ಮಂಗಳೂರು: ರೈತರಿಗೆ ಭಧ್ರತೆ ನೀಡುವ ಕೆಲಸ ಸರಕಾರ ಮಾಡಲಿ: ಕೋಡಿಹಳ್ಳಿ ಚಂದ್ರಶೇಖರ್

Spread the love

ಮಂಗಳೂರು: ರಾಜ್ಯದಲ್ಲಿ ರೈತರಿಗೆ ಭದ್ರತೆ ನೀಡುವ ಕೆಲಸ ಆಗಬೇಕು. ರೈತರಿಗೆ ಪುಕ್ಕಟೆ ಅಕ್ಕಿ ನೀಡುವ ಬದಲು ಜೀವನಾಂಶ, ಆರ್ಥಿಕ ಚೈತನ್ಯ ವನ್ನು ನೀಡಬೇಕು. ರೈತರ ಆತ್ಮಹತ್ಯೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಶಾಶ್ವತ ಪರಿಹಾರವನ್ನು ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯಿಸಿದ್ದಾರೆ.

26-farmers-protest-dc-20150804-025 20-farmers-protest-dc-20150804-019

ಭೂಸ್ವಾಧೀನ ಕಾಯ್ದೆ ಸುಗ್ರೀವಾಜ್ಞೆ, ಕಾನೂನು ಬಾಹಿರವಾಗಿ ಕುಮಾರಧಾರಾ ನದಿಯಲ್ಲಿ ಕಿರು ಜಲ ವಿದ್ಯುತ್ ಯೋಜನೆ, ತುಂಬೆ ಅಣೆಕಟ್ಟು ವಿಸ್ತರಣೆ, ಕೃಷಿ ಸಾಲ ವಸೂಲಾತಿಗಾಗಿ ರೈತರ ಮೇಲೆ ಕ್ರಿಮಿನಲ್ ಮತ್ತು ಸಿವಿಲ್ ದಾವೆ ಹೂಡಿರುವುದನ್ನು ವಿರೋಧಿಸಿ ಇಂದು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿ ಭಟನೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ರೈತರಿಗೆ ಮರುಚೈತನ್ಯ ನೀಡುವ ನಿಟ್ಟಿನಲ್ಲಿ ಸರಕಾರ ಅವರನ್ನು ಸಾಲಮುಕ್ತರನ್ನಾಗಿಸಬೇಕು. ರೈತರಿಗೆ ಮತ್ತೆ ಬಡ್ಡಿರಹಿತ ಸಾಲ ನೀಡಿ ಅವರಲ್ಲಿ ಆರ್ಥಿಕ ಚೈತನ್ಯ ಮೂಡಿಸಬೇಕು ಎಂದವರು ಆಗ್ರಹಿಸಿದರು. ಖಾಸಗಿ ಬಡ್ಡಿ ವ್ಯವಹಾರ ನಡೆಸುತ್ತಿರುವವರಿಂದ ರೈತ ಸಮುದಾಯ ನಲುಗುತ್ತಿದೆ. ಈ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಖಾಸಗಿ ಬಡ್ಡಿ ವ್ಯವಹಾರ ನಿಯಂತ್ರಣ ಕಾಯ್ದೆಗಳನ್ನು ಜಾರಿಗೆ ತಂದಿದ್ದರು. ಈಗಿರುವ ಕಾಯ್ದೆಗಳಿಗೆ ಬಲ ತುಂಬುವ ಮತ್ತು ಹೊಸ ಕಾಯ್ದೆಗಳನ್ನು ಜಾರಿಗೆ ತರುವ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಮಾಡಬೇಕು ಎಂದು ಕೋಡಿಹಳ್ಳಿ ಸಲಹೆ ನೀಡಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ಕುಮಾರ ಸುಬ್ರಹ್ಮಣ್ಯ ಶಾಸ್ತ್ರಿ ಮಾತನಾಡಿ, ಜಿಲ್ಲೆಯಲ್ಲಿ ಅಣೆಕಟ್ಟುಗಳನ್ನು ಎತ್ತರ ಮಾಡುವ ಯೋಜನೆಗಳನ್ನು ಜಾರಿಗೆ ತರುವ ಮೂಲಕ, ಅಣೆಕಟ್ಟಿನ ಜಲಾನಯನ ಪ್ರದೇಶದ ರೈತರನ್ನು ಒಕ್ಕಲೆಬ್ಬಿಸಲಾಗುತ್ತಿದೆ ಎಂದು ಆರೋಪಿಸಿದರು.

ಕೇಂದ್ರ ಕೃಷಿ ಸಚಿವರು ರೈತರ ಆತ್ಮಹತ್ಯೆಗೆ ಪ್ರೇಮ ಪ್ರಕರಣಗಳು ಕಾರಣ ಎಂದು ಹೇಳುವ ಮೂಲಕ ತಮ್ಮ ಮೂರ್ಖತನವನ್ನು ಪ್ರದರ್ಶಿಸಿದ್ದಾರೆ. ಕೇಂದ್ರ ಸಚಿವರ ಹೇಳಿಕೆ ರೈತರನ್ನು ಅವಮಾನ ಮಾಡುವಂತಹದ್ದಾಗಿದೆ ಎಂದವರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಗೂ ಮುನ್ನ ರೈತರು ನಗರದ ಅಂಬೇಡ್ಕರ್ ವೃತ್ತದಿಂದ (ಜ್ಯೋತಿ) ಜಿಲ್ಲಾಧಿಕಾರಿ ಕಚೇರಿಯವರೆಗೆ ಕಾಲ್ನಡಿಗೆ ಜಾಥಾ ನಡೆಸಿದರು. ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಸೇರಿದ ಪ್ರತಿಭಟನಕಾರರು ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿದರು.

ಜಿಲ್ಲಾ ಕಾರ್ಯಾಧ್ಯಕ್ಷ ಬಿ.ಶ್ರೀಧರ ಶೆಟ್ಟಿ, ಗೌರವ ಸಲಹೆಗಾರ ಮುರುವ ಮಹಾಬಲ ಭಟ್, ಜಿಲ್ಲಾ ಸಮಿತಿಯ ಜತೆ ಕಾರ್ಯದರ್ಶಿ ರಾಘವ ಪೂಜಾರಿ ಹಿತ್ತಿಲು, ತುಂಬೆ ಸಂತ್ರಸ್ತ ರೈತರ ಹೋರಾಟ ಸಮಿಯ ಕಾರ್ಯದರ್ಶಿ ಎನ್.ಕೆ.ಇದಿನಬ್ಬ ಮೊದಲಾದವರು ಉಪಸ್ಥಿತರಿದ್ದರು.


Spread the love