ಮಂಗಳೂರಿನ ಕ್ರೀಡಾ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನಕ್ಕೆ ಶಾಸಕ ಕಾಮತ್ ಮನವಿ

Spread the love

ಮಂಗಳೂರಿನ ಕ್ರೀಡಾ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನಕ್ಕೆ ಶಾಸಕ ಕಾಮತ್ ಮನವಿ

ಮಂಗಳೂರು: ಮಂಗಳೂರಿನ ಕ್ರೀಡಾ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರಾದ ರಹೀಂ ಖಾನ್ ಅವರಿಗೆ ಶಾಸಕ ಡಿ ವೇದವ್ಯಾಸ ಕಾಮತ್ ಮನವಿ ಮಾಡಿದ್ದಾರೆ.

ಮಂಗಳೂರಿಗೆ ಆಗಮಿಸಿದ್ದ ಸಚಿವರನ್ನು ಭೇಟಿ ಮಾಡಿದ ಶಾಸಕರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಬರುವ ಮಂಗಳಾ ಕ್ರೀಡಾಂಗಣದ ಸಂಕೀರ್ಣದಲ್ಲಿರುವ ಯು ಶ್ರೀನಿವಾಸ್ ಮಲ್ಯ ಒಳಾಂಗಣ ಕಚೇರಿ ನಿರ್ಮಾಣ, ಮನಪಾ ವ್ಯಾಪ್ತಿಯಲ್ಲಿ ಬರುವ ಮಂಗಳಾ ಕ್ರೀಡಾಂಗಣದಲ್ಲಿ 12.5 ಮೀ ಆಕ್ಟಗನಲ್ ಕಂಬ, 150 ವ್ಯಾಟ್ ಎಲ್ ಇಡಿ ಫ್ಲಡ್ ಲೈಟ್ ಅಳವಡಿಕೆ, ಒಳಾಂಗಣದ ಆವರಣದೊಳಗೆ ಇಂಟರ್ ಲಾಕ್ ಬಿಲ್ಲೆ ಅಳವಡಿಕೆ, ಮಂಗಳಾ ಕ್ರೀಡಾಂಗಣದ ವಾಕರ್ ಪಾಥ್ ಅಭಿವೃದ್ಧಿ, ಮಂಗಳಾ ಕ್ರೀಡಾಂಗಣದ ಸಂಕೀರ್ಣದಲ್ಲಿರುವ ಕಾರ್ಪೋರೇಶನ್ ಬ್ಯಾಂಕ್ ಗ್ರಂಥಾಲಯ ಆವರಣದಲ್ಲಿ ಯುವಸ್ಪಂದನ ಕೇಂದ್ರ ನಿರ್ಮಾಣ, ಮಂಗಳಾ ಕ್ರೀಡಾಂಗಣದ ವೇದಿಕೆ ವಿಸ್ತರಿಸಿ ಮೇಲ್ಛಾವಣಿ ನಿರ್ಮಾಣ, ಮುಂಭಾಗದಲ್ಲಿ ಇಂಟರ್ ಲಾಕ್ ಬಿಲ್ಲೆ ಅಳವಡಿಸಿರುವುದು, ಕರಾವಳಿ ಉತ್ಸವ ಮೈದಾನದ ಒಂದು ಭಾಗದಲ್ಲಿ ಕುಸಿದ ಜಾಗಕ್ಕೆ ತಡೆಗೋಡೆ ನಿರ್ಮಾಣ, ವಾಲಿಬಾಲ್ ಅಂಗಣಕ್ಕೆ ಸುಸಜ್ಜಿತ ಮೇಲ್ಛಾವಣಿ ಹಾಗೂ ಇತರ ಅಭಿವೃದ್ಧಿ ಕಾಮಗಾರಿ ಸೇರಿದಂತೆ ಕ್ರೀಡಾ ಕ್ಷೇತ್ರದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಕೆಲ ಬೇಡಿಕೆಗಳನ್ನು ಲಿಖಿತ ರೂಪದಲ್ಲಿ ಸಚಿವರಿಗೆ ಮನವಿ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿದ ಶಾಸಕರು ಕರಾವಳಿ ಭಾಗದಿಂದ ರಾಷ್ಟ್ರಮಟ್ಟದಲ್ಲಿ ಪಾಲ್ಗೊಳ್ಳುವ ಕ್ರೀಡಾಳುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಯಾವುದೇ ಕ್ರೀಡಾಪಟುವಿಗೂ ಅಭ್ಯಾಸಕ್ಕೆ ತೊಂದರೆಯಾಗಬಾರದು. ಈಗಾಗಲೇ ಕರಾವಳಿ ಭಾಗದಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿರುವವರು ಸೌಲಭ್ಯಗಳ ಕೊರತೆಯಿಂದ ಬಹಳಷ್ಟು ಕಷ್ಟಪಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಅದು ಪುನರಾವರ್ತನೆಯಾಗದಂತೆ ಪಕ್ಷಾತೀತವಾಗಿ ಶ್ರಮಿಸಬೇಕು ಎಂದು ಕ್ರೀಡಾ ಸಚಿವರಿಗೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.


Spread the love