‘ಬ್ರ್ಯಾಂಡ್‌ ಮಂಗಳೂರು’ ಮತ್ತು ‘ಪತ್ರಕರ್ತರ ಗ್ರಾಮ ವಾಸ್ತವ್ಯ’ ಯೋಜನೆಗಳಿಗೆ ಕುಮಾರಸ್ವಾಮಿ ಚಾಲನೆ

Spread the love

‘ಬ್ರ್ಯಾಂಡ್‌ ಮಂಗಳೂರು’ ಮತ್ತು ‘ಪತ್ರಕರ್ತರ ಗ್ರಾಮ ವಾಸ್ತವ್ಯ’ ಯೋಜನೆಗಳಿಗೆ ಕುಮಾರಸ್ವಾಮಿ ಚಾಲನೆ

ಮಂಗಳೂರು: ‘ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸುವ ಆತುರ ನನ್ನದು. ಆದರೆ ಅಧಿಕಾರಿಗಳು ನನ್ನ ವೇಗಕ್ಕೆ ಹೊಂದುತ್ತಿಲ್ಲ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

ನಗರದ ಟಿ.ಎಂ.ಎ. ಪೈ ಸಭಾಂಗಣದಲ್ಲಿ ಭಾನುವಾರ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ‘ಬ್ರ್ಯಾಂಡ್‌ ಮಂಗಳೂರು’ ಮತ್ತು ‘ಪತ್ರಕರ್ತರ ಗ್ರಾಮ ವಾಸ್ತವ್ಯ’ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಅಧಿಕಾರಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದೇನೆ. ಆದರೂ, ಕಡತಗಳನ್ನು ಬಾಕಿ ಉಳಿಸಿಕೊಳ್ಳುವ ಅಭ್ಯಾಸವನ್ನು ಅವರು ಬಿಟ್ಟಿಲ್ಲ’ ಎಂದರು.

ರಾಜ್ಯ ಸರ್ಕಾರದ ಚಾಲ್ತಿ ಖಾತೆಯಲ್ಲಿ ₹ 10,000 ಕೋಟಿ ಲಭ್ಯವಿದೆ. ಅಧಿಕಾರಿಗಳು ವೇಗವಾಗಿ ಸ್ಪಂದಿಸದ ಕಾರಣದಿಂದ ಅದನ್ನು ವೆಚ್ಚ ಮಾಡಲು ಸಾಧ್ಯವಾಗುತ್ತಿಲ್ಲ. ಪ್ರಸಕ್ತ ವರ್ಷ ವಿವಿಧ ಮೂಲಗಳಿಂದ ₹ 40,000 ಕೋಟಿ ಸಾಲ ಪಡೆಯಲು ಸರ್ಕಾರ ತೀರ್ಮಾನಿಸಿತ್ತು. ಆದರೆ, ಚಾಲ್ತಿ ಖಾತೆಯಲ್ಲಿರುವ ಹಣವನ್ನು ಪೂರ್ಣವಾಗಿ ಬಳಸಿಕೊಳ್ಳದೇ ಸಾಲ ಪಡೆಯಲು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಅನುಮತಿ ಕೇಳುವುದು ಸಾಧ್ಯವಿಲ್ಲ ಎಂದರು.

ಜೆಡಿಎಸ್‌– ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ರಾಜ್ಯ ಸರ್ಕಾರದ ಖಜಾನೆಯೂ ಬರಿದಾಗಿಲ್ಲ. ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯ ಇರುವಷ್ಟು ಹಣ ಲಭ್ಯವಿದೆ. ರೈತರ ಬೆಳೆ ಸಾಲ ಮನ್ನಾದಿಂದ ಖಜಾನೆ ಖಾಲಿಯಾಗಿದೆ ಎಂಬ ವಿರೋಧ ಪಕ್ಷದ ಟೀಕೆಯಲ್ಲಿ ಎಳ್ಳಷ್ಟೂ ಹುರುಳಿಲ್ಲ. ಈ ಬಗ್ಗೆ ಜನರು ಸಂಶಯಪಡುವ ಅಗತ್ಯವಿಲ್ಲ ಎಂದು ಹೇಳಿದರು.

ಬೆಂಗಳೂರಿಗೆ ಸಮನಾಗಿ ಬೆಳೆಸಬೇಕು: ‘ರಾಜ್ಯದಲ್ಲಿ ಬೆಂಗಳೂರಿಗೆ ಸಮನಾಗಿ ಬೆಳೆಯುವ ಅವಕಾಶ ಮಂಗಳೂರು ನಗರಕ್ಕಿದೆ. ಶಿಕ್ಷಣ, ಆರೋಗ್ಯ, ಕೈಗಾರಿಕೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ನಗರ ಈಗಾಗಲೇ ಬೆಳೆದಿದೆ. ಮತ್ತಷ್ಟು ಕ್ಷೇತ್ರಗಳಲ್ಲಿ ಗಣನೀಯ ಪ್ರಮಾಣದ ಅಭಿವೃದ್ಧಿ ಸಾಧಿಸಲು ರಾಜ್ಯ ಸರ್ಕಾರ ಸಂಪೂರ್ಣ ನೆರವು ನೀಡಲಿದೆ’ ಎಂದರು.

ಸರ್ಕಾರ, ಜಿಲ್ಲಾಡಳಿತ, ಸಾರ್ವಜನಿಕರು ಮತ್ತು ಪತ್ರಕ ರ್ತರು ಒಗ್ಗೂಡಿ ‘ಬ್ರ್ಯಾಂಡ್‌ ಮಂಗಳೂರು’ ಪರಿಕಲ್ಪನೆಯನ್ನು ಸಾಕಾರಗೊಳಿಸಬೇಕಿದೆ. ಆದರೆ, ಅಭಿವೃದ್ಧಿಯ ಹೆಸರಿನಲ್ಲಿ ಪರಿಸರದ ಮೇಲೆ ಮಾರಕ ಪರಿಣಾಮ ಬೀರು ವಂತಹ ಕೈಗಾರಿಕೆಗಳು, ಯೋಜನೆಗಳು ಬರದಂತೆ ಎಚ್ಚರಿಕೆ ವಹಿಸಬೇಕಿದೆ ಎಂದು ಸಲಹೆ ನೀಡಿದರು.

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಮಂಗಳೂರು ಮಹಾನಗರ ಪಾಲಿಕೆ ಮೇಯರ್‌ ಭಾಸ್ಕರ್ ಕೆ., ಶಾಸಕ ಡಿ.ವೇದವ್ಯಾಸ ಕಾಮತ್, ವಿಧಾನ ಪರಿಷತ್‌ ಸದಸ್ಯರಾದ ಐವನ್ ಡಿಸೋಜ, ಬಿ.ಎಂ.ಫಾರೂಕ್‌, ಎಸ್‌.ಎಲ್‌.ಭೋಜೇಗೌಡ, ಎಸ್‌.ಎಲ್‌.ಧರ್ಮೇಗೌಡ, ಮಾಜಿ ಸಚಿವ ಬಿ.ರಮಾನಾಥ ರೈ, ಮಾಜಿ ಶಾಸಕರಾದ ಎನ್‌.ಯೋಗೀಶ್‌ ಭಟ್, ಶಕುಂತಳಾ ಟಿ.ಶೆಟ್ಟಿ, ಬಿ.ಎ.ಮೊಹಿಯುದ್ದೀನ್‌ ಬಾವಾ, ಜಿಲ್ಲಾ ಕಾರ್ಯನಿರತ ಪತ್ರಕ ರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್, ಮಂಗಳೂರು ಪ್ರೆಸ್ ಕ್ಲಬ್‌ ಅಧ್ಯಕ್ಷ ಅನ್ನು ಮಂಗಳೂರು, ಪತ್ರಿಕಾ ಭವನ ಟ್ರಸ್ಟ್‌ ಅಧ್ಯಕ್ಷ ಆನಂದ ಶೆಟ್ಟಿ ಉಪಸ್ಥಿತರಿದ್ದರು.


Spread the love