ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕಿರುಕುಳ, ವಿಮಾನ ನಿಲ್ದಾಣ ಪ್ರಾಧಿಕಾರ ನಿರ್ದೇಶಕರ ಭೇಟಿ, ಪ್ರತಿಭಟನೆ ಎಚ್ಚರಿಕೆ

Spread the love

ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕಿರುಕುಳ, ವಿಮಾನ ನಿಲ್ದಾಣ ಪ್ರಾಧಿಕಾರ ನಿರ್ದೇಶಕರ ಭೇಟಿ, ಪ್ರತಿಭಟನೆ ಎಚ್ಚರಿಕೆ

 ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇತ್ತೀಚಿಗೆ ಕಸ್ಟಮ್ಸ್ ಮತ್ತು ಇಮಿಗ್ರೇಷನ್ ವಿಭಾಗದ ಸಿಬ್ಬಂದಿಗಳು ತಪಾಸಣೆ ಹೆಸರಿನಲ್ಲಿ ಪ್ರಯಾಣಿಕರಿಗೆ ಕಿರುಕುಳ ಮತ್ತು ದಬ್ಬಾಳಿಕೆ ನಡೆಸುತ್ತಿರುವ ಸಿಬ್ಬಂದಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿ ಇಂದು ಮಂಗಳೂರು ವಿಮಾನ ನಿಲ್ದಾಣ ಬಳಕೆದಾರರ ಹಿತರಕ್ಷಣಾ ಸಮಿತಿಯ ನೇತೃತ್ವದ ನಿಯೋಗವು ವಿಮಾನ ನಿಲ್ದಾಣ ನಿರ್ದೇಶಕರಾದ ವಿ ವೆಂಕಟೇಶ್ವರ ರಾವ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಸೂಕ್ತ ಕ್ರಮಕ್ಕೆ ಆಗ್ರಹಿಸಿತು.

ಕಸ್ಟಮ್ಸ್ ಅಧಿಕಾರಿಗಳ ಅಮಾನವೀಯ ವರ್ತನೆಯಿಂದಾಗಿ ವಿಮಾನ ನಿಲ್ದಾಣದ ಘನತೆ ಮತ್ತು ಗೌರವಕ್ಕೆ ಧಕ್ಕೆ ಆಗುತ್ತಿದೆ ಕೇರಳದ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮಂಗಳೂರು ವಿಮಾನ ನಿಲ್ದಾಣದ ದಬ್ಬಾಳಿಕೆಗಳ ವಿರುದ್ಧ ಅಭಿಯಾನವೇ ನಡೆಯುತ್ತಿದೆ, ಮಂಗಳೂರು ವಿಮಾನ ನಿಲ್ದಾಣಕ್ಕಾಗಿ ಇಲ್ಲಿನ ಜನರು ನೆಲ ಜಲ ಎಲ್ಲವನ್ನು ತ್ಯಾಗ ಮಾಡಿ ಇಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಮೇಲ್ದರ್ಜೆಗೇರಿದೆ. ಇಲ್ಲಿಂದ ಪ್ರಯಾಣಿಸುವ ವಿಮಾನ ಯಾತ್ರಿಗಳೊಂದಿಗೆ ಒಳ್ಳೆಯ ರೀತಿಯಲ್ಲಿ ವ್ಯವಹರಿಸುವಂತೆ ಸಿಬ್ಬಂದಿಗಳಿಗೆ ಸೂಚಿಸಬೇಕೆಂದು ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಸಮಿತಿ ಸಂಚಾಲಕ ಬಿ. ಕೆ ಇಂತಿಯಾಜ್ ಮಾತನಾಡುತ್ತಾ ನಿರ್ದಿಷ್ಟ ಸಮುದಾಯ ಮತ್ತು ಕಾಸರಗೋಡು ಭಟ್ಕಳದ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ತಪಾಸಣೆ ಹೆಸರಿನಲ್ಲಿ ಅವಮಾನ ಮಾಡಲಾಗುತ್ತಿದೆ ಇದು ವಿಮಾನ ನಿಲ್ದಾಣದ ಭವಿಷ್ಯದ ಮೇಲೆ ದೂರಗಾಮಿ ಪರಿಣಾಮ ಬೀರಬಹುದು ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಕಳವಳ ವ್ಯಕ್ತಪಡಿಸಿದ ಅವರು ಕಸ್ಟಮ್ಸ್ ಮತ್ತು ಇಮಿಗ್ರೇಷನ್ ವಿಭಾಗದ ಸಿಬ್ಬಂದಿಗಳು ತಮ್ಮ ವರ್ತನೆಯನ್ನು ಸರಿಪಡಿಸಿ ಪ್ರಯಾಣಿಕ ಸ್ನೇಹಿ ವಿಮಾನ ನಿಲ್ದಾಣವಾಗಿ ಮಾರ್ಪಡಿಸಬೇಕು ಮತ್ತು ವಿಮಾನ ನಿಲ್ದಾಣದಲ್ಲಿ ಕೋಮುವಾದಿ ಮನೋಭಾವನೆಯ ಸಿಬ್ಬಂದಿಗಳಿಂದ ವಿಮಾನ ನಿಲ್ದಾಣವನ್ನು ಮುಕ್ತಗೊಳಿಸಿ ವಿಮಾನ ನಿಲ್ದಾಣದ ಸೌಹಾರ್ದತೆಯನ್ನು ಉಳಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಅವರು ಇದೇ ರೀತಿ ಪ್ರಯಾಣಿಕರೊಂದಿಗೆ ದುರ್ವರ್ತನೆ ಮುಂದುವರಿದಲ್ಲಿ ವಿಮಾನ ಯಾತ್ರಿಗಳನ್ನು ಸಂಘಟಿಸಿ ತೀವ್ರ ರೀತಿಯ ಪ್ರತಿಭಟನೆ ನಡೆಸಬೇಕಾದೀತು ಎಂದು ಎಚ್ಚರಿಕೆ ನೀಡಿದರು.

ನಿಯೋಗದಲ್ಲಿ ಸಮಿತಿಯ ಪ್ರಮುಖರಾದ ಹಾರಿಸ್ ಬೈಕಂಪಾಡಿ, ಮೊಹ್ಸಿರ್ ಅಹ್ಮದ್ ಸಾಮನಿಗೆ, ಬಾವ ಪದರಂಗಿ, ಕೇ.ಮಧುಸೂದನ ಗೌಡ, ಬಿ.ಎಸ್ ಬಷೀರ್ ಅಹ್ಮದ್ ಜೋಕಟ್ಟೆ, ಮೊಹಮ್ಮದ್ ಸಾಲಿಹ್ ಬಜ್ಪೆ, ಬಾತಿಷ್ ಅಳಕೆಮಜಲು, ಕಿಶೋರ್ ಶೆಟ್ಟಿ, ಮುಫೀದ್ ಉಪಸ್ಥಿತರಿದ್ದರು.


Spread the love