ಮರಳು ಮಾಫಿಯಾದವರಿಂದ ಉಳಿಯ-ಪಾವೂರು ಸೇತುವೆ ಧ್ವಂಸ, ವಾಹನಗಳಿಗೆ ಹಾನಿ

Spread the love

ಮರಳು ಮಾಫಿಯಾದವರಿಂದ ಉಳಿಯ-ಪಾವೂರು ಸೇತುವೆ ಧ್ವಂಸ, ವಾಹನಗಳಿಗೆ ಹಾನಿ

ಮಂಗಳೂರು: ಉಳ್ಳಾಲ ವಿಧಾನಸಭಾ ವ್ಯಾಪ್ತಿಯ ಉಳಿಯ -ಪಾವೂರಿನಲ್ಲಿ ಗ್ರಾಮಸ್ಥರೇ ಸೇರಿ ನಿರ್ಮಿಸಿದ ತಾತ್ಕಾಲಿಕ ಸೇತುವೆಯನ್ನು ಮರಳು ಮಾಫಿಯಾದ ದುಷ್ಕರ್ಮಿಗಳು ಶನಿವಾರ ಬೆಳಗಿನ ಜಾವ ಧ್ವಂಸಗೊಳಿಸಿದ ಘಟನೆ ನಡೆದಿದೆ.

ಸುಮಾರು 18 ಲಕ್ಷ ರೂಪಾಯಿ ವೆಚ್ಚದಲ್ಲಿ ನಾಗರಿಕರೇ ತಮ್ಮ ಸ್ವಂತ ಹಣದಲ್ಲಿ ಸೇತುವೆಯನ್ನು ಕಟ್ಟಿದ್ದು ಅದರ ಕೆಲಸ ಪ್ರಗತಿಯಲ್ಲಿತ್ತು. ಈ ಭಾಗದಲ್ಲಿ ಮರಳು ಮಾಫಿಯಾ ಅವ್ಯಾಹತವಾಗಿ ನಡಯುತ್ತಿದ್ದು ಇದರ ವಿರುದ್ದ ಗ್ರಾಮಸ್ಥರು ಪ್ರತಿಭಟಿಸಿದ್ದು ಇದಕ್ಕಾಗಿಯೇ ದುಷ್ಕರ್ಮಿಗಳು ಈ ಕೃತ್ಯವನ್ನು ಎಸಗಿದ್ದಾರೆ ಎನ್ನಲಾಗಿದೆ.

ಶನಿವಾರ ಬೆಳಿಗ್ಗಿನ ಜಾವ ಸುಮಾರು 1.30 ರ ಹೊತ್ತಿಗೆ ಮರಳು ಮಾಫಿಯಾದ ದುಷ್ಕರ್ಮಿಗಳು ಸೇತುವೆಯನ್ನು ಧ್ವಂಸಗೊಳಿಸಿದ್ದಲ್ಲದೆ ನದಿ ತೀರದಲ್ಲಿ ನಿಲ್ಲಿಸಿದ್ದ 4 ದ್ವಿಚಕ್ರ ವಾಹನಗಳು ಮತ್ತು ಒಂದು ಅಟೋ ರಿಕ್ಷಾವನ್ನು ಕೂಡ ಹಾನಿಗೊಳಿಸಿದ್ದಾರೆ. ಮರಳು ಮಾಫಿಯಾದ ವಿರುದ್ದ ಜಿಲ್ಲಾಡಳಿತಕ್ಕೆ ಹಾಗೂ ಇಲಾಖೆಗಳಿಗೆ ಹಲವಾರು ಬಾರಿ ದೂರು ನೀಡಿದರೂ ಸಹ ಯಾವುದೇ ಪ್ರಯೋಜವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಇತ್ತೀಚೆಗೆ ಗ್ರಾಮಸ್ಥರೇ ಸೇರಿಕೊಂಡು ಸುಮಾರು 46 ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ದೋಣಿಗಳನ್ನು ಹಿಡಿದು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದು ಇದರಿಂದ ಕೆರಳಿದ ಮರಳು ಮಾಫಿಯಾದವರು ಸೇತುವೆ ಹಾಗೂ ವಾಹನಗಳನ್ನು ಧ್ವಂಸಗೊಳಿಸಿದೆ ಎನ್ನಲಾಗಿದೆ. ಮರಳು ಮಾಫಿಯಾದವರಿಂದ ಸ್ಥಳೀಯ ನಿವಾಸಿಗಳಿಗೆ ರಕ್ಷಣೆ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದು ಪ್ರಕರಣವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸುವಂತೆ ಆಗ್ರಹಿಸಿದ್ದಾರೆ.


Spread the love