ಭದ್ರಮಹಾಕಾಳಿ ವಿಗ್ರಹ ರಚನೆಗೆ ರಕ್ತಚಂದನ ಮರ: ಜೂನ್ 12 ರಂದು ಮೆರವಣಿಗೆ

Spread the love

ಭದ್ರಮಹಾಕಾಳಿ ವಿಗ್ರಹ ರಚನೆಗೆ ರಕ್ತಚಂದನ ಮರ: ಜೂನ್ 12 ರಂದು ಮೆರವಣಿಗೆ

ಕುಂದಾಪುರ : ಜಿಲ್ಲೆಯ ಪ್ರಮುಖ ದೈವ ಸ್ಥಾನಗಳಲ್ಲಿ ಒಂದಾಗಿರುವ ಕಟ್‌ಬೇಲ್ತೂರು ಶ್ರೀ ಭದ್ರಕಾಳಿ ದೇವಸ್ಥಾನದ ನೂತನ ಶ್ರೀದೇವಿಯ ವಿಗ್ರಹವದ ರಚನೆಗೆ ಅಗತ್ಯವಾಗಿರುವ ರಕ್ತ ಚಂದನ ಮರವನ್ನು ಜೂ.12 ರಂದು ಶಿವಮೊಗ್ಗದಿಂದ ಕೊಲ್ಲೂರು ಮಾರ್ಗವಾಗಿ ಕಟ್‌ಬೇಲ್ತೂರಿಗೆ ವೈಭವದಿಂದ ತರಲಾಗುವುದು ಎಂದು ದೈವ ಸ್ಥಾನದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪುರಾತನವಾದ ಇತಿಹಾಸವನ್ನು ಹೊಂದಿರುವ ಕಟ್‌ಬೇಲ್ತೂರು ಭದ್ರಕಾಳಿ ಅಮ್ಮನವರ ದೈವ ಸ್ಥಾನದಲ್ಲಿ ನಡೆದ ಪ್ರಶ್ನಾ ಚಿಂತನೆಯಲ್ಲಿ ಮೂಡಿದ ಅಭಿಪ್ರಾಯದಂತೆ ಅಮ್ಮನವರಿಗೆ ರಕ್ತ ಚಂದನ ಮರದಲ್ಲಿ ನೂತನ ವಿಗ್ರಹ ನಿರ್ಮಾಣ ಮಾಡಿ ಪ್ರತಿಷ್ಠಾಪನೆ ಮಾಡಲು ನಿಶ್ಚಯ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಅನುಮತಿಯನ್ನು ಕ್ರಮ ಬದ್ಧವಾಗಿ ಪಡೆದುಕೊಂಡು ಶಿವಮೊಗ್ಗದ ಅರಣ್ಯ ಇಲಾಖೆಯ ಡಿಪೋದಲ್ಲಿ ಇರಿಸಲಾದ ರಕ್ತ ಚಂದನ ಮರವನ್ನು ಜೂ.12 ರಂದು ದೈವ ಸ್ಥಾನಕ್ಕೆ ತಂದು ವಿಗ್ರಹ ರಚನೆ ಮಾಡಲಿರುವ ಕೋಟೇಶ್ವರದ ಪ್ರಸಿದ್ಧ ಶಿಲ್ಪಿಗಳಾದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕೆ.ಲಕ್ಷ್ಮೀನಾರಾಯಣಆಚಾರ್ಯ ಹಾಗೂ ಶಿಲ್ಪಿ ರಾಜಗೋಪಾಲ ಆಚಾರ್ಯ ಅವರಿಗೆ ವಿದ್ಯುಕ್ತವಾಗಿ ಹಸ್ತಾಂತರಿಸಲಾಗುವುದು.

ಜೂ.12 ರಂದು ಬೆಳಿಗ್ಗೆ 11 ರ ಶುಭ ಮಹೂರ್ತದಲ್ಲಿ ಶಿವಮೊಗ್ಗದಿಂದ ಹೊಸನಗರ, ನಗರ, ಸಂಪೇಕಟ್ಟೆ, ಕೊಲ್ಲೂರು, ಇಡೂರು, ವಂಡ್ಸೆ, ದೇವಲ್ಕುಂದ ಮಾರ್ಗವಾಗಿ ವೈಭವದ ಮೆರವಣಿಗೆಯಲ್ಲಿ ರಕ್ತ ಚಂದನ ಮರವನ್ನು ಕಟ್‌ಬೇಲ್ತೂರು ದೈವ ಸ್ಥಾನಕ್ಕೆ ತರಲಾಗುವುದು. ಮಾರ್ಗದ ಮಧ್ಯೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಪೂಜೆಯನ್ನು ಸಲ್ಲಿಸಲಾಗುವುದು. ದೇವಸ್ಥಾನದ ಆಡಳಿತ ಮೊಕ್ತೇಸರರಾದ ವಿಠ್ಠಲ್ ಶೆಟ್ಟಿ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಆನಂದ ಶೆಟ್ಟಿ, ಮೂರು ಮನೆಯವರು ಹಾಗೂ ಮೂರು ಗ್ರಾಮಸ್ಥರ ಸಮನ್ವಯದಲ್ಲಿ ಪೂರ್ವ ಸಿದ್ಧತಾ ಕಾರ್ಯಗಳು ನಡೆಯುತ್ತಿದ್ದು, ಮೆರವಣಿಗೆ ಹಾಗೂ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀದೇವಿಯ ಭಕ್ತರು ದೊಡ್ಡ ಸಂಖ್ಯೆಯಲ್ಲಿ ಸೇರುವ ನಿರೀಕ್ಷೆ ಇದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಪವಿತ್ರ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಕೆ.ಗೋಪಾಲ ಪೂಜಾರಿ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.


Spread the love