ಬೆಳ್ತಂಗಡಿ: ಮಾರಕಾಸ್ತ್ರದಿಂದ ಕಡಿದು ಯುವಕನ ಕೊಲೆ

ಬೆಳ್ತಂಗಡಿ: ಮಾರಕಾಸ್ತ್ರದಿಂದ ಕಡಿದು ಯುವಕನ ಕೊಲೆ

ಬೆಳ್ತಂಗಡಿ: ಗುರುವಾಯನಕೆರೆ ಸಮೀಪ ನಾರಾವಿ ರಸ್ತೆಯ ಪೊಟ್ಟುಕೆರೆ ಎಂಬಲ್ಲಿ ಶುಕ್ರವಾರ ರಾತ್ರಿ ರಮೇಶ್ ಯಾನೆ ನಾರಾಯಣ ಪಡಂಗಡಿ ಪೊಯ್ಯಗುಡ್ಡೆ (40) ಎಂಬವರನ್ನು ಕಡಿದು ಕೊಲೆ ಮಾಡಿದ ಘಟನೆ ನಡೆದಿದೆ.

ಗುರುವಾಯನಕೆರೆ ನಿವಾಸಿ ಅಣ್ಣು ಕೊಲೆ ಆರೋಪಿ ಎಂದು ಹೇಳಲಾಗುತ್ತಿದ್ದು, ಪೊಲೀಸರು ಈತನನ್ನು ಬಂಧಿಸಿರುವುದಾಗಿ ತಿಳಿದು ಬಂದಿದೆ.

ಶುಕ್ರವಾರ ರಾತ್ರಿ ಇವರು ಇಬ್ಬರು ಒಟ್ಟಿಗೆ ಮಧ್ಯ ಸೇವನೆ ಮಾಡಿದ್ದಾರೆ ಎನ್ನಲಾಗಿದ್ದು ಬಳಿಕ 9.30ರ ಸುಮಾರಿಗೆ ಮಾರಕ ಅಸ್ತ್ರದಿಂದ ಕಡಿದು ಅಣ್ಣು ಕೊಲೆ ಮಾಡಿರುವುದಾಗಿ ಆರೋಪಿಸಲಾಗಿದೆ.

ಪೂರ್ವ ದ್ವೇಷದ ಹಿನ್ನೆಲೆ ಕೊಲೆ ನಡೆಸಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಆರೋಪಿ ಅಣ್ಣು ಕಳೆದ ಹಲವಾರು ವರ್ಷಗಳಿಂದ ಅನೇಕ ಪ್ರಕರಣಗಳಲ್ಲಿ ಸೆರೆವಾಸ ಅನುಭವಿಸಿದ್ದ. ಈತನನ್ನು ಬೆಳ್ತಂಗಡಿ ತಾಲೂಕಿನಿಂದ ಗಡಿಪಾರು ಮಾಡಲಾಗಿತ್ತು. ಕೊಲೆ ಬಳಿಕ ಪರಾರಿಯಾಗಲು ಯತ್ನಿಸಿದ್ದ ಈತನನ್ನು ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಬಂಧಿಸುವಲ್ಲಿ ಯಶಸ್ವಿಯಾಗಿರುವುದಾಗಿ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.