ಮಂಗಳೂರು ಧರ್ಮಕ್ಷೇತ್ರದ ಬಿಷಪರಿಂದ ಈಸ್ಟರ್ 2026ರ ಸಂದೇಶ: ಶಾಂತಿ ಮತ್ತು ಸಂಧಾನಕ್ಕೆ ಕರೆ
ಮಂಗಳೂರು: ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು 2026ರ ಈಸ್ಟರ್ ಹಬ್ಬದ ಸಂದರ್ಭದಲ್ಲಿ ನಾಡಿನ ಜನತೆಗೆ ಹಾಗೂ ಕ್ರೈಸ್ತ ಬಾಂಧವರಿಗೆ ಶುಭಾಶಯಗಳನ್ನು ಕೋರಿದ್ದಾರೆ. ಯೇಸು ಕ್ರಿಸ್ತರ ಪುನರುತ್ಥಾನವು ಕೇವಲ ಒಂದು ಐತಿಹಾಸಿಕ ಘಟನೆಯಲ್ಲ, ಅದು ಜಗತ್ತಿಗೆ ಭರವಸೆ ಮತ್ತು ಶಾಂತಿಯ ಸಂಕೇತವಾಗಿದೆ ಎಂದು ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ಜಗತ್ತಿನಾದ್ಯಂತ ಸಂಘರ್ಷ ಮತ್ತು ಹಿಂಸಾಚಾರಗಳು ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಬಿಷಪ್ ಅವರು, ಇಂದಿನ ಅಶಾಂತಿಯ ವಾತಾವರಣಕ್ಕೆ ಕ್ರಿಸ್ತರ ಪುನರುತ್ಥಾನದ ಸಂದೇಶವೇ ಏಕೈಕ ಪರಿಹಾರವಾಗಿದೆ ಎಂದು ಮಾರ್ಮಿಕವಾಗಿ ನುಡಿದರು. ಯುದ್ಧ ಮತ್ತು ದ್ವೇಷದ ಬದಲು ಮಾತುಕತೆ ಮತ್ತು ಸಂಧಾನದ ಹಾದಿಯನ್ನು ಹಿಡಿಯುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಅವರು ಪ್ರತಿಪಾದಿಸಿದರು.
ಸಮಾಜದ ಎಲ್ಲಾ ಸ್ತರಗಳಲ್ಲಿ “ರಾಜಿಸಂಧಾನ” ಅಥವಾ ಸಾಮರಸ್ಯ ಮೂಡಬೇಕೆಂದು ಕರೆ ನೀಡಿದ ಬಿಷಪ್, “ಧರ್ಮಗಳ ನಡುವೆ, ನೆರೆಹೊರೆಯವರಲ್ಲಿ ಹಾಗೂ ಕುಟುಂಬಗಳ ಒಳಗೆ ಪ್ರೀತಿ ಮತ್ತು ವಿಶ್ವಾಸ ಬೆಳೆಯಬೇಕು. ಈ ಈಸ್ಟರ್ ಹಬ್ಬವು ನಮ್ಮ ಜೀವನದಲ್ಲಿ ಹೊಸ ಅಧ್ಯಾಯವನ್ನು ಬರೆಯಲಿ” ಎಂದು ಹಾರೈಸಿದರು. ದುಃಖ ಮತ್ತು ಸಂಕಟದ ಸುಳಿಯಿಂದ ಮಾನವಕುಲವನ್ನು ಮುಕ್ತಗೊಳಿಸಿ, ಎಲ್ಲರಿಗೂ ಸುಖ-ಶಾಂತಿ ದೊರೆಯಲಿ ಎಂದು ಅವರು ಪ್ರಾರ್ಥಿಸಿದರು.













