯಾಗಲಿದೆ ಎಂದು ಕಿಶೋರ್ ಕುಮಾರ್ ತಿಳಿಸಿದ್ದಾರೆ.

ಹಾಲಾಡಿ ಶೆಟ್ಟರನ್ನು ಪಕ್ಷ ಅಧಿಕೃತವಾಗಿ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ. ಪಕ್ಷದ ಕಾರ್ಯಕರ್ತರಾಗಿ ನಾವು ಇದನ್ನು ಒಪ್ಪಬೇಕಾಗುತ್ತದೆ. ಆದರೇ ನಮ್ಮ ವೈಯುಕ್ತಿಕ ತೀರ್ಮಾನವನ್ನು ಪಕ್ಷ ತೀರ್ಮಾನಿಸುವುದಕ್ಕಾಗುವುದಿಲ್ಲ, ನಮ್ಮ ಹಕ್ಕನ್ನು ನಾವು ಬಿಟ್ಟುಕೊಡುವುದಿಲ್ಲ ಎನ್ನುವ ಮೂಲಕ ಕಿಶೋರ್ ಕುಮಾರ್ ಬಂಡಾಯದ ಸಂಕೇತವನ್ನು ನೀಡಿದ್ದಾರೆ.

ಕುಂದಾಪುರದಲ್ಲಿ ನಾವು ಕಳೆದ 5 ವರ್ಷಗಳಿಂದ ಬಿಜೆಪಿಯನ್ನು ಉಳಿಸಿದ್ದೇವೆ, ಹಾಗಂತ ಕಾರ್ಯಕರ್ತರ ವಿರೋಧವನ್ನು ಲಕ್ಷೀಸದೇ ಪಕ್ಷ ತೀರ್ಮಾನಿಸಿದವರನ್ನೇ ನಮ್ಮ ಅಭ್ಯರ್ಥಿ ಎಂದು ನಾವು ಒಪ್ಪಬೇಕೆಂದೇನೂ ಇಲ್ಲವಲ್ಲ ಎಂದವರು ಮಾರ್ಮಿಕವಾಗಿ ಹೇಳಿದ್ದಾರೆ.

ಬಂಡಾಯ ಸ್ಪರ್ಧೆ, ವಿರೋಧ ಪ್ರಚಾರ, ತಟಸ್ಥರಾಗಿರುವುದು ಇತ್ಯಾದಿಇತ್ಯಾದಿಯಾಗಿ ನಮ್ಮ ಸಮಾನ ಮನಸ್ಕರು ಹೇಳುತ್ತಿದ್ದಾರೆ. ಆದರೇ ಇಂದು ಎಲ್ಲರೊಂದಿಗೆ ಸಮಾಲೋಚನೆ ನಡೆಸಿ ನಂತರ ತೀರ್ಮಾನ ಮಾಡುತ್ತೇವೆ ಎಂದವರು ಹೇಳಿದ್ದಾರೆ.

ಆದರೇ ಅವರ ಮಾತಿನಲ್ಲಿ ಹಾಲಾಡಿ ಶೆಟ್ಟರನ್ನು ಅಬ್ಯರ್ಥಿಯನ್ನಾಗಿ ಒಪ್ಪುವ, ಅವರ ಪರ ಪ್ರಚಾರ ಮಾಡುವ ಯಾವ ಮನಸ್ಥಿತಿಯೂ ವ್ಯಕ್ತವಾಗುತ್ತಿಲ್ಲ.


Spread the love