ಮಕ್ಕಳು, ಮಹಿಳೆಯರ ಕುರಿತ ಪ್ರಕರಣ ವರದಿ ಬರೆಯುವಾಗ ಅವರ ಘನತೆ ಕಾಯುವುದು ಅಗತ್ಯ – ಎಸ್ಪಿ ಲಕ್ಷ್ಮಣ್ ನಿಂಬರ್ಗಿ

Spread the love

ಮಕ್ಕಳು, ಮಹಿಳೆಯರ ಕುರಿತ ಪ್ರಕರಣ ವರದಿ ಬರೆಯುವಾಗ ಅವರ ಘನತೆ ಕಾಯುವುದು ಅಗತ್ಯ – ಎಸ್ಪಿ ಲಕ್ಷ್ಮಣ್ ನಿಂಬರ್ಗಿ

ಉಡುಪಿ : ಮಕ್ಕಳು ಮತ್ತು ಮಹಿಳೆಯ ಕುರಿತು ಯಾವುದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮ ವರದಿಗಾರರು ಬರೆಯುವಾಗ ಮಗು ಮತ್ತು ಮಹಿಳೆಯರ ಘನತೆಯನ್ನು ಕಾಯ್ದುಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಲಕ್ಷ್ಮಣ್ ಬ. ನಿಂಬರಗಿ ಹೇಳಿದ್ದಾರೆ.

ಅವರು ಗುರುವಾರ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಡುಪಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ ಜಿಲ್ಲಾ ಪಂಚಾಯತ್ನ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಮಾಧ್ಯಮ ಪ್ರತಿನಿಧಿಗಳಿಗೆ ಮತ್ತು ಪೊಲೀಸ್ ಅಧಿಕಾರಿಗಳಿಗೆ ಮಕ್ಕಳ ಹಕ್ಕುಗಳ ಹಾಗೂ ಮಕ್ಕಳ ಕಾನೂನುಗಳ ಕುರಿತು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ಮಕ್ಕಳು ಹಾಗೂ ಮಹಿಳೆಯರಿಗೆ ಯಾವುದೇ ಸ್ವಾತಂತ್ರ್ಯ ಇರಲಿಲ್ಲ ಆದರೆ ಸ್ವಾತಂತ್ರ್ಯ ನಂತರ ಅನೇಕ ಬದಲಾವಣೆಗಳು ಆಗಿವೆ, ಪ್ರಸ್ತುತ ಒಂದು ಮಗು ಜನಿಸಿದಾಗಿನಿಂದ ಬೆಳೆಯುವ ಪ್ರತಿಯೊಂದು ಹಂತದಲ್ಲೂ ಆ ಮಗುವಿನ ಬೆಳವಣಿಗೆಗೆ ಪೂರಕವಾಗುವಂತಹ ವಿವಿಧ ಯೋಜನೆಗಳನ್ನು ಸರಕಾರ ಜಾರಿಗೊಳಿಸಿದೆ ಈ ಬಗ್ಗೆ ಸಾರ್ವಜನಿಕರಿಗೆ ಸರಿಯಾದ ಮಾಹಿತಿಯನ್ನು ಮುಟ್ಟಿಸುವಂತಹ ಕೆಲಸ ಮಾಡಬೇಕು, ಮಕ್ಕಳ ಕಲ್ಯಾಣ ಸಮಿತಿಯಿಂದ ಮಕ್ಕಳ ವಿಚಾರಕ್ಕೆ ಸಂಬಂಧಿಸಿ ನಡೆಯುವಂತಹ ಕಾರ್ಯಕ್ರಮಗಳು ಸರಕಾರದ ಕಾರ್ಯಕ್ರಮವಾಗಿದ್ದು ಈ ಕಾರ್ಯಕ್ರಮಗಳನ್ನು ನಿರ್ಲಕ್ಷಿಸದೇ ಮಾಧ್ಯಮದವರು ಮಾಹಿತಿ ನೀಡಬೇಕು , ಯಾವುದೇ ಅಪರಿಚಿತ ಮಗು ಸಿಕ್ಕಾಗ ಆ ಮಗುವಿನ ಕುರಿತು ಬರೆಯಲು ವಿಶೇಷ ನ್ಯಾಯಾಲಯದ ಅನುಮತಿ ಪಡೆಯಬೇಕಾಗುತ್ತದೆ ಎಂದು ತಿಳಿಸಿದರು.

ಮಕ್ಕಳ ಕಲ್ಯಾಣ ಸಮಿತಿ ಸಂಘರ್ಷಕ್ಕೆ ಒಳಗಾದ ಮಗುವಿನ ಸ್ವ-ಹಿತಾಸಕ್ತಿಯನ್ನು ಕಾಪಾಡುತ್ತದೆ. ಅನ್ಯಾಯಕ್ಕೆ ಒಳಗಾದ ಮಕ್ಕಳ ಪರವಾಗಿ ಯಾವುದೇ ವ್ಯಕ್ತಿ ದೂರು ದಾಖಲಿಸಬಹುದು. ಮಕ್ಕಳ ಮತ್ತು ಮಹಿಳೆಯರ ವಿಚಾರಕ್ಕೆ ಸಂಬಂಧಿಸಿ ಯಾವುದೇ ವಿಚಾರವನ್ನು ಮಾಧ್ಯಮದವರು ಟಿಆರ್ಪಿ ಗೋಸ್ಕರ ವೈಭವೀಕರಿಸಬಾರದು. ಸಂಘರ್ಷಕ್ಕೆ ಒಳಗಾದ ಮಕ್ಕಳ ಕುರಿತು ಬರೆಯುವ ಯಾವುದೇ ಬರವಣಿಗೆ ನೈಜವಾಗಿರಬೇಕು , ಮಕ್ಕಳು ಹಾಗೂ ಅವರ ಕುಟುಂಬವನ್ನು ಭಯ ಪಡಿಸುವಂತಿರಬಾರದು, ಅನ್ಯಾಯಕ್ಕೊಳಗಾದ ಮಕ್ಕಳನ್ನು ವಿಚಾರಣೆ ನಡೆಸುವಾಗ ಪೊಲೀಸರು ಇತರೆ ಅಪರಾಧಿಗಳೊಂದಿಗೆ ವರ್ತಿಸುವಂತೆ ವರ್ತಿಸುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತದೆ. ಪೊಲೀಸರಿಗೂ ಮಕ್ಕಳನ್ನು ವಿಚಾರಣೆ ನಡೆಸುವ ಕುರಿತು ತರಬೇತಿ ನೀಡಲಾಗುತ್ತಿದೆ ಎಂದರು.

ಕಾರ್ಯಗಾರದಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಹಿರಿಯ ಸಹಾಯಕ ಸರಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ್ ನಾಯಕ್ ಮಾತನಾಡಿ, ಬಾಲ ನ್ಯಾಯ ಕಾಯ್ದೆಯ ಕುರಿತು ಮಾಹಿತಿ ನೀಡಿದರು. ಈ ಕಾಯ್ದೆಯ ಪ್ರಕಾರ ಯಾವುದೇ ಮಗು ಅಪರಾದ ಮಾಡಿದಲ್ಲಿ ಆ ಮಗು ಅಪರಾಧ ಮಾಡಲು ಕಾರಣವಾದ ಸನ್ನಿವೇಶ ಒತ್ತಡಗಳನ್ನು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ. ಇಲ್ಲಿ ಮಗುವಿಗೆ ಶಿಕ್ಷೆ ನೀಡುವ ಬದಲು ಆ ಮಗುವಿಗೆ ಪುನರ್ವಸತಿ ಕಲ್ಪಿಸಿ ಮಗುವನ್ನು ಸಮಾಜದ ಮುಖ್ಯ ಭೂಮಿಕೆಗೆ ತರುವ ಪ್ರಯತ್ನ ಮಾಡಲಾಗುತ್ತದೆ. ಬಾಲ ನ್ಯಾಯ ಮಂಡಳಿಯಲ್ಲಿ ನಡೆಯುವ ಯಾವುದೇ ಪ್ರಕರಣವನ್ನು ಬಹಿರಂಗ ಪಡಿಸಬಾರದು ಎಂದರು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯೆ ವನಿತಾ ಎನ್ ತೊರವಿ ಪ್ರಾಸ್ತಾವಿಕ ಮಾತುಗಳನ್ನು ನುಡಿದರು. ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿ ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಸಂದಿಗ್ಧ ಚಿತ್ರವನ್ನು ಪ್ರದರ್ಶಿಸಲಾಯಿತು.

ಕಾರ್ಯಗಾರದಲ್ಲಿ ಮಣಿಪಾಲದ ಸ್ಕೂಲ್ ಆಫ್ ಕಮ್ಯುನಿಕೇಶನ್ನ ಪತ್ರಕೋದ್ಯಮ ವಿಭಾಗದ ಮುಖ್ಯಸ್ಥೆ ಡಾ.ಶುಭ, ನಟ, ನಿರ್ಮಾಪಕ ಸುಚೇಂದ್ರ ಪ್ರಸಾದ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಗ್ರೇಸಿ ಗೊನ್ಸಾಲ್ವೀಸ್, ಮಕ್ಕಳ ಕಲ್ಯಾಣ ಸಮಿತಿಯ ಮೋಹನ್ ಸಾಲಿಕೇರಿ ಉಪಸ್ಥಿತರಿದ್ದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವೀಣಾ ಸ್ವಾಗತಿಸಿದರು, ಶಿಕ್ಷಕ ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು.


Spread the love