ಮಂಗಳೂರು: ಲಂಚ ಸ್ವೀಕರಿಸುತ್ತಿದ್ದ ಸರ್ವೆಯರ್ ಲೋಕಾಯುಕ್ತ ಬಲೆಗೆ

Spread the love

ಮಂಗಳೂರು: ಲಂಚ ಸ್ವೀಕರಿಸುತ್ತಿದ್ದ ಸರ್ವೆಯರ್ ಲೋಕಾಯುಕ್ತ ಬಲೆಗೆ

ಮಂಗಳೂರು: ಲಂಚ ಸ್ವೀಕರಿಸುತ್ತಿದ್ದ ಸರ್ವೆಯರ್ ಒಬ್ಬರು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಮಂಗಳೂರು ತಾಲೂಕಿನ ನೀರುಮಾರ್ಗದಲ್ಲಿ ನಡೆದಿದೆ.

ಫಿರ್ಯಾದಿದಾರರ ಕುಟುಂಬದ ಸ್ನೇಹಿತರಾಗಿರುವ ಶ್ರೀಮತಿ ಅಲ್ಲಿ ಪೀಟರ್ ವಾಸ್, ನೀರುಮಾರ್ಗ ಇವರ ಬಾಬು ಮಂಗಳೂರು ತಾಲೂಕಿನ ನೀರುಮಾರ್ಗ ಗ್ರಾಮದ, ಗುರುಪುರ ಹೋಬಳಿ ಎಂಬಲ್ಲಿರುವ ಸರ್ವೆ ನಂಬರ್ 180-1020 ರಲ್ಲಿ ಒಟ್ಟು 127.50 ಎಕ್ರೆ ಜಮೀನಿನ ಜಂಟಿ ಪಹಣಿಯಲ್ಲಿ ಹೆಸರು ವಿಳಾಸ ನಮೂದಿಸಿರುವ ಶ್ರೀಮತಿ ಸ್ಟೆಲ್ಲಾ ಜಾನೆಟ್, ವಾಸ್ ಕೋಂ ದಿ|| ಜಾನ್ ಪೀಟರ್ ವಾಸ್, ಇವರ ಹೆಸರನ್ನು ಪಹಣಿಯಿಂದ ತೆಗೆಯಲು ನಿಯಮದಂತೆ ಸನ್ನಿ 13.5 ಸೆಂಟ್ಸ್ ಜಮೀನನ್ನು ಸರ್ವೆ ಮಾಡಿ ನಕ್ಷೆ ತಯಾರಿಸಿ ತತ್ಕಾಲ್ ಪೋಡಿ ಮುಖಾಂತರ ತೆಗೆಯುವ ಪ್ರಕ್ರಿಯೆ ಇರುತ್ತದೆ. ಶ್ರೀಮತಿ ಅಲ್ಲಿ ಪೀಟರ್ ವಾಸ್ ಇವರಿಗೆ ಸುಮಾರು 72 ವರ್ಷವಾಗಿದ್ದರಿಂದ ಮತ್ತು ಅವರ ಆರೋಗ್ಯ ಸರಿ ಇಲ್ಲದೇ ಇದ್ದುದರಿಂದ ಸದರಿ ತತ್ಕಾಲ್ ಪೋಡಿ ಮಾಡುವ ಕೆಲಸದ ಜವಾಬ್ದಾರಿಯನ್ನು ಫಿರ್ಯಾದಿದಾರರು ನಿರ್ವಹಿಸುತ್ತಿದ್ದು, ಫಿರ್ಯಾದಿದಾರರು ದಿನಾಂಕ:02.02.2024 ರಂದು ಶ್ರೀಮತಿ ಅಲ್ಲಿ ಪೀಟರ್ ವಾಸ್ ಇವರ ಪರವಾಗಿ ಶ್ರೀಮತಿ ಸ್ಟೆಲ್ಲಾ ಜಾನೆಟ್ ವಾಸ್ ಇವರ ಹೆಸರಿಗೆ ತತ್ಕಾಲ್ ಪೋಡಿ ಮಾಡಿಕೊಡುವ ಬಗ್ಗೆ ಜಿಲ್ಲಾಧಿಕಾಲಗಳ ಕಛೇರಿ ಮಂಗಳೂರು ಇಲ್ಲಿನ ಪಹಣಿ ವಿಭಾಗದಲ್ಲಿ ಆನ್ಲೈನ್ ಮುಖಾಂತರ ಜಮೀನಿನ ತತ್ಕಾಲ್ ಪೋಡಿಗಾಗಿ ಅರ್ಜಿಯನ್ನು ಸಲ್ಲಿಸಿದ್ದು, ಈ ಸಮಯ ಸರ್ಕಾರಿ ಶುಲ್ಕ 1500/- ಪಾವತಿಸಿ ರಶೀದಿ ಪಡೆದಿರುತ್ತಾರೆ.

ದಿನಾಂಕ 29.02.2024 ರಂದು ಶೀತಲ್ ರಾಜ್ ಎಸ್.ಜಿ, ಸರ್ವೆಯರ್, ಸರ್ವೆ ಇಲಾಖೆ, ಮಿನಿ ವಿಧಾನಸೌಧ, ಮಂಗಳೂರು ತಾಲೂಕು ಇವರು ಸರ್ವೆಗೆ ಬಂದಿದ್ದು, ಸದ್ರಿ ಜಮೀನಿನ ಸರ್ವೆ ಕಾರ್ಯ ನಡೆಸಿ ಸ್ಥಳ ಮಹಜರು ನಡೆಸಿರುತ್ತಾರೆ. ಬಳಿಕ ಸದ್ರಿ ಜಮೀನಿನ ನಕ್ಷೆ ನೀಡಲು ಸ್ವಲ್ಪ ಖರ್ಚು ಇದೆ ಎಂದು ತಿಳಿಸಿ ಸರ್ವೆಯರ್ ಶೀತಲ್ ರಾಜ್ ಇವರು ರೂ 5,000/- ಕೊಡಿ ಎಂದು ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದು. ಫಿರ್ಯಾದಿದಾರರು ಸ್ವಲ್ಪ ಕಡಿಮೆ ಮಾಡಿ ಎಂದು ಚರ್ಚೆ ಮಾಡಿದಾಗ ರೂ 4,000/- ಕೊಡಿ ಎಂದು ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ.

ಈ ದಿನ ಶೀತಲ್ ರಾಜ್ ಎಸ್.ಜಿ, ಸರ್ವೆಯರ್, ಸರ್ವೆ ಇಲಾಖೆ, ಮಿನಿ ವಿಧಾನಸೌಧ, ಮಂಗಳೂರು ತಾಲೂಕು ಇವರು ಪಿರಾದುದಾರರಿಂದ ರೂ.4000/- (ನಾಲ್ಕು ಸಾವಿರ) ಲಂಚದ ಹಣವನ್ನು ಸ್ವೀಕರಿಸುವಾಗ ಸ್ಥಳದಲ್ಲಿಯೇ ಸಿಕ್ಕಿಬಿದ್ದಿರುತ್ತಾರೆ. ಸದರಿ ಆರೋಪಿತರನ್ನು ದಸ್ತಗಿರಿ ಮಾಡಿ ಲಂಚದ ಹಣವನ್ನು ವಶಪಡಿಸಿಕೊಂಡು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.

ಶ್ರೀ ಸಿ.ಎ. ಸೈಮನ್, ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಮಂಗಳೂರು ರವರ ಮಾರ್ಗದರ್ಶನದಲ್ಲಿ, ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಚಲುವರಾಜು. ಬಿ, ಡಾ|| ಗಾನ ಪಿ ಕುಮಾರ್, ಹಾಗೂ ಪೊಲೀಸ್ ನಿರೀಕ್ಷಕರಾದ ಶ್ರೀ ಅಮಾನುಲ್ಲಾ.ಎ, ಶ್ರೀ ಸುರೇಶ್ ಕುಮಾರ್.ಪಿ ಇವರು ಸಿಬ್ಬಂದಿಗಳ ಜೊತೆ ಟ್ರ್ಯಾಪ್ ಕಾರ್ಯಾಚರಣೆ ಕೈಗೊಂಡಿರುತ್ತಾರೆ.


Spread the love