ಮಹಿಳೆಯರ ಬಗ್ಗೆ ಅನಾಗರಿಕ ಪದಬಳಕೆ: ಕಲ್ಲಡ್ಕ ಭಟ್ ವಿರುದ್ದ ಸರಕಾರ ಪ್ರಕರಣ ದಾಖಲಿಸಲಿ: ರಮೇಶ್ ಕಾಂಚನ್ 

Spread the love

ಮಹಿಳೆಯರ ಬಗ್ಗೆ ಅನಾಗರಿಕ ಪದಬಳಕೆ: ಕಲ್ಲಡ್ಕ ಭಟ್ ವಿರುದ್ದ ಸರಕಾರ ಪ್ರಕರಣ ದಾಖಲಿಸಲಿ: ರಮೇಶ್ ಕಾಂಚನ್ 

ಉಡುಪಿ: ಮುಸ್ಲಿಂ ಮಹಿಳೆಯರ ಬಗ್ಗೆ ಮಾನಹಾನಿಕರವಾಗಿ ಹೇಳಿಕೆ ನೀಡಿ ತನ್ನ ಕೆಟ್ಟ ಮನಸ್ಥಿತಿಯನ್ನು ತೋರಿಸಿರುವ ಕಲ್ಕಡ್ಕ ಪ್ರಭಾಕರ ಭಟ್ ಅವರ ವಿರುದ್ದ ರಾಜ್ಯ ಸರಕಾರ ಕೂಡಲೇ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳುವಂತೆ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಆಗ್ರಹಿಸಿದ್ದಾರೆ.

“ಯತ್ರ ನಾರೆಸ್ತು ಪೂಜಂತೆ ತತ್ರ ರಮಂತೆ ದೇವತಾ” ಎಂದು ಸದಾ ಮಹಿಳೆಯರ ಬಗ್ಗೆ ಸಂಸ್ಕೃತ ಶ್ಲೋಕಗಳನ್ನು ಬಾಯಿಯಲ್ಲಿ ಹೇಳಿ ಮಹಿಳೆಯರನ್ನು ಹೊಗಳುವ ಆರೆ.ಎಸ್.ಎಸ್ ಹಾಗೂ ಅದರ ಸಹಭಾಗಿ ಸಂಘಟನೆಗಳು ಕಲ್ಲಡ್ಕ ಅವರ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವರೇ ?

ಕಲ್ಲಡ್ಕ ಪ್ರಭಾಕರ ಭಟ್ ಅವರ ಹೇಳಿಕೆಯು ಮಹಿಳೆಯರ ಅತ್ಯಾಚಾರಕ್ಕಿಂತಲೂ ವಿಕೃತವಾಗಿದ್ದು ಒಬ್ಬ ಮಹಿಳೆಯನ್ನು ದೈಹಿಕವಾಗಿ ಅತ್ಯಾಚಾರ ಮಾಡಿದರಷ್ಟೇ ಅತ್ಯಾಚಾರವಲ್ಲ ಬದಲಾಗಿ ಆಕೆಯನ್ನು ಈ ರೀತಿ ಕೀಳು ಹೇಳಿಕೆಗಳಿಂದ ಬಹಿರಂಗವಾಗಿ ನಿಂದಿಸುವುದು ಕೂಡ ಅತ್ಯಾಚಾರಕ್ಕಿಂತ ದೊಡ್ಡ ಅಪರಾಧವಾಗಿದೆ.

ಮಹಿಳೆ ಯಾವುದೇ ಧರ್ಮಕ್ಕೆ ಸೇರಿದವಳೇ ಆಗಿರಲಿ ಆಕೆ ಯಾವುದೇ ಜಾತಿಗೆ ಸೇರಿದ ಮಹಿಳೆಯಾಗಿರಲಿ ಆಕೆಯನ್ನು ಗೌರವಿಸುದು ಭಾರತದ ಸಂಸ್ಕೃತಿ. ಇಂತಹ ಉತ್ತಮ ಸಂಸ್ಕೃತಿ ಹೊಂದಿರುವ ದೇಶದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಅವರು ಅನಾಗರಿಕರಂತೆ ಮುಸ್ಲಿಂ ಮಹಿಳೆಯರ ಗೌರವಕ್ಕೆ ಧಕ್ಕೆ ತರುವಂತಹ ಹೇಳಿಕೆಯನ್ನು ನೀಡಿರುವುದು ಖಂಡನೀಯ. ಮಹಿಳೆಯರನ್ನು ಪೂಜ್ಯ ಭಾವನೆಯಿಂದ ನೋಡಬೇಕೆಂದು ಹೇಳುವ ಈ ಬಿಜೆಪಿಗರು ಇವರ ಮಾತಿಗೆ ಸಹಮತ ಸೂಚಿಸುವರೇ?

ರಾಜ್ಯ ಸರಕಾರವು ಕಲ್ಲಡ್ಕ ಪ್ರಭಾಕರ ಭಟ್ ಅವರ ವಿರುದ್ದ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಮುಂದಿನ ದಿನಗಳಲ್ಲಿ ಯಾವುದೇ ಧರ್ಮದ ಮಹಿಳೆಯರ ವಿರುದ್ದ ಇಂತಹ ಅನಾಗರಿಕ ಹೇಳಿಕೆ ನೀಡುವವರಿಗೆ ಕಡಿವಾಣ ಹಾಕುವ ಕೆಲಸವನ್ನು ಮಾಡಬೇಕು ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.


Spread the love