ಬೆಂಗಳೂರು: ಫಾದರ್ ಕೆ ಜೆ ಥಾಮಸ್ ಕೊಲೆ ಆರೋಪಿಗಳನ್ನು ಬಂಧಿಸಲು ಒತ್ತಾಯ

Spread the love

ಬೆಂಗಳೂರಿನಲ್ಲಿ 2013ರಲ್ಲಿ ನಡೆದ ಫಾದರ್ ಕೆ.ಜೆ ಥಾಮಸ್ ಕೊಲೆ ಪ್ರಕರಣದ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಸಾಮಾಜಿಕ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಟಿ ನಡೆಸಿದ ಅಬ್ರಾಹಾಂ ಟಿ ಜೆ ಅವರು 2013ರ ಈಸ್ಟರ್ ಹಬ್ಬದ ರಾತ್ರಿ / ಮಾರನೆಯ ದಿನ ಮುಂಜಾನೆ ನಡೆದ ಫಾದರ್ ಕೆ.ಜೆ.ಥಾಮಸ್ ರವರ ಕೊಲೆ ಪ್ರಕರಣದಲ್ಲಿ ಯಶವಂತಪುರ ಪೊಲೀಸರು ಎರಡನೇ ದೋಷಾರೋಪಣ ಪಟ್ಟಿಯನ್ನು ಮಾನ್ಯ 24ನೇ ಎ.ಸಿ.ಎಂ.ಎಂ ನ್ಯಾಯಾಲಯಕ್ಕೆ ದಿನಾಂಕ 28-12-2015 ರಂದು ಸಲ್ಲಿಸಿದಾಗಿನಿಂದಲೂ, ಅಂದಿನಿಂದ ಇಂದಿನವರೆಗೆ ಮೂರು ಬಾರಿ ನ್ಯಾಯಾಲಯದ ಕಲಾಪಗಳು (ದಿನಾಂಕ 28-12-2015, 29-01-2016 ಮತ್ತು 22-02-2016) ನಡೆದಿದ್ದರೂ, ಪ್ರತೀ ಬಾರಿಯೂ ಮಾನ್ಯ ನ್ಯಾಯಾಲಯವು 2ನೇ ದೋಷಾರೋಪಣ ಪಟ್ಟಿಯಲ್ಲಿ ಸೇರಿಸಿದ ಆರೋಪಿಗಳಾದ ಫಾದರ್ ಅನ್ಬು ಜಾನ್ – A6, ಫಾದರ್ ಎ.ಥಾಮಸ್ – A7, ಫಾದರ್ ಸಿ.ಸೆಲ್ವರಾಜ್ @ ಚಸರ- A8, ಫಾದರ್ ಐ.ಆಂಥಪ್ಪ – A9, ರಫಾಯಿಲ್ ರಾಜ್ – A10, ಶ್ರೀಮತಿ.ರೀಟಾ ರಿನಿ – A11 ಮತ್ತು ಬಿ.ಎ.ಆಂಥೋಣಿ ಪ್ರಸಾದ್ – A12 ರವರುಗಳ ವಿರುದ್ಧ ಜಾಮೀನು ರಹಿತ ಬಂಧನದ ಆದೇಶವನ್ನು ಮಾಡಿದ್ದರೂ, ಇದುವರೆವಿಗೂ ಅಂದರೆ ಸುಮಾರು 4 ತಿಂಗಳುಗಳಿಂದ ಯಶವಂತಪುರ ಪೊಲೀಸರು ಮೇಲಿನ ಯಾವ ಆರೋಪಿಗಳನ್ನು ಈ ವರೆವಿಗೂ ಬಂಧಿಸಿರುವುದಿಲ್ಲ.
ಮೇಲೆ ತಿಳಿಸಲಾದ ಎಲ್ಲಾ ಆರೋಪಿಗಳು ಸಾರ್ವಜನಿಕವಾಗಿ ಲಭ್ಯವಿದ್ದೂ, ಅವರ ಲಭ್ಯತೆಯು ಯಶವಂತಪುರ ಪೊಲೀಸರಿಗೆ ತಿಳಿದಿದ್ದರೂ ಸಹ ಪೊಲೀಸರು ಮಾನ್ಯ ನ್ಯಾಯಾಲಯದ ಆದೇಶಕ್ಕೆ ಅಗೌರವವನ್ನು ತೋರಿ ಮತ್ತು ನ್ಯಾಯಾಲಯದ ಆದೇಶಕ್ಕೆ ಬೆಲೆಕೊಡದೆ, ಆರೋಪಿಗಳನ್ನು ರಕ್ಷಿಸುವ ಉದ್ದೇಶದಿಂದ ದುರುದ್ದೇಶಪೂರ್ವಕವಾಗಿ ದಸ್ತಗಿರಿಮಾಡುತ್ತಿಲ್ಲ.
ಆರೋಪಿಗಳ ಮೇಲೆ ಜಾಮೀನು ರಹಿತ ಬಂಧನದ ಆದೇಶವಿದ್ದರೂ ಅವರನ್ನು ಇನ್ನೂ ಬಂಧಿಸದಿರುವುದರ ಬಗ್ಗೆ ದಿನಾಂಕ 06-01-2016 ರಂದು ಮಾನ್ಯ ಪೊಲೀಸ್ ಆಯುಕ್ತರಿಗೆ ನಾವು ದೂರನ್ನು ಸಲ್ಲಿಸಿದ್ದರೂ ಇದುವರೆವಿಗೂ ಯಶವಂತಪುರ ಪೊಲೀಸರು ಆರೋಪಿಗಳನ್ನು ಬಂಧಿಸುವ ಗೋಜಿಗೆ ಹೋಗಿರುವುದಿಲ್ಲ. ಆದರೆ ದಿನಾಂಕ 10-03-2016 ರಂದು ಬರೆದ ಹಿಂಬರಹದಲ್ಲಿ ನನ್ನ ಪತ್ರಕ್ಕೆ ಉತ್ತರವಾಗಿ ಯಶವಂತಪುರ ಪೊಲೀಸರು
“ತಾವು ದೂರು ಅರ್ಜಿಯಲ್ಲಿ ಪ್ರಸ್ತಾಪಿಸಿರುವ 1.ಅಂಬುಜಾನ್, 2.ಫಾದರ್ ಎ.ಥಾಮಸ್, 3.ಫಾದರ್ ಸಿ.ಸೆಲ್ವರಾಜ್ @ ಚಸರ, 4.ಫಾದರ್ ಆಂಥಪ್ಪ, 5.ರಫೇಲ್ ರಾಜ್, 6.ಶ್ರೀಮತಿ.ರೀಟಾ ರಿನಿ ಮತ್ತು 7.ಆಂಥೋಣಿ ಪ್ರಸಾದ್ ರವರುಗಳು ತಮ್ಮ ವಿರುದ್ಧ ನ್ಯಾಯಾಲಯವು ಹೊರಡಿಸಿರುವ ಜಾಮೀನು ರಹಿತ ವಾರೆಂಟಿನ ವಿಚಾರವನ್ನು ಮೊದಲೇ ತಿಳಿದುಕೊಂಡು ತಲೆಮರೆಸಿಕೊಂಡಿರುತ್ತಾರೆ. ಆದರೂ ಸಹ ಆದಷ್ಟು ಬೇಗ ಆರೋಪಿಗಳನ್ನು ದಸ್ತಗಿರಿಪಡಿಸಿ ಘನ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದೆಂದು ತಿಳಿಯಪಡಿಸಲಾಗಿದೆ”
ಎಂದು ತಿಳಿಸಿರುವುದು ಅಪ್ಪಟ ಸುಳ್ಳು ಮತ್ತು ಕಟ್ಟು ಕಥೆಯಾಗಿರುತ್ತದೆ, ಏಕೆಂದರೆ ಸದರಿ ಹಿಂಬರಹವು ಇತ್ತೀಚೆಗೆ ಅಂದರೆ ದಿನಾಂಕ 19-03-2016 ರಂದು ತಯಾರಾಗಿದ್ದು ಅದನ್ನು ಉದ್ದೇಶಪೂರ್ವಕವಾಗಿ ತಿದ್ದಿ ಹಿಂದಿನ ದಿನಾಂಕ 10-03-2016 ಎಂದು ಬರೆದಿರುವುದು ಸ್ಪಷ್ಟವಾಗಿ ಬೆತ್ತಲೆ ಕಣ್ಣಿಗೆ ಗೋಚರವಾಗುತ್ತದೆ. ಇದಕ್ಕೆ ಕಾರಣವೇನೆಂದರೆ ಫಾದರ್ ಕೆ.ಜೆ.ಥಾಮಸ್ ರವರ ಕೊಲೆ ಪ್ರಕರಣದಲ್ಲಿ 8ನೇ ಆರೋಪಿಯಾದ ಫಾದರ್ ಸಿ.ಸೆಲ್ವರಾಜ್ @ ಚಸರ ರವರು 16-03-2016 ರಂದು ವಿಧಿವಶರಾದಾಗ ನಡೆದ ಅವರ ಉತ್ತರ ಕ್ರಿಯೆಯ ಸಂಧರ್ಬದಲ್ಲಿ ಕೆಲ ಆರೋಪಿಗಳು ಹಾಜರಿರುವುದರ ಬಗ್ಗೆ ಯಶವಂತಪುರ ಪೊಲೀಸರಿಗೆ ಮಾಹಿತಿಯಿದ್ದರೂ ಪೊಲೀಸರು ಅವರನ್ನು ಬಂಧಿಸಿದೆ ರಕ್ಷಿಸುವ ದುರುದ್ದೇಶದಿಂದ ನಮಗೆ ಅಪ್ರಮಾಣಿಕವಾಗಿ ಹಿಂಬರಹವನ್ನು ನೀಡಿರುತ್ತಾರೆ.
ದಿನಾಂಕ 16-03-2016 ರಂದು 8ನೇ ಆರೋಪಿಯಾದ ಫಾದರ್ ಸಿ.ಸೆಲ್ವರಾಜ್ @ ಚಸರ ರವರು ವಿಧಿವಶರಾದ ಸಂದರ್ಭದಲ್ಲಿ ಚಾಮರಾಜಪೇಟೆಯ ಚರ್ಚ್ ಒಂದರಲ್ಲಿ ಏರ್ಪಡಿಸಲಾಗಿದ್ದ ಅಂತ್ಯಕ್ರಿಯೆಯ ಸಂಧರ್ಬದಲ್ಲಿ ಫ಼ಾದರ್ ಕೆ.ಜೆ.ಥಾಮಸ್ ಕೊಲೆ ಪ್ರಕರಣದ ಕೆಲ ಆರೋಪಿಗಳು ಚರ್ಚಿನಲ್ಲಿ ಉಪಸ್ಥಿಥರಿರುವುದು ಮತ್ತು ಅವರುಗಳು ಬಹಿರಂಗವಾಗಿ ದೂರದರ್ಶನ ಮತ್ತು ಇತರೆ ಮಾಧ್ಯಮಗಳೊಂದಿಗೆ ಹೇಳಿಕೆಗಳನ್ನು ನೀಡಿರುವುದು ಮಾಧ್ಯಮಗಳಲ್ಲಿ ಬಿತ್ತರವಾಗಿದ್ದರೂ, ಹಾಗೂ ಈ ಪ್ರಕರಣದ ಮೊದಲಿನಿಂದಲೂ ಆರೋಪಿಗಳು ಎಲ್ಲಿಯೂ ತಲೆಮರೆಸಿಕೊಳ್ಳದೇ ಸಾರ್ವಜನಿಕವಾಗಿ ಲಭ್ಯರಿದ್ದರೂ, ಯಶವಂತಪುರ ಪೊಲೀಸರು ಆರೋಪಿಗಳನ್ನು ಬಂಧಿಸದೇ ಅವರು ತಲೆಮರೆಸಿಕೊಳ್ಳಲು ಸಹಾಯ ಮಾಡಿರುತ್ತಾರೆ.
ಯಶವಂತಪುರ ಪೊಲೀಸರು ಆರೋಪಿಗಳನ್ನು ರಕ್ಷಿಸುವ ಈ ಕೃತ್ಯವು ಭಾರತೀಯ ದಂಡ ಸಂಹಿತೆಯ ಕಲಂ.217 ರಂತೆ ಒಬ್ಬ ವ್ಯಕ್ತಿಗೆ ದಂಡನೆಯಾಗದಂತೆ ಅಥವ ಅವನ ಸ್ವತ್ತು ಮುಟ್ಟುಗೋಲಾಗದಂತೆ ರಕ್ಷಿಸುವ ಉದ್ದೇಶದಿಂದ ಲೋಕನೌಕರನು (ಪೊಲೀಸ್ ಅಧಿಕಾರಿ) ವಿಧಿನಿದೇಶವನ್ನು ಉಲ್ಲಂಘಿಸುವುದು (ಅಸಾಂಜ್ಞೇಯ ಅಪರಾಧ), ಕಲಂ. 221 ರ ಪ್ರಕಾರ ಅಪರಾಧಿಯನ್ನು ದಸ್ತಗಿರಿ ಮಾಡಲು ಬದ್ಧನಾಗಿರುವ ಲೋಕನೌಕರನು (ಪೊಲೀಸ್ ಅಧಿಕಾರಿ) ಉದ್ದೇಶಪೂರ್ವಕವಾಗಿ ದಸ್ತಗಿರಿ ಮಾಡದಿರುವುದು (ಸಾಂಜ್ಞೇಯ ಅಪರಾಧ) ಮತ್ತು ಕಲಂ 222 ರಂತೆ ದಂಡಾದೇಶದ ಮೇರೆಗೆ ಅಥವಾ ವಿಧಿಬದ್ಧವಾಗಿ ಬಂಧನಕ್ಕೆ ಒಪ್ಪಿಸಲಾದ ಒಬ್ಬ ವ್ಯಕ್ತಿಯನ್ನು ದಸ್ತಗಿರಿ ಮಾಡಲು ಬದ್ಧನಾದ ಲೋಕನೌಕರನು (ಪೊಲೀಸ್ ಅಧಿಕಾರಿ) ಉದ್ದೇಶಪೂರ್ವಕವಾಗಿ ದಸ್ತಗಿರಿ ಮಾಡದಿರುವುದು (ಸಾಂಜ್ಞೇಯ ಅಪರಾಧ) ಅಪರಾಧವಾಗುತ್ತದೆ.
ಆದ್ದರಿಂದ ಈ ಕೂಡಲೇ ಅಪರಾಧಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸದಿದ್ದಲ್ಲಿ ಮಾನ್ಯ ಘನ ನ್ಯಾಯಾಲಯದ ಮುಂದೆ ಯಶವಂತಪುರ ಪೊಲೀಸರ ವಿರುದ್ಧವೇ ನ್ಯಾಯಾಂಗ ನಿಂದನೆಯ ದೂರನ್ನು ಸಲ್ಲಿಸಿದ್ದು, ಅವರ ಅಮಾನತ್ತಿಗೆ ಒತ್ತಾಯಿಸಿದ್ದಾರೆ.


Spread the love