ಬೆಂಗಳೂರು ಗಲಭೆ ; ಗೂಂಡಾ ಕಾಯ್ದೆಯಡಿ ಬಂಧನ, ನಷ್ಟ ವಸೂಲಿ; ಬಿಎಸ್ ವೈ ಸಭೆಯ ಪ್ರಮುಖಾಂಶಗಳು

Spread the love

ಬೆಂಗಳೂರು ಗಲಭೆ ; ಗೂಂಡಾ ಕಾಯ್ದೆಯಡಿ ಬಂಧನ, ನಷ್ಟ ವಸೂಲಿ; ಬಿಎಸ್ ವೈ ಸಭೆಯ ಪ್ರಮುಖಾಂಶಗಳು

ಬೆಂಗಳೂರು: ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿದ ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಕೆಜೆ ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಗಲಭೆ ಕೋರರ ಹೆಡೆಮುರಿ ಕಟ್ಟಲು ಸರ್ಕಾರ ಮುಂದಾಗಿದ್ದು, ಈ ಸಂಬಂಧ ಇಂದು ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

ಈ ಬಗ್ಗೆ ಸ್ವತಃ ಸಿಎಂ ಬಿಎಸ್ ಯಡಿಯೂರಪ್ಪ ಅವರು ಟ್ವೀಟ್ ಮಾಡಿದ್ದು, ಗಲಭೆ ಮಾಡುವವರನ್ನು ಗೂಂಡಾ ಕಾಯ್ದೆಯಡಿ ಬಂಧಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ ಗಲಭೆಯಿಂದ ಸಂಭವಿಸಿದ ನಷ್ಟವನ್ನೂ ಅವರಿಂದಲೇ ವಸೂಲಿ ಮಾಡುವಂತೆ ಸೂಚಿಸಿದ್ದು, ಈ ಸಂಬಂಧ ಕೈಗೊಳ್ಳಬೇಕಾದ ಕಾನೂನು ರೀತಿಯ ಕ್ರಮಗಳನ್ನು ಜರುಗಿಸುವಂತೆಯೂ ಸೂಚನೆ ನೀಡಿದ್ದಾರೆ.

ಉಳಿದಂತೆ ಸಿಎಂ ಸಭೆಯ ಪ್ರಮುಖಾಂಶಗಳು:
1. ಆರೋಪಿಗಳ ತ್ವರಿತ ವಿಚಾರಣೆಗಾಗಿ, ಕಾನೂನು ಪ್ರಕ್ರಿಯೆಗಳಿಗಾಗಿ ಮೂವರು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಗಳ ನೇಮಕ.
2. ಗಲಭೆಯಡಿ ಬಂಧಿಸಿರುವ ಆರೋಪಿಗಳ ಜತೆ ಉಗ್ರ ಸಂಘಟನೆಗಳ ಲಿಂಕ್ ಇದ್ಯಾ ಅನ್ನೋ ಬಗ್ಗೆ ಬಗ್ಗೆ ಪರಿಶೀಲನೆಗೆ ನಿರ್ಧಾರ.
3. ಘಟನೆಯಿಂದ ಆಗಿರುವ ಆಸ್ತಿಪಾಸ್ತಿ ನಷ್ಟ ವಸೂಲಿಗೆ ಕ್ಲೇಂ ಕಮೀಷನರ್ ನೇಮಕ ಮಾಡುವಂತೆ ಹೈಕೋರ್ಟ್ ಗೆ ಮನವಿ ಸಲ್ಲಿಕೆಗೆ ನಿರ್ಧಾರ.
4. ಪ್ರಕರಣದಲ್ಲಿ ಭಾಗಿಯಾದವರ ಮೇಲೆ ಹಿಂದೆ ಕೇಸ್ ಇದ್ದರೆ ಪರಿಶೀಲಿಸಿ ಅಂತಹವರ ಮೇಲೆ ಗೂಂಡಾ ಕಾಯ್ದೆಯ ಅಡಿ ಹಾಕಲು ನಿರ್ಧಾರ.
5. ಪ್ರಕರಣದಲ್ಲಿ ಭಾಗಿಯಾದವರು ಇತರೇ ಸಂಘಟನೆಗಳ ಜೊತೆ ಗುರ್ತಿಸಿಕೊಂಡಿರುವ ಬಗ್ಗೆ ಪರಿಶೀಲನೆ.
6. ಪ್ರಕರಣದ ಹಿಂದಿರುವ ರಾಜಕೀಯ ಕಾರಣಗಳ ಬಗ್ಗೆಯೂ ಪರಿಶೀಲನೆ.
7. ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದ ಒಂದೇ ತನಿಖಾ ತಂಡದಿಂದ ಮಾತ್ರ ಸದ್ಯಕ್ಕೆ ತನಿಖೆ. ಇದರಲ್ಲೂ ಸದ್ಯಕ್ಕೆ ಬದಲಾವಣೆ ಇಲ್ಲ.
8. ಗೋಲಿಬಾರ್ ಪ್ರಕರಣವೂ ಜಿಲ್ಲಾ ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ತನಿಖೆ. ಇದರಲ್ಲಿ ಬದಲಾವಣೆ ಇಲ್ಲ.
9. ಆರೋಪಿಗಳ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ನಿರ್ಬಂಧ ಕಾಯ್ದೆಯಡಿಯೂ ಕ್ರಮ ಕೈಗೊಳ್ಳಲು ಸಿಎಂ ಸೂಚನೆ

ಇನ್ನು ಇಂದಿನ ಸಭೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವಡಗಿ, ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್, ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಗುಪ್ತವಾರ್ತೆ ವಿಭಾಗದ ಎಡಿಜಿಪಿ ಬಿ. ದಯಾನಂದ, ಪೊಲೀಸ್ ಕಮಿಷನರ್, ಕಮಲ್ಪಂತ್, ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಅಮರ ಕುಮಾರ್ ಪಾಂಡೆ ಇದ್ದರು.


Spread the love