ಮೀನು ಸಂಸ್ಕರಣ ಘಟಕದಲ್ಲಿ ಅಮೋನಿಯಾ ಸೋರಿಕೆ: ಜಿಲ್ಲಾಧಿಕಾರಿ, ಎಸ್ಪಿ ಭೇಟಿ

ಮೀನು ಸಂಸ್ಕರಣ ಘಟಕದಲ್ಲಿ ಅಮೋನಿಯಾ ಸೋರಿಕೆ: ಜಿಲ್ಲಾಧಿಕಾರಿ, ಎಸ್ಪಿ ಭೇಟಿ

ಕುಂದಾಪುರ: ದೇವಲ್ಕುಂದದಲ್ಲಿ ಕಾರ್ಯಾಚರಿಸುತ್ತಿರುವ ಮೀನು ಸಂಸ್ಕರಣ ಘಟಕದಲ್ಲಿ ಸೋಮವಾರ ಬೆಳ್ಳಂಬೆಳಗ್ಗೆ ಅಮೋನಿಯಾ ಸೋರಿಕೆಯಾದ ಪರಿಣಾಮ ಎಪ್ಪತ್ತಕ್ಕೂ ಅಧಿಕ ಕಾರ್ಮಿಕರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದು ಆಸ್ಪತ್ರೆ ಹಾಗೂ ಸಂಸ್ಕರಣ ಘಟಕಕ್ಕೆ ಜಿಲ್ಲಾಧಿಕಾರಿ ಹೆಬ್ಸಿಬಾ ರಾಣಿ ಕೊರ್ಲಪಾಟಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ಜಿಲ್ಲಾ ಅಗ್ನಿಶಾಮಕ ದಳದ ವಸಂತ್ ಕುಮಾರ್ ನೇತೃತ್ವದ ತಂಡ ಹೆಚ್ಚಿನ ಅನಾಹುತಗಳು ಸಂಭವಿಸದಂತೆ ಅಮೋನಿಯಾ ಹತೋಟಿಗೆ ತಂದಿದ್ದಾರೆ. ಲೀಕೇಜ್ ಆಗಿರುವ ಪೈಪ್ ಅನ್ನು ಮುಚ್ಚಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯಾಗದೆ ಎಲ್ಲರನ್ನೂ ಅಪಾಯದಿಂದ ಪಾರು ಮಾಡಿದ ಅಗ್ನಿಶಾಮಕ ದಳದ ಸಿಬ್ಬಂದಿಗಳ ಕಾರ್ಯವನ್ನು ಮೆಚ್ಚಲೇಬೇಕು. ಮೀನು ಸಂಸ್ಕರಣ ಘಟಕದ ಬಗ್ಗೆ ಸಹಾಯಕ ಆಯುಕ್ತ ಡಾ. ಮಧುಕೇಶ್ವರ್ ಅವರಲ್ಲಿ ವರದಿಯನ್ನು ತರಿಸಿಕೊಳ್ಳುತ್ತೇನೆ. ಯಾವೆಲ್ಲಾ ನಿಯಮಗಳ ಪ್ರಕಾರ ಘಟಕವನ್ನು ನಡೆಸಲು ಅನುಮತಿ ಕೊಟ್ಟಿದ್ದಾರೆ. ಕೊಟ್ಟಿರುವ ನಿಯಮಗಳನ್ನೆಲ್ಲಾ ಪಾಲಿಸುತ್ತಿದ್ದಾರ, ಕಾರ್ಮಿಕರ ಕುರಿತಾಗಿ ಏನೆಲ್ಲಾ ಜಾಗೃತೆ ವಹಿಸುತ್ತಿದ್ದಾರೆ ಎಂಬಿತ್ಯಾದಿ ವಿಚಾರಗಳ ಕುರಿತು ಸಮಗ್ರ ವರದಿ ತರಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದರು.

ಉತ್ತರಕನ್ನಡ ಮೂಲದ ಎಪ್ಪತ್ತಕ್ಕೂ ಅಧಿಕ ಮಹಿಳಾ ಕಾರ್ಮಿಕರು ಕುಂದಾಪುರದ ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸಕಾಲದಲ್ಲಿ ಆಸ್ಪತ್ರೆಯಲ್ಲಿನ ವೈದ್ಯರು ಚಿಕಿತ್ಸೆ ನೀಡಿದ್ದರಿಂದ ದಾಖಲಾದ ಎಲ್ಲಾ ಕಾರ್ಮಿಕರು ಅಪಾಯದಿಂದ ಪಾರಾಗಿದ್ದಾರೆ.

ಕಟ್ಬೇಲ್ತೂರು ಗ್ರಾಮಪಂಚಾಯತ್ ವ್ಯಾಪ್ತಿಯ ದೇವಲ್ಕುಂದದ ಮಲ್ಪೆ ಫ್ರೆಶ್ ಮರೈನ್ ಎಕ್ಸ್ಪೋರ್ಟ್ ಲಿಮಿಟೆಡ್ನಲ್ಲಿ ಈ ಅವಘಡ ಸಂಭವಿಸಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಗಳ ಸತತ ಕಾರ್ಯಾಚರಣೆಯಲ್ಲಿ ಅಮೋನಿಯಾ ಸೋರಿಕೆಯನ್ನು ಹತೋಟಿಗೆ ತರಲಾಗಿದೆ.

ಸೋಮವಾರ ಬೆಳಿಗ್ಗೆ ಸಂಸ್ಕರಣಾ ಘಟಕದ ಸಿಬ್ಬಂದಿಗಳು ಕೆಲಸ ನಿರ್ವಹಿಸುತ್ತಿರುವಾಗ ಅಮೋನಿಯಾ ಲಿಕ್ವಿಡ್ ಸರಬರಾಜು ಮಾಡುವ ಪೈಪ್ನ ಟ್ಯಾಪ್ ಭಾಗದಲ್ಲಿ ಅಮೋನಿಯಾ ಸೋರಿಕೆಯಾಗಿತ್ತು. ಇದನ್ನು ಗಮನಿಸಿದ ಅಮೋನಿಯಾ ಸರಬರಾಜು ಯಂತ್ರ ನಿರ್ವಹಿಸುವ ಸಿಬ್ಬಂದಿಗಳು ಯಂತ್ರದಿಂದ ಮುಖ್ಯ ಪೈಪ್ನ ಮೂಲಕ ಸಾಗುವ ಅಮೋನಿಯಾವನ್ನು ನಿಲ್ಲಿಸಿದ್ದರು. ಅಷ್ಟರಲ್ಲಾಗಲೇ ಅಮೋನಿಯಾ ಸಂಸ್ಕರಣ ಘಟಕದ ಸುತ್ತಲೂ ವ್ಯಾಪಿಸಿದ್ದರಿಂದ ಭಯಭೀತರಾದ ಸಿಬ್ಬಂದಿಗಳು ಪ್ರಾಣಭಯದಿಂದ ಘಟಕದಿಂದ ಹೊರನಡೆದು ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕಾಗಮಿಸಿದ ಕುಂದಾಪುರ ಅಗ್ನಿಶಾಮಕ ಸಿಬ್ಬಂದಿಗಳು ನೀರು ಹಾಯಿಸುವುದರ ಮೂಲಕ ಅಮೋನಿಯಾವನ್ನು ಚದುರಿಸುವ ಕೆಲಸ ಮಾಡಿದರು. ಎಷ್ಟೇ ಪ್ರಯತ್ನಪಟ್ಟರೂ ಪೈಪ್ನೊಳಗಿರುವ ಅಮೋನಿಯಾ ಹೊರಬರುತ್ತಲೇ ಇದ್ದಿದ್ದರಿಂದ ಉಡುಪಿ ಅಗ್ನಿಶಾಮಕ ದಳದ ನೆರವು ಪಡೆಯಲಾಯಿತು. ಎರಡು ಅಗ್ನಿಶಾಮಕ ದಳ ಸಿಬ್ಬಂದಿಗಳು ಸತತ ಕಾರ್ಯಾಚರಣೆ ನಡೆಸಿ ಅಮೋನಿಯಾವನ್ನು ಹತೋಟಿಗೆ ತಂದರು.

ನಸುಕಿನ ಜಾವದಲ್ಲಿ ಈ ಘಟನೆ ಸಂಭವಿಸಿದ್ದರಿಂದ ಅಲ್ಲೇ ಸಮೀಪದ ವಸತಿಗೃಹದಲ್ಲಿ ಮಲಗಿದ್ದ ಮಹಿಳಾ ಕಾರ್ಮಿಕರಿಗೆ ಅಮೋನಿಯಾ ಸೋರಿಕೆ ಗಮನಕ್ಕೆ ಬಂದಿರಲಿಲ್ಲ. ಮಹಿಳಾ ಕಾರ್ಮಿಕರು ಮಲಗಿದ್ದ ಹಾಸ್ಟೇಲ್ನೊಳಗೆ ಅಮೋನಿಯಾ ವ್ಯಾಪಿಸಿದ್ದರಿಂದ ಎಪ್ಪತ್ತಕ್ಕೂ ಅಧಿಕ ಕಾರ್ಮಿಕರು ಎದೆ ಉರಿ, ಉಸಿರಾಟ ತೊಂದರೆ ಹಾಗೂ ವಾಂತಿ ಮಾಡಲಾರಂಭಿಸಿದರು. ತಕ್ಷಣವೇ ಅಸ್ವಸ್ಥಗೊಂಡ ಎಲ್ಲಾ ಕಾರ್ಮಿಕರಿಗೆ ಪ್ರಥಮ ಚಿಕಿತ್ಸೆ ಕೊಡಿಸಿ ಕುಂದಾಪುರದ ಆದರ್ಶ ಆಸ್ಪತ್ರೆಗೆ ಸಾಗಿಸಲಾಯಿತು.

ಯಾವುದೇ ಮುಂಜಾಗ್ರತಾ ಕ್ರಮವಿಲ್ಲದೆ ಸಂಸ್ಕರಣ ಘಟಕ ನಡೆಸುತ್ತಿರುವ ಕಂಪೆನಿಯ ವಿರುದ್ದ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಡಿಸಿ, ಎಸ್ಪಿ ಭೇಟಿ ವೇಳೆ ಜಮಾಯಿಸಿದ ಸ್ಥಳೀಯರು ಮೀನು ಸಂಸ್ಕರಣ ಘಟಕದ ವಿರುದ್ದ ಆಕ್ರೋಶ ಹೊರಹಾಕಿದರು. ಅಮೋನಿಯಾ ವಾಸನೆಯಿಂದಾಗಿ ನಾವೆಲ್ಲರೂ ಬೆಳಿಗ್ಗೆ ಮನೆಯಿಂದ ಹೊರನಡೆದಿದ್ದೇವೆ. ಅಮೋನಿಯಾ ಸೋರಿಕೆಯಾದ ಬಗ್ಗೆ ಯಾವುದೇ ಮನ್ಸೂಚನೆಯನ್ನೂ ಕಂಪೆನಿ ಕೊಟ್ಟಿಲ್ಲ. ಒಂದು ವೇಳೆ ಅಮೋನಿಯಾ ಹತೋಟಿಗೆ ಬಾರದೆ ನಾವೆಲ್ಲರೂ ಅಸ್ವಸ್ಥಗೊಂಡಿದ್ದರೆ ಯಾರು ಹೊಣೆ. ಕೂಡಲೇ ಕಂಪೆನಿಯ ವಿರುದ್ದ ಕಾನೂನುಕ್ರಮ ಜರುಗಿಸಿ ಎಂದು ಆಕ್ರೋಶ ವ್ಯಕ್ರಪಡಿಸಿದರು. ಇದಕುತ್ತರಿಸಿದ ಜಿಲ್ಲಾಧಿಕಾರಿಗಳು ಎಲ್ಲಾ ವರದಿಗಳನ್ನು ತರಿಸಿಕೊಂಡು ಕ್ರಮ ಕೈಗೊಳ್ಳುತ್ತೇನೆ. ಸದ್ಯ ಸ್ಥಳೀಯರಾರು ಭಯಪಡುವ ಅಗತ್ಯವಿಲ್ಲ ಎಂದರು.

ಇನ್ನು ಅಮೋನಿಯಾ ಸೋರಿಕೆಯಾದ ಪರಿಣಾಮ ಸಂಸ್ಕರಣ ಘಟಕದ ಗಾರ್ಡನ್ನಲ್ಲಿದ್ದ ಗಿಡಗಳು ಸುಟ್ಟು ಕರಕಲಾಗಿದೆ. ಮಹಿಳಾ ಕಾರ್ಮಿಕರ ಚಪ್ಪಲಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಘಟಕದ ಹೊರಗಿರುವ ಗಿಡಗಳೂ ಕೂಡ ಸುಟ್ಟು ಕರಕಲಾಗಿದೆ.