ಮಂಗಳೂರು ಉತ್ತರ ಬಿಜೆಪಿ ಕಾರ್ಯಕರ್ತರಿಗೆ ಅಭಿನಂದನೆ; ಬೇಧಭಾವವಿಲ್ಲದೆ ಅಭಿವೃದ್ಧಿ: ಡಾ.ಭರತ್ ಶೆಟ್ಟಿ

Spread the love

ಮಂಗಳೂರು ಉತ್ತರ ಬಿಜೆಪಿ ಕಾರ್ಯಕರ್ತರಿಗೆ ಅಭಿನಂದನೆ; ಬೇಧಭಾವವಿಲ್ಲದೆ ಅಭಿವೃದ್ಧಿ: ಡಾ.ಭರತ್ ಶೆಟ್ಟಿ

ಮಂಗಳೂರು: ಛಲವಾದಿ ,ಹಾಗೂ ಪ್ರಬಲ ಆತ್ಮವಿಶ್ವಾಸವಿದ್ದಾಗ ಯಾವುದೇ ಕನಸನ್ನು ನನಸು ಮಾಡಲು ಸಾಧ್ಯವಿದೆ. ಶಾಸಕ ಡಾ. ಭರತ್ ಶೆಟ್ಟಿ ಉತ್ಸಾಹಿ ತರುಣರಾಗಿದ್ದು ಮಂಗಳೂರು ಉತ್ತರ ಕ್ಷೇತ್ರದಲ್ಲಿ ಅಭಿವೃದ್ಧಿಯ ಹೊಸ ಶಕೆ ಆರಂಭಿಸಲಿದ್ದಾರೆ ಎಂದು ದ.ಕ ಜಿಲ್ಲಾ ಬಿಜೆಪಿಯ ಪ್ರಭಾರಿ ಪ್ರತಾಪ್ ಸಿಂಹ ನಾಯಕ್ ಹೇಳಿದರು.

ಕಾವೂರಿನಲ್ಲಿ ಮಂಗಳೂರು ಉತ್ತರ ಬಿಜೆಪಿ ಕಾರ್ಯಕರ್ತರ ಅಭಿನಂದನಾ ಸಮಾರಂಭದಲ್ಲಿ ಅವರು ಅಭಿನಂದನಾ ನುಡಿಗಳನ್ನಾಡಿದರು.ಬಿಜೆಪಿ ಕಾರ್ಯಕರ್ತರ ಪಕ್ಷ .ಜೀವಾಳವೇ ಕಾರ್ಯಕರ್ತರಾಗಿದ್ದಾರೆ. ಸಂಘಟನಾತ್ಮಕ ಪ್ರಚಾರ ಈ ಬಾರಿ ಬಿಜೆಪಿಯನ್ನು ಗೆಲ್ಲಿಸಿದೆ.ಕಾರ್ಯಕರ್ತರ ಆಕಾಂಕ್ಷೆಗಳನ್ನು ಅವರ ಬೂತ್ ಮಟ್ಟದಲ್ಲಿನ ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ಶಾಸಕ ಭರತ್ ಶೆಟ್ಟಿ ಅವರು ಇಡೀ ಕ್ಷೇತ್ರವನ್ನು ಹಂತ ಹಂತವಾಗಿ ಅಭಿವೃದ್ಧಿ ಪಡಿಸಲು ಯೋಜನೆ ಹಮ್ಮಿಕೊಳ್ಳಬೇಕು.ಹಿರಿಯ ಕಾರ್ಯಕರ್ತರ ಅಭಿಪ್ರಾಯಗಳನ್ನು ಪರಿಗಣಿಸಿ ಪಕ್ಷದ ಜತೆ ,ಕಾರ್ಯಕರ್ತರ ಜತೆ ಸದಾ ಉತ್ತಮ ಬಾಂಧವ್ಯ ಹೊಂದಿರ ಬೇಕು ಎಂದರು.

ಕೇಂದ್ರದಲ್ಲಿ ಮತ್ತೆ ಮೋದಿ
ಜನರ ಪ್ರಧಾನಿ ಮೋದಿಯನ್ನು ಸೋಲಿಸಲು ಈವರೆಗೆ ಕಚ್ಚಾಡುತ್ತಿದ್ದವರೆಲ್ಲಾ ಒಂದು ಗೂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಕೆಲಸಗಳನ್ನು ನೋಡಿ ಮತ್ತೆ ಹತ್ತಾರು ವರ್ಷ ಅಧಿಕಾರ ಸಿಗಲಾರದು ಎಂಬ ಭೀತಿಯಿಂದ ಅಧಿಕಾರದಾಹಿಗಳು ಒಂದುಗೂಡಿದ್ದಾರೆ. ಕಾರ್ಯಕರ್ತರು ಜನರ ಪ್ರಧಾನಿಯನ್ನು ಗೆಲ್ಲಿಸಲು ಪಣತೊಡಬೇಕಿದೆ.ರಾಜ್ಯದಲ್ಲಿ ಖಾತೆಯ ಹೋರಾಟ ಆರಂಭವಾಗಿದೆ. ಹಣ ಗಳಿಸುವ ಖಾತೆಗೆ ಕಾಂಗ್ರೆಸ್ ,ಜೆಡಿಎಸ್ ಶಾಸಕರು ಮುಗಿ ಬಿದ್ದಿದ್ದಾರೆ. ಜನರಿಗೆ ಒಳಿತು ಮಾಡುವ ಬದಲು ಭೃಷ್ಟಾಚಾರ ಮಾಡಲು ಹಣ ಮಾಡುವ ಖಾತೆ ಕೇಳುತ್ತಿದ್ದಾರೆ.ಅಧಿಕಾರದ ದಾಹಕ್ಕೆ 2019ರ ಕೇಂದ್ರ ಚುನಾವಣೆಯಲ್ಲಿ ಮತದಾರರು ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಸ್ಪಷ್ಟ ಸಂದೇಶವನ್ನು ಈ ಒಕ್ಕೂಟದ ಭೃಷ್ಟ ನಾಯಕರಿಗೆ ನೀಡಲಿದ್ದಾರೆ ಎಂದರು.

 

ಬೇಧಭಾವವಿಲ್ಲದೆ ಅಭಿವೃದ್ಧಿ: ಡಾ.ಭರತ್ ಶೆಟ್ಟಿ

ನಾನು ಕಾರ್ಯಕರ್ತರ ಶಕ್ತಿಯಿಂದ ,ಅಭಿವೃದ್ಧಿ ಪರ,ದೇಶದ ಚಿಂತನೆಯುಳ್ಳ ಮತದಾರರಿಂದ ಆಯ್ಕೆಯಾಗಿದ್ದೇನೆ. ಇದಕ್ಕಾಗಿ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಯಾವ ಕೆಲಸ ಕಾರ್ಯಗಳು ಆಗಬೇಕಿದೆ ಎಂಬುದನ್ನು ಹಿರಿಯ ಅನುಭವಿಗಳಿಂದ ತಿಳಿದು ಮುಂದಡಿ ಇಡುತ್ತೇನೆ.ಹಂತ ಹಂತವಾಗಿ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಅಭಿವೃದ್ಧಿಗೆ ಯೋಜನೆ ರೂಪಿಸಿ ಅನುದಾನ ತರುತ್ತೇನೆ ಎಂದರು. 2019ರಲ್ಲಿ ಸಂಸದ ಸ್ಥಾನಕ್ಕೆ, ಹಾಗೂ ಮಹಾನಗರ ಪಾಲಿಕೆ ಚುನಾವಣೆ ನಡೆಯಲಿದ್ದು ಯಶಸ್ವಿಯಾಗಿ ನಿಭಾಯಿಸಿ ಬಿಜೆಪಿಯನ್ನು ಎರಡೂ ಸ್ಥಾನಗಳಲ್ಲೂ ಅಧಿಕಾರಕ್ಕೆ ತರುವಲ್ಲಿ ನಾವು ಈಗಿನಿಂದಲೇ ಕಾರ್ಯಪ್ರವೃತ್ತರಾಗಬೇಕಿದೆ ಎಂದರು.

ಸಂಸದ ನಳಿನ್ ಕುಮಾರ್ ಕಟೀಲ್, ಚುನಾವಣಾ ಜವಾಬ್ದಾರಿ ಹೊತ್ತಿದ್ದ ಸುಧೀರ್ ಶೆಟ್ಟಿ ಕಣ್ಣೂರು, ಜಗದೀಶ ಶೇಣವ , ಜಿ.ಪಂ ಸದಸ್ಯ ಜನಾರ್ಧನ ಗೌಡ ಶುಭ ಹಾರೈಸಿದರು. ಮುಖಂಡರಾದ ಕಿಶೋರ್ ರೈ, ರುಕ್ಮಯ್ಯ ನಾಯ್ಕ,ಮಹಿಳಾ ಮೋರ್ಚಾದ ಬಬಿತಾ ರವೀಂದ್ರ, ಕಾರ್ಪೊರೇಟರ್ ಗಳು ,ಶಕ್ತಿ ಕೇಂದ್ರದ ಅಧ್ಯಕ್ಷರು,ಹಿರಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.ಕಾರ್ಯದರ್ಶಿ ಅಶೋಕ್ ಕೃಷ್ಣಾಪುರ ಸ್ವಾಗತಿಸಿದರು. ಗಣೇಶ್ ಹೊಸಬೆಟ್ಟು ವಂದಿಸಿದರು.


Spread the love