ಬ್ರಹ್ಮಾವರ: ಸಾಬರ್ಕಟ್ಟೆ ಸಮೀಪದ ಕಾಜ್ರಹಳ್ಳಿ ನಿವಾಸಿಗಳಾದ ಇರ್ವರು ಪ್ರೇಮಿಗಳು ಶುಕ್ರವಾರದಂದು ನೇಣಿಗೆ ಶರಣಾದ ರೀತಿಯಲ್ಲಿ, ಕಾಜ್ರಹಳ್ಳಿ ಹಾಡಿಯಲ್ಲಿ ಪತ್ತೆಯಾಗಿದ್ದಾರೆ. ನೇಣಿಗೆ ಶರಣಾದವರನ್ನು ರಿಕ್ಷಾ ಚಾಲಕ ದಿವಾಕರ (26) ಮತ್ತು ಮಂದರ್ತಿ ಹೈಸ್ಕೂಲ್ ವಿದ್ಯಾರ್ಥಿನಿ ಚೈತ್ರಾ (16) ಎಂದು ಗುರುತಿಸಲಾಗಿದೆ.
ಕಳೆದ ಕೆಲ ವರ್ಷಗಳಿಂದ ದಿವಾಕರ್ ಮತ್ತು ಚೈತ್ರ ಪ್ರೇಮಿಸುತ್ತಿದ್ದು ಅದು ಈ ಪರಿಸರದಲ್ಲಿ ಸಾಕಷ್ಟು ಪ್ರಚಾರದಲ್ಲಿತ್ತು. ದಿವಾಕರ್ ಚೈತ್ರಾಳನ್ನು ಆಗಾಗ ಭೇಟಿ ಮಾಡುತ್ತಾ ಹಲವೆಡೆ ಆಕೆಯ ಜೊತೆ ಸುತ್ತಾಡುತ್ತಿದ್ದ. ಈ ನಡುವೆ ಆಕೆ ಇನ್ನೂ ಅಪ್ರಾಪ್ತ ವಯಸ್ಸಿನವಳಾದ ಕಾರಣ ಆಕೆಯ ಜೊತೆ ಸುತ್ತಾಡದಂತೆ ಕೆಲವರು ದಿವಾಕರ್ಗೆ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ. ನಿನ್ನೆ ಅಚಾನಕ್ ಆಗಿ ದಿವಾಕರ್ ಮತ್ತು ಚೈತ್ರ ಇಬ್ಬರೂ ಕಾಣೆಯಾಗಿದ್ದರು.
ಇಂದು ಇಬ್ಬರೂ ಸಹ ಜೊತೆಯಾಗಿ ಮರಕ್ಕೆ ಒಂದೇ ಬಳ್ಳಿಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮ ಮನೆ ಸಮೀಪ ಕಾಜ್ರಳ್ಳಿ ಎಂಬಲ್ಲಿ ಇಬ್ಬರೂ ಸಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ರಿಕ್ಷಾ ಚಾಲಕ ದಿವಾಕರ್ ಈ ಪರಿಸರದಲ್ಲಿ ಉತ್ತಮ ನಡತೆಗೆ ಹೆಸರಾಗಿದ್ದು ಆತ್ಮಹತ್ಯೆಯಂತಹ ಕಠಿಣ ನಿರ್ಧಾರಕ್ಕೆ ಹೇಗೆ ಬಂದರು ಎಂದು ಜನರಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ದಿವಾಕರ್ ಮತ್ತು ಚೈತ್ರಾ ಸಾರ್ವಜನಿಕ ಸ್ಥಳವೊಂದರಲ್ಲಿ ಸುತ್ತುತ್ತಿದ್ದಾಗ ಕೆಲವರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದು ಈ ಆವಮಾನವೇ ಅವರನ್ನು ಆತ್ಮಹತ್ಯೆಗೆ ಪ್ರೇರೇಪಿಸಿತು ಎನ್ನಲಾಗುತ್ತಿದೆ.
ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
 
            


