ಬಿಲ್ಲವ -ಮುಸ್ಲಿಂ ಸ್ನೇಹ ಸಮ್ಮಿಲನಕ್ಕೆ ಸ್ಪೂರ್ತಿ ತುಂಬಿದವರೇ ಕೋಟ ಶ್ರೀನಿವಾಸ ಪೂಜಾರಿ – ಅನ್ಸಾರ್ ಅಹಮ್ಮದ್

Spread the love

ಬಿಲ್ಲವ -ಮುಸ್ಲಿಂ ಸ್ನೇಹ ಸಮ್ಮಿಲನಕ್ಕೆ ಸ್ಪೂರ್ತಿ ತುಂಬಿದವರೇ ಕೋಟ ಶ್ರೀನಿವಾಸ ಪೂಜಾರಿ – ಅನ್ಸಾರ್ ಅಹಮ್ಮದ್

ಉಡುಪಿ: ಬಿಲ್ಲವ -ಮುಸ್ಲಿಂ ಸ್ನೇಹ ಸಮ್ಮಿಲನ ಕಾರ್ಯಕ್ರಮಕ್ಕೆ ಸ್ಪೂರ್ತಿ ತುಂಬಿದವರೇ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಇನ್ನಿತರ ಬಿಜೆಪಿ ನಾಯಕರು ಎಂದು ಸಾಮಾಜಿಕ ಕಾರ್ಯಕರ್ತರಾದ ಅನ್ಸಾರ್ ಅಹಮದ್ ಆರೋಪಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಜನವರಿ 11ನೇ ತಾರೀಕಿನಂದು ನಡೆಯಲಿರುವ ಬಿಲ್ಲವ ಮುಸ್ಲಿಂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಬಹಳಷ್ಟು ವಿವಾದಕ್ಕೀಡಾಗುತ್ತಿದೆ.

ಇದು ರಾಜಕೀಯ ಪ್ರೇರಿತ ಕಾರ್ಯಕ್ರಮ ಎಂದು ಬಿಂಬಿಸಲಾಗುತ್ತಿದೆ. ಜನವರಿ 11 ರಂದು ನಡೆಯಲಿರುವ ಕಾರ್ಯಕ್ರಮ ಕೇವಲ ಸೌಹಾರ್ದ ಸಾಮರಸ್ಯ ಕ್ಕೋಸ್ಕರ ಹಮ್ಮಿಕೊಳ್ಳಲಾದ ಕಾರ್ಯಕ್ರಮವಾಗಿದ್ದು ಬೇರೆ ಅರ್ಥ ಕಲ್ಪಿಸುವ ಅಗತ್ಯವೇ ಇರುವುದಿಲ್ಲ.

ಈ ಕಾರ್ಯಕ್ರಮದ ಬಗ್ಗೆ ಸಂಘಟಕರು ಮೊದಲು ಚರ್ಚೆ ನಡೆಸಿದ್ದು ಕಟಪಾಡಿ ಶಂಕರ ಪೂಜಾರಿ ಹಾಗೂ ಕೋಟ ಶ್ರೀನಿವಾಸ ಪೂಜಾರಿಯವರ ಬಳಿ. ಚರ್ಚೆಯ ಬಳಿಕ ಈ ಇಬ್ಬರು ನಾಯಕರು ಸೇರಿದಂತೆ ಹಲವಾರು ನಾಯಕರು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಕಾರ್ಯಕ್ರಮಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿರುತ್ತಾರೆ. ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಕೋಟ ಶ್ರೀನಿವಾಸ ಪೂಜಾರಿಯವರು ಸ್ವತಃ ತಮ್ಮ ಕೈಯಿಂದ ಸಂತೋಷ ಪೂರ್ವಕವಾಗಿ ಸ್ವೀಕರಿಸಿರುತ್ತಾರೆ. ಇಷ್ಟೆಲ್ಲಾ ನಡೆದ ನಂತರ ಕೇವಲ ಸೌಹಾರ್ದ ಸಾಮರಸ್ಯ ಕ್ಕೋಸ್ಕರ ಹಮ್ಮಿಕೊಳ್ಳಲಾದ ಈ ಕಾರ್ಯಕ್ರಮವನ್ನು ವಿರೋಧಿಸಿ ರಾಜಕೀಯ ಮಾಡುವುದು ಸರಿಯಲ್ಲ.

ಕಾರ್ಯಕ್ರಮದ ಉದ್ಘಾಟನೆಗೆ ತನ್ನ ಹೆಸರು ಹಾಕಲು ಅನುಮತಿಯನ್ನು ನೀಡಿ ಇದೀಗ ನನಗೂ ಈ ಕಾರ್ಯಕ್ರಮಕ್ಕೂ ಯಾವುದೇ ಸಂಬಂಧವಿಲ್ಲ ಎಂಬ ಹೇಳಿಕೆಯನ್ನು ಕೋಟ ಶ್ರೀನಿವಾಸ ಪೂಜಾರಿ ಯವರು ನೀಡಿರುವುದು ಖಂಡನೀಯ.

ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕಟಪಾಡಿ ಶಂಕರ ಪೂಜಾರಿಯವರು ನಿಜವಾಗಿಯೂ ನಮಗೆ ಏನೂ ಗೊತ್ತಿಲ್ಲ, ನಮಗೂ ಈ ಕಾರ್ಯಕ್ರಮಕ್ಕೂ ಯಾವುದೇ ಸಂಬಂಧವಿಲ್ಲ ಎಂಬ ಹೇಳಿಕೆಯೊಂದಿಗೆ ದೃಢವಾಗಿ ನಿಲ್ಲುವುದಾದರೆ ಪವಿತ್ರ ಕ್ಷೇತ್ರದಲ್ಲಿ ಬಂದು ಆಣೆ ಮಾಡಿ ಹೇಳಲಿ ಎಂದು ಸಾಮಾಜಿಕ ಕಾರ್ಯಕರ್ತರಾದ ಅನ್ಸಾರ್ ಅಹಮದ್ ರವರು ಮಾಧ್ಯಮ ಪ್ರಕಟಣೆಯಲ್ಲಿ ಒತ್ತಾಯಿಸಿರುತ್ತಾರೆ.


Spread the love