ಮಧ್ಯರಾತ್ರಿ ಕಾರಿನ ಟಯರ್ ಪಂಕ್ಚರ್; ಪ್ರವಾಸಿಗರಿಗೆ ನೆರವಾಗಿ ಮಾನವೀಯತೆ ಮೆರೆದ ಅಣ್ಣಾಮಲೈ!

Spread the love

ಮಧ್ಯರಾತ್ರಿ ಕಾರಿನ ಟಯರ್ ಪಂಕ್ಚರ್; ಪ್ರವಾಸಿಗರಿಗೆ ನೆರವಾಗಿ ಮಾನವೀಯತೆ ಮೆರೆದ ಅಣ್ಣಾಮಲೈ!

ಚಿಕ್ಕಮಗಳೂರು: ಸದಾ ಜನರ ಬಗ್ಗೆ ಕಾಳಜಿ ವಹಿಸುವುದರೊಂದಿಗೆ ಖಡಕ್‌ ಮಾತು, ಬಿರುಸಿನ ಕೆಲಸದಿಂದಾಗಿ ಎಲ್ಲರ ಮೆಚ್ಚುಗೆ ಗಳಿಸಿರುವ ಚಿಕ್ಕಮಗಳೂರು ಎಸ್‌ಪಿ ಅಣ್ಣಾಮಲೈ ಮತ್ತೆ ತಮ್ಮ ಎಂದಿನ ಶೈಲಿಯಲ್ಲೇ ಪ್ರವಾಸಿಗರೊಬ್ಬರಿಗೆ ಹೀರೋ ಆಗಿದ್ದಾರೆ.

ಹೌದು, ಸಾಮಾನ್ಯವಾಗಿ ಅಪಘಾತ, ಮಾರ್ಗಮಧ್ಯೆ ವಾಹನ ಕೆಟ್ಟು ನಿಂತಾಗ ಸಹಾಯ ಮಾಡುವರೇ ಕಡಿಮೆ. ಅಂತಹದರಲ್ಲಿ, ಬೆಂಗಳೂರಿನ ಪ್ರವಾಸಿಗರ ಕಾರೊಂದು ಪಂಕ್ಚರ್‌ ಆಗಿ ನಿಂತಿದ್ದ ವೇಳೆ ಸ್ವತಃ  ಎಸ್ಪಿ ಅಣ್ಣಾಮಲೈ ಕೈಯಲ್ಲಿ ಸ್ಪ್ಯಾನರ್‌ ಹಿಡಿದು ಟೈರ್ ಬಿಚ್ಚುವ ಪ್ರಯತ್ನ ನಡೆಸಿ ಸುದ್ದಿಯಾಗಿದ್ದಾರೆ.  ಇದು ಅಚ್ಚರಿಯಾದರೂ ಸತ್ಯ.

ಕಳೆದ ರಾತ್ರಿ ಚಿಕ್ಕಮಗಳೂರು-ಶೃಂಗೇರಿ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ಬೆಂಗಳೂರಿನ ಕಾರೊಂದು ಮತ್ತಾವರ ಗ್ರಾಮದ ಬಳಿ ಪಂಕ್ಚರ್‌ ಆಗಿ ನಿಂತಿತ್ತು. ರಸ್ತೆಯ ಸುತ್ತಮುತ್ತಲೆಲ್ಲಾ ಮರಗಳಿದ್ದರಿಂದ ಪ್ರವಾಸಿಗರು ಆತಂಕದಲ್ಲಿದ್ದರು. ಈ ವೇಳೆ ಕೊಪ್ಪದಿಂದ ಚಿಕ್ಕಮಗಳೂರಿಗೆ ಆಗಮಿಸುತ್ತಿದ್ದ ಅಣ್ಣಾಮಲೈ ಸ್ವತಃ ತಾವೇ ಕೈಯಲ್ಲಿ ಸ್ಪ್ಯಾನರ್ ಹಿಡಿದು ಟೈರ್ ಬಿಚ್ಚಲು ಯತ್ನಿಸಿದ್ದಾರೆ.

ಟೈರ್ ಬಿಚ್ಚಲು ಸಾಧ್ಯವಾಗದ ವೇಳೆ ತಮ್ಮ ಸಿಬ್ಬಂದಿಗೆ ಫೋನ್ ಮಾಡಿ ಸ್ಥಳಕ್ಕೆ ಬರುವಂತೆ ತಿಳಿಸಿದರು. ಇದೇ ವೇಳೆ ಕಾರಿನಲ್ಲಿದ್ದ ಬೆಂಗಳೂರು ಪ್ರವಾಸಿಗರನ್ನು ತಮ್ಮ ಕಾರಿನಲ್ಲಿ ನಗರಕ್ಕೆ ತಂದು ಬಿಟ್ಟರು.

ಎಸ್ಪಿ ಅಣ್ಣಾಮಲೈ ಅವರ ಈ ಮನೋಭಾವ ಕಂಡು ಕಾರ್‌ ಮಾಲೀಕ ಸಂತಸ ವ್ಯಕ್ತಪಡಿಸಿದರಲ್ಲದೆ, ಎಸ್‌ಪಿ ಕಾರ್ಯಕ್ಕೆ ಅಭಿನಂದನೆ ತಿಳಿಸಿದ್ರು.


Spread the love