
ಮಂಗಳೂರು: ಕೊಲೆ ಯತ್ನ ಪ್ರಕರಣದ ಆರೋಪಿಯ ಸೆರೆ
ಮಂಗಳೂರು: ನಗರದ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಯುವಕನೋರ್ವನ ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾದ ಕುಖ್ಯಾತ ಆರೋಪಿಯನ್ನು ಮಂಗಳೂರು ನಗರ ಸಿಸಿಬಿ ಪೊಲೀಸರು ದಸ್ತಗಿರಿ ಮಾಡಿರುತ್ತಾರೆ.
ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ನೆತ್ತಿಲಪದವು ನಿವಾಸಿ ಮನ್ಸೂರ್ ಎಂಬವರಲ್ಲಿ ಮನೆ ಬಾಡಿಗೆ ವಿಚಾರದಲ್ಲಿ ಆರೋಪಿ ನಮೀರ್ ಹಂಸ ಎಂಬಾತನು ಗಲಾಟೆ ಮಾಡಿಕೊಂಡು ಏಕಾಎಕಿ ತನ್ನಲ್ಲಿದ್ದ ತಲವಾರಿನಿಂದ ಹಲ್ಲೆ ನಡೆಸಿ ಕೊಲೆ ಯತ್ನ ನಡೆಸಿದ್ದು ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣದಲ್ಲಿ ಭಾಗಿಯಾದ ಆರೋಪಿ ನಮೀರ್ ಹಂಸನು ಕೃತ್ಯ ನಡೆಸಿದ ನಂತರ ತಲೆಮರೆಸಿಕೊಂಡಿದ್ದನು. ಆತನ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಈ ದಿನ ದಿನಾಂಕ: 29-08-2023 ರಂದು ಆರೋಪಿ ನಮೀರ್ ಹಂಝ @ ಸಮೀರ್ ಹಂಝ @ ದಾಸ್ (39 ಎಂಬಾತನನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮಕ್ಕಾಗಿ ಕೊಣಾಜೆ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿರುತ್ತದೆ.
ಆರೋಪಿ ನಮೀರ್ ಹಂಸ ಎಂಬಾತನು ಈ ಹಿಂದೆ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಇಲ್ಯಾಸ್ ಕೊಲೆ ಪ್ರಕರಣ, ಕೊಣಾಜೆ ಪೊಲೀಸ್ ಠಾಣೆಯಲ್ಲಿ 3 ಕೊಲೆ ಯತ್ನ ಪ್ರಕರಣಗಳು, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಹಲ್ಲೆ, ಅಪಹರಣ, ಕೊಲೆ ಯತ್ನ ಪ್ರಕರಣ ಹೀಗೆ ಒಟ್ಟು 10 ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾನೆ. ಆರೋಪಿ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಎಸಿಪಿ ಪಿ ಎ ಹೆಗಡೆ, ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್ ಹೆಚ್ ಎಂ, ಪಿಎಸ್ಐ ರಾಜೇಂದ್ರ ಬಿ ಹಾಗೂ ಸಿಸಿಬಿ ಸಿಬ್ಬಂದಿಯವರು ಪಾಲ್ಗೊಂಡಿದ್ದರು.