ಬ್ರಹ್ಮಾವರ ಪೊಲೀಸರಿಂದ ಮೊಬೈಲ್ ಸುಲಿಗೆಕೋರನ ಬಂಧನ

Spread the love

ಬ್ರಹ್ಮಾವರ ಪೊಲೀಸರಿಂದ ಮೊಬೈಲ್ ಸುಲಿಗೆಕೋರನ ಬಂಧನ

ಬ್ರಹ್ಮಾವರ: ಮಹಿಳೆಯೋರ್ವರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಮೊಬೈಲ್ ಕಸಿದುಕೊಂಡು ಹೋಗಿದ್ದ ಆರೋಪಿಯನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಉದ್ಯಾವರ ಮೇಲ್ಪೇಟೆ ನಿವಾಸಿ ಮೊಹಮ್ಮದ್ ಫಹಾದ್ ಎಂದು ಗುರುತಿಸಲಾಗಿದೆ.
ಮೇ 27ರಂದು ಬೆಳಿಗ್ಗೆ 08:45 ಗಂಟೆಗೆ ಬ್ರಹ್ಮಾವರ ತಾಲೂಕು ಹಂದಾಡಿ ಗ್ರಾಮದ ಕಲ್ಲಬೆಟ್ಟುನಲ್ಲಿರುವ ಪಾಂಡುರಂಗ ಪ್ರಭು ರವರ ಮನೆಯ ತಿರುವಿನಲ್ಲಿ ಮಹಿಳೆಯೋರ್ವರು ಮನೆಯಿಂದ ಕೆಲಸಕ್ಕೆಂದು ಹೊರಟು ಮೊಬೈಲ್ನಲ್ಲಿ ಮಾತನಾಡುತ್ತಾ ನಡೆದುಕೊಂಡು ಬ್ರಹ್ಮಾವರ ಪೇಟೆಗೆ ಹೋಗುತ್ತಿರುವಾಗ ಅವರ ಹಿಂಭಾಗದಿಂದ ಅಪರಿಚಿತರಿಬ್ಬರು ಮೋಟಾರ್ ಸೈಕಲ್ನಲ್ಲಿ ಬಂದು ಕುಮಾರಿ ರಕ್ಷಾ ರವರ ಬಲ ಕೈಯಿಂದ ಮೊಬೈಲ್ ಅನ್ನು ಕಸಿದುಕೊಂಡು ಹೋಗಿದ್ದು, ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ರಕ್ಷಾ ರವರ ದೂರಿನಂತೆ ಸುಲಿಗೆ ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ಕಾರ್ಯಾಚರಣೆ ನಡೆಸಿದ ಬ್ರಹ್ಮಾವರ ಪೊಲೀಸರು ಆರೋಪಿಯನ್ನು ಬಂಧಿಸಿದ್ದು ಬಂಧಿತನಿಂದ ಸುಲಿಗೆ ಮಾಡಿದ ರೆಡ್ ಮಿ ಮೊಬೈಲ್ ಮತ್ತು ಕೃತ್ಯಕ್ಕೆ ಬಳಸಿದ ಒಂದು ಪಲ್ಸರ್ ಬೈಕ್ ಸೇರಿ ಒಟ್ಟು ರೂ. 70,000/- ಮೌಲ್ಯದ ಸ್ವತ್ತುಗಳನ್ನು ಸ್ವಾಧೀಪಡಿಸಿಕೊಳ್ಳಲಾಗಿದೆ.

ಆರೋಪಿ ಮೊಹಮ್ಮದ್ ಫಹಾದ್ ಈ ಮೊದಲು ಸುಲಿಗೆ ಮಾಡಿದ ಬಗ್ಗೆ ಮಣಿಪಾಲ ಠಾಣೆಯಲ್ಲಿ, ಗಾಂಜಾ ಮಾರಾಟ ಮಾಡಿದ ಬಗ್ಗೆ ಮಲ್ಪೆ ಠಾಣೆಯಲ್ಲಿ ಮತ್ತು ಗಾಂಜಾ ಸೇವನೆ ಮಾಡಿದ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದು, ಈತನು ರೂಢಿಗತ ಕಳವು ಆರೋಪಿಯಾಗಿದ್ದಾನೆ.

ಈ ಕಾರ್ಯಾಚರಣೆಯನ್ನು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ವಿಷ್ಣುವರ್ಧನ ರವರ ನಿರ್ದೇಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರ್ ಚಂದ್ರ ಮತ್ತು ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಟಿ. ಜೈಶಂಕರ್ ರವರ ಮಾರ್ಗದರ್ಶನದಲ್ಲಿ, ಬ್ರಹ್ಮಾವರ ವೃತ್ತದ ಸಿ.ಪಿ.ಐ. ಅನಂತ ಪದ್ಮನಾಭ ಮತ್ತು ಬ್ರಹ್ಮಾವರ ಪೊಲೀಸ್ ಠಾಣೆಯ ಪಿ.ಎಸ್.ಐ. ರಾಘವೇಂದ್ರ, ಸಿಬ್ಬಂದಿಯವರಾದ ವೆಂಕಟರಮಣ ದೇವಾಡಿಗ, ಪ್ರವೀಣ್ ಶೆಟ್ಟಿಗಾರ್, ದಿಲೀಪ್ ಮತ್ತು ಬ್ರಹ್ಮಾವರ ವೃತ್ತ ಕಛೇರಿಯ ಸಿಬ್ಬಂದಿ ಎಎಸ್ಐ ಕೃಷ್ಣಪ್ಪ, ಪ್ರದೀಪ್ ನಾಯಕ್, ಗಣೇಶ್, ರವೀಂದ್ರ, ಶೇಖರ್ ಹಾಗೂ ಅಣ್ಣಪ್ಪ ಇವರ ತಂಡವು ನಡೆಸಿರುತ್ತದೆ.


Spread the love