ಮಹಾತ್ಮ ಗಾಂಧೀಜಿಯವರನ್ನು ಖಳನಾಯಕನಾಗಿ ಬಿಂಬಿಸಲಾಗುತ್ತಿದೆ: ಪತ್ರಕರ್ತ ಶ್ರೀಕಾಂತ ಹೆಮ್ಮಾಡಿ ಆತಂಕ

Spread the love

ಮಹಾತ್ಮ ಗಾಂಧೀಜಿಯವರನ್ನು ಖಳನಾಯಕನಾಗಿ ಬಿಂಬಿಸಲಾಗುತ್ತಿದೆ: ಪತ್ರಕರ್ತ ಶ್ರೀಕಾಂತ ಹೆಮ್ಮಾಡಿ ಆತಂಕ

  • ಸ್ವಾತಂತ್ರ್ಯ ಹೋರಾಟದ ಮುಂಚೂಣಿ ನಾಯಕ ಗಾಂಧೀಜಿಯವರ ವಿಚಾರಾಧರೆಗಳನ್ನು ಜೀವಂತವಾಗಿರಿಸಲು ವಿದ್ಯಾರ್ಥಿಗಳಿಗೆ ಕರೆ

ಕುಂದಾಪುರ: ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ತರವಾದ ಪಾತ್ರ ವಹಿಸಿದ್ದ ಗಾಂಧೀಜಿಯವರನ್ನು ದೇವರಂತೆಯೇ ಆರಾಧಿಸುತ್ತಿದ್ದೆವು. ಆದರೆ ಬದಲಾದ ಕಾಲಘಟ್ಟದಲ್ಲಿ ರಾಜಕೀಯ ದ್ವೇಷಗಳಿಂದಾಗಿ ಮಹಾತ್ಮ‌ಗಾಂಧೀಜಿ ಅವರನ್ನು ಖಳನಾಯಕನಾಗಿ ಬಿಂಬಿಸಲಾಗುತ್ತಿರುವುದು ಅತ್ಯಂತ ಕಳವಳಕಾರಿ ಬೆಳವಣಿಗೆ ಎಂದು ಪತ್ರಕರ್ತ ಶ್ರೀಕಾಂತ ಹೆಮ್ಮಾಡಿ ಆತಂಕ ವ್ಯಕ್ತಪಡಿಸಿದರು.

ಅವರು ವಿವಿವಿ ಮಂಡಳಿ ಆಡಳಿತದ ಹೆಮ್ಮಾಡಿ ಜನತಾ ಪ್ರೌಢ ಶಾಲೆಯಲ್ಲಿ ಬುಧವಾರ ಜರುಗಿದ ಗಾಂಧಿ ಜಯಂತಿ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು‌.

ಧರ್ಮ ರಾಜಕಾರಣದ ಕೆಟ್ಟ ಶಕ್ತಿಗಳು ಯುವ ಸಮುದಾಯದ ಮಧ್ಯೆ ಗಾಂಧೀಜಿಯ ಬಗ್ಗೆ ಅಪಪ್ರಚಾರಗಳು, ಅಸಹನೀಯ ಬರಹಗಳನ್ನು ಭಿತ್ತರಿಸಿ ಈ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವಮಾನದ ಪೂರ್ತಿ ಸಮಯವನ್ನು ಮೀಸಲಿಟ್ಟ ಗಾಂಧೀಜಿಯವರ ವ್ಯಕ್ತಿತ್ವ ಹರಣ ಮಾಡುತ್ತಿದೆ. ಈ ದೇಶದ ಮುಂದಿನ ಪ್ರಜೆಗಳಾದ ನೀವೆಲ್ಲರೂ ಮಹಾತ್ಮ ಗಾಂಧೀಜಿಯವರ ತತ್ವಾದರ್ಶಗಳು, ಸ್ವಾತಂತ್ರ್ಯ ಹೋರಾಟಕ್ಕೆ ಅವರು ನೀಡಿದ ಕೊಡುಗೆಗಳನ್ನು ತಿಳಿದುಕೊಳ್ಳುವ ಮೂಲಕ ಗಾಂಧೀಜಿಯವರ ವಿಚಾರಧಾರೆ, ಆದರ್ಶ, ಚಳವಳಿಗಳನ್ನು ಸದಾ ಜೀವಂತವಾಗಿರಿಸುವ ಕಾಯಕದಲ್ಲಿ ತೊಡಗಿಕೊಳ್ಳಬೇಕು ಎಂದರು.

ಕುಂದಾಪುರ ಸಿಟಿ ಜೆಸಿಐ ಅಧ್ಯಕ್ಷ ರಾಘವೇಂದ್ರ ಕುಲಾಲ್‌ ಸನ್ಮಾನ ಸ್ವೀಕರಿಸಿ ಮಾತನಾಡಿ, ವಿದ್ಯಾರ್ಥಿಗಳು ಯಾವ ಕ್ಷೇತ್ರದಲ್ಲಿ ಉತ್ಸಾಹ ತೋರುತ್ತಾರೋ ಆ ಕ್ಷೇತ್ರದಲ್ಲಿ ಅವಕಾಶ ಮಾಡಿಕೊಡುವ‌ ಮೂಲಕ ಜನತಾ ಪ್ರೌಢ ಶಾಲೆಯ ಶಿಕ್ಷಕರು ಎಲ್ಲರಿಗೂ ಮಾದರಿಯಾಗಿದ್ದಾರೆ. ಒಬ್ಬ ಗ್ರಾಮೀಣ ಭಾಗದ ಹುಡುಗನಲ್ಲಿ ಅಡಕವಾಗಿರುವ ಪ್ರತಿಭೆಯನ್ನು ಪ್ರೇರೇಪಿಸಿ, ಮತ್ತಷ್ಟು ಅವಕಾಶಗಳನ್ನು ನೀಡುವ ಮೂಲಕವಾಗಿ ಸುಜಯ್ ಇಂದು ಕಬಡ್ಡಿ ಚಾಂಪಿಯ್ಶಿಪ್‌ನಲ್ಲಿ ರಾಜ್ಯ ಮಟ್ಟದಲ್ಲಿ ಹೆಸರು‌ ಗಳಿಸುವಂತಾಗಿರುವುದು ಶ್ಲಾಘನೀಯ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆಯ ಮುಖ್ಯೋಪಾಧ್ಯಾಯ ಮಂಜು ಕಾಳಾವರ್, ಪ್ರಾಕ್ತನ ವಿದ್ಯಾರ್ಥಿಗಳ ಸಾಧನೆಗಳನ್ನು ಬೆನ್ನು ತಟ್ಟಿ, ಸ್ಪೂರ್ತಿ‌ ತುಂಬಿಸುವ ಜೊತೆ ಜೊತೆಗೆ ನಮ್ಮ‌ ವಿದ್ಯಾರ್ಥಿಗಳಿಗೆ ಇಂತಹ ಉದಯೋನ್ಮುಖ ಸಾಧಕರ ಸಾಧನೆ ಪ್ರೇರಣೆಯಾಗಲಿ ಎನ್ನುವುದೇ ಈ ಕಾರ್ಯಕ್ರಮದ ಸದುದ್ದೇಶ. ನಮ್ಮಂತಹ ಶಿಕ್ಷಕರು ಪ್ರೀತಿಸುವುದು ನಿಮ್ಮಂತ ಶಿಷ್ಯವೃಂದದವರನ್ನು ಎಂದರು‌.

ಕುಂದಾಪುರ ಸಿಟಿ ಜೆಸಿಐ ಅಧ್ಯಕ್ಷ ರಾಘವೇಂದ್ರ ಕುಲಾಲ್, ಯುವ ಪತ್ರಕರ್ತ ಶ್ರೀಕಾಂತ ಹೆಮ್ಮಾಡಿ, ರಾಜ್ಯ ಮಟ್ಟದ ಕಬಡ್ಡಿ ಆಟಗಾರ ಸುಜಯ್ ಅವರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಶಿಕ್ಷಕರಾದ ಶ್ರೀಧರ ಗಾಣಿಗ, ಪ್ರವೀತಾ ಅಶೋಕ್, ವಿದ್ಯಾ, ಬೋಧಕೇತರ ಸಿಬ್ಬಂದಿ ಸೌಮ್ಯ, ಪ್ರಾಕ್ತನ ವಿದ್ಯಾರ್ಥಿ ನಾದಶ್ರೀ ಉಪಸ್ಥಿತರಿದ್ದರು.

ಶಿಕ್ಷಕರಾದ ವಿಠಲ್ ನಾಯ್ಕ್ ಸ್ವಾಗತಿಸಿದರು. ದೇವೇಂದ್ರ ನಾಯ್ಕ್ ಧನ್ಯವಾದವಿತ್ತರು. ಜಗದೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


Spread the love
Subscribe
Notify of

0 Comments
Inline Feedbacks
View all comments