ಮಾನಸಿಕ ಅಸ್ವಸ್ಥ ಯುವಕನಿಗೆ ಮಿಡಿದ ಕುಂದಾಪುರ ಪೊಲೀಸರು ; ಮಾನವೀಯ ಕಾರ್ಯಕ್ಕೆ ಸಾರ್ವಜನಿಕರ ಶ್ಲಾಘನೆ

Spread the love

ಮಾನಸಿಕ ಅಸ್ವಸ್ಥ ಯುವಕನಿಗೆ ಮಿಡಿದ ಕುಂದಾಪುರ ಪೊಲೀಸರು ; ಮಾನವೀಯ ಕಾರ್ಯಕ್ಕೆ ಸಾರ್ವಜನಿಕರ ಶ್ಲಾಘನೆ

ಕುಂದಾಪುರ: ಹೆಮ್ಮಾಡಿಯಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಮಾನಸಿಕ ಅಸ್ವಸ್ಥ ಯುವಕನನ್ನು ಪೊಲೀಸರು ಉಡುಪಿಯ ಅಜ್ಜರಕಾಡು ಆಸ್ಪತ್ರೆಗೆ ಕರೆದೊಯ್ದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಧಾರವಾಡದ ಡಿಮ್ಯಾನ್ಸ್ ಆಸ್ಪತ್ರೆಗೆ ಪೊಲೀಸ್ ಸುಪರ್ದಿಯಲ್ಲೇ ಕರೆದೊಯ್ದ ಅಪರೂಪದ ಘಟನೆಯೊಂದು ಕುಂದಾಪುರದಿಂದ ವರದಿಯಾಗಿದೆ.

ಗುರುವಾರ ಮುಂಜಾನೆ ಹೆಮ್ಮಾಡಿ ಪರಿಸರದಲ್ಲಿ ಅನುಮಾನಾಸ್ಪದವಾಗಿ ಅಲೆದಾಡುತ್ತಿದ್ದ ಬೆಳಗಾವಿ ಮೂಲದ ಉಮೇಶ್ ಗೌಡರ್ (24) ಎಂಬಾತನನ್ನು ಸ್ಥಳೀಯರ ಮಾಹಿತಿ ಮೇರೆಗೆ ಪೊಲೀಸರು ಠಾಣೆಗೆ ಕರೆತಂದು ವಿಚಾರಿಸಿದ್ದು ಆತ ಮಾನಸಿಕ ಅಸ್ವಸ್ಥ ಎಂದು ತಿಳಿದುಬಂದ ಹಿನ್ನೆಲೆಯಲ್ಲಿ ಆತನನ್ನು ಆರೋಗ್ಯ ಇಲಾಖೆಯ ಸಹಕಾರದಲ್ಲಿ ಉಡುಪಿಯ ಅಜ್ಜರಕಾಡು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆಸ್ಪತ್ರೆಯಲ್ಲಿ ಮಾನಸಿಕ ರೋಗ ತಜ್ಞರು ತಪಾಸಣೆ ನಡೆಸಿ ಸರ್ಟಿಪಿಕೇಟ್ ನೀಡಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡದ ಡಿಮ್ಯಾನ್ಸ್ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದರಿಂದ ಗುರುವಾರ ರಾತ್ರಿಯೇ ಉಮೇಶ್‍ನನ್ನು ಕರೆದುಕೊಂಡು ಹೋಗಲು ಪೊಲೀಸರು ಸಕಲ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದರು. ಆದರೆ ಕೆಲವು ಕಾನೂನಿನ ತೊಡಕಿನಿಂದಾಗಿ ರಾತ್ರಿ ಹೋಗಲಸಾಧ್ಯವಾದರಿಂದ ಆತನಿಗೆ ಠಾಣೆಯಲ್ಲೇ ಉಳಿಯುವ ವ್ಯವಸ್ಥೆ ಕಲ್ಪಿಸಲಾಗಿದ್ದು, ಬೆಳಗ್ಗೆ ಕಾನೂನು ಪ್ರಕ್ರಿಯೆಗಳು ಮುಗಿದ ಬಳಿಕ ಉಮೇಶ್‍ನನ್ನು ಆಂಬುಲೆನ್ಸ್ ಮೂಲಕ ಹೆಚ್ಚಿನ ಚಿಕಿತ್ಸೆಗಾಗಿ ಪೊಲೀಸರ ಸುಪರ್ದಿಯಲ್ಲಿ ಧಾರವಾಡಕ್ಕೆ ಕಳುಹಿಸಿಕೊಡಲಾಗಿದೆ.

ಮಾನಸಿಕ ಅಸ್ವಸ್ಥ ಯುವಕ ಉಮೇಶ್‍ನನ್ನು ಆಸ್ಪತ್ರೆಗೆ ದಾಖಲಿಸಲು ಕೆಲವೊಂದು ಕಾನೂನು ತೊಡಕುಗಳು ಎದುರಾಗಿದ್ದು, ಉಡುಪಿಯ ಅಜ್ಜರಕಾಡು ಆಸ್ಪತ್ರೆಯಿಂದ ಮಾನಸಿಕ ರೋಗ ತಜ್ಞರು ನೀಡಿರುವ ಸೆರ್ಟಿಫಿಕೇಟ್ ಜೊತೆಗೆ ಉಮೇಶ್‍ನನ್ನು ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಲಯಕ್ಕೆ ಮನವರಿಕೆ ಮಾಡಲಾಯಿತು. ಬಳಿಕ ನ್ಯಾಯಾಲಯ ಉಮೇಶ್‍ಗೆ ಹೆಚ್ಚಿನ ಚಿಕಿತ್ಸೆ ನೀಡಲು ಧಾರವಾಡಕ್ಕೆ ಕಳುಹಿಸಿಕೊಡಲು ಒಪ್ಪಿಗೆ ಪತ್ರವನ್ನು ಕೊಟ್ಟ ಬಳಿಕ ಶುಕ್ರವಾರ ಮಧ್ಯಾಹ್ನ ಧಾರವಾಡಕ್ಕೆ ಕಳುಹಿಸಿಕೊಡಲಾಗಿದೆ.

ಕೋಡಿಯ ಎನ್.ಎಮ್.ಎ ಪೊಲಿಕ್ಲಿನಿಕ್ ನೆರವು
ತಾಲೂಕು ವೈದ್ಯಾಧಿಕಾರಿ ನಾಗಭೂಷಣ್ ನೆರವಿನಿಂದ ಕೋಡಿಯ ಸಮಾಜ ಸೇವಾ ಸಂಸ್ಥೆ ನುಸ್ರತುಲ್ ಮಸಾಕೀನ್ ಅಸೋಸಿಯೇಶನ್ (ಎನ್.ಎಮ್.ಎ ಪೊಲಿಕ್ಲಿನಿಕ್) ಉಮೇಶ್ ನನ್ನು ಧಾರಾವಾಡಕ್ಕೆ ಸಾಗಿಸಲು ಉಚಿತ ಆಂಬುಲೆನ್ಸ್ ಸೇವೆ ನೀಡಲು ಮುಂದಾಗಿದ್ದು, ಇದೇ ಆಂಬುಲೆನ್ಸ್‍ನಲ್ಲಿ ಉಮೇಶ್‍ನನ್ನು ಧಾರವಾಡಕ್ಕೆ ಕರೆದೊಯ್ಯಲಾಗಿದೆ. ಈ ವೇಳೆಯಲ್ಲಿ ಎನ್.ಎಮ್.ಎ ತಾಲೂಕು ಅಧ್ಯಕ್ಷ ಸರ್ಧಾರ್ ಗುಲ್ವಾಡಿ, ಉಪಾಧ್ಯಕ್ಷ ಸಾಬಾನ್ ಹಂಗಳೂರು, ಕಾರ್ಯದರ್ಶಿಆಸೀಫ್ ಕೋಡಿ, ಜೊತೆ ಕಾರ್ಯದರ್ಶಿ ಹಾಜಿ ಅಬುಶೇಕ್, ಆಂಬುಲೆನ್ಸ್ ಚಾಲಕ ಅಬ್ಬಾಸ್ ಕೋಡಿ, ಸಿಬ್ಬಂದಿ ಸಮದ್ ಠಾಣೆಗೆ ಆಗಮಿಸಿ ಆಸ್ಪತ್ರೆಗೆ ಸಾಗಿಸುವ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಟ್ಟರು.

ಆರಂಭದಲ್ಲಿ ಪೊಲೀಸರಿಗೆ ಈ ಪ್ರಕರಣ ತಲೆನೋವಾಗಿ ಪರಿಣಮಿಸಿದ್ದು, ಉಮೇಶ್ ಸಂಬಂಧಿಕರನ್ನು ಸಂಪರ್ಕಿಸಲು ಮುಂದಾಗಿದ್ದರು. ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆಗಳು ಬಾರದಿದ್ದರಂದ ಉಮೇಶ್‍ಗೊಂದು ಹೊಸಜೀವನ ಕಲ್ಪಿಸಿಕೊಡಬೇಕು ಎಂದು ಪಣತೊಟ್ಟು ಹಗಲು ರಾತ್ರಿಯೆನ್ನದೇ ಉಮೇಶ್ ಚಿಕಿತ್ಸೆಗಾಗಿ ಹೋರಾಟ ನಡೆಸಿದ ಕುಂದಾಪುರ ಪಿಎಸೈ ಹರೀಶ್ ಆರ್ ಹಾಗೂ ಅವರ ತಂಡಕ್ಕೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಎ.ಎಸ್.ಐ ಸುಧಾಕರ, ತಾರನಾಥ, ಸುಧಾ ಪ್ರಭು, ಎಚ್.ಸಿ.ಗಳಾದ ವೆಂಕಟರಮಣ, ಸುಬ್ಬಣ್ಣ ಶೆಟ್ಟಿ, ಜಗನ್ನಾಥ, ಸಿಬ್ಬಂದಿಗಳಾದ ಮಂಜುನಾಥ್, ಪ್ರವೀಣ್ ಕುಮಾರ್ ಆಸ್ಪತ್ರೆಗೆ ಸಾಗಿಸಲು ಸಹಕರಿಸಿದ್ದಾರೆ.


Spread the love