ಮುಂಬೈ ನಗರದಲ್ಲಿ ಮಂಗಳಮುಖಿಯರ ಮೇಲಿನ ಹಲ್ಲೆಯನ್ನು ಖಂಡಿಸಿ ಪರಿವರ್ತನಾ ವತಿಯಿಂದ ಪ್ರತಿಭಟನೆ

Spread the love

ಮುಂಬೈ ನಗರದಲ್ಲಿಮಂಗಳಮುಖಿಯರ ಮೇಲಿನ ಹಲ್ಲೆಯನ್ನು ಖಂಡಿಸಿ ಪರಿವರ್ತನಾ ವತಿಯಿಂದ ಪ್ರತಿಭಟನೆ

ಮಂಗಳೂರು: ಮುಂಬೈ ಮಹಾನಗರದಲ್ಲಿ ಮಂಗಳಮುಖಿಯರ ಮೇಲೆ ನಡೆದ ಮಾರಣಾಂತಿಕ ಹಲ್ಲೆಯನ್ನು ಖಂಡಿಸಿ ಪರಿವರ್ತನಾ ಚಾರಿಟೇಬಲ್ ಟ್ರಸ್ಟ್ ಇದರ ಆಶ್ರಯದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಎದುರು ಪ್ರತಿಭಟನೆ ನಡೆಯಿತು.

ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಟ್ರಸ್ಟಿನ ಕಾರ್ಯದರ್ಶಿ ಸಂಜನಾ ಕಳೆದ ಜೂನ್ ತಿಂಗಳಿನಲ್ಲಿ ನನ್ನ ಮೇಲೂ ಲೈಂಗಿಕವಾಗಿ ದೌರ್ಜನ್ಯ ನಡೆದಾಗ ನನ್ನ ಸಹಾಯಕ್ಕೆ ಯಾರು ಕೂಡ ಬಂದಿರಲಿಲ್ಲ ಅಲ್ಲದೆ ಘಟನೆಗೆ ಕಾರಣರಾದವರ ಮೇಲೂ ಸಹ ಯಾವುದೇ ರೀತಿಯ ಕ್ರಮ ಕೂಡ ಕೈಗೊಂಡಿರಲಿಲ್ಲ. ಒಂದು ವೇಳೆ ಅದೇ ಜಾಗದಲ್ಲಿ ಮಂಗಳಮುಖಿಯಾದಂತಹ ನಾನು ಇಲ್ಲದೆ ಬೇರೆ ಯಾರಾದರೂ ಮಹಿಳೆ ಅಥವಾ ಹುಡುಗಿ ಇದ್ದಲ್ಲಿ ಅಲ್ಲಿನ ನಾಗರಿಕರು ಖಂಡಿತ ದನಿ ಎತ್ತುತ್ತಿದ್ದರು. ನಮ್ಮ ಇಂತಹ ಭೇದಭಾವ ಯಾಕೆ ನಡೆಯುತ್ತದೆ, ನಮ್ಮನ್ನು ಸಮಾಜ ಯಾಕೆ ತಿರಸ್ಕರಿಸುತ್ತದೆ ನಾವೂ ಕೂಡ ಭಾರತದ ನಾಗರಿಕರಲ್ಲವೇ ಎಂದು ಪ್ರಶ್ನಿಸಿದರು. ಮುಂಬೈನಲ್ಲಿ ಮಂಗಳಮುಖಿಯರ ಮೇಲೆ ನಡೆದ ಹಲ್ಲೆ ನಿಜಕ್ಕೂ ಖಂಡನೀಯವಾಗಿದೆ ಇಂತಹ ಮಾರಾಣಂತಿಕ ಹಲ್ಲೆಗಳು ಮುಂದಿನ ದಿನಗಳಲ್ಲಿ ಮಂಗಳಮುಖಿಯರ ಮೇಲೆ ನಡೆಯಬಾರದು ಎಂದರು.

ಮಹಿಳೆಯರ ಮೇಲೆ ಹಲ್ಲೆ ನಡೆದರೆ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗುತ್ತದೆ ಆದರೆ ಅದೇ ಘಟನೆ ಮಂಗಳಮುಖಿಯರೊಂದಿಗೆ ನಡೆದರೆ ಸಮಾಜ ಯಾವುದೇ ರೀತಿಯ ಪ್ರತಿಕ್ರಿಯೆ ನೀಡುವುದಲ್ಲಿ ಇದು ನಿಜಕ್ಕೂ ಬೇಸರಿನೀಯ ಸಂಗತಿ. ದೇಶದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರದಂತಹ ಪ್ರಕರಣಗಳು ನಡೆದಾಗ ಸಮಾಜ, ದೇಶ ಎಚ್ಚೆತ್ತುಕೊಂಡು ಅಂತಹವರ ವಿರುದ್ದ ಹೋರಾಟಕ್ಕೆ ನಿಲ್ಲುತ್ತದೆ ಆದರೆ ಅದೇ ಒರ್ವ ಮಂಗಳಮುಖಿಯರ ಮೇಲೆ ಅತ್ಯಾಚಾರ ನಡೆದರೆ ಪೋಲಿಸರಿಂದ ಹಿಡಿದು ಸಮಾಜ ಕೂಡ ಮಂಗಳಮುಖಿಯರನ್ನು ತಿರಸ್ಕಾರವಾಗಿ ನೋಡುತ್ತಾರೆಯೇ ವಿನಹ ಅವರ ರಕ್ಷಣೆಗೆ ನಿಲ್ಲುವುದಿಲ್ಲ ದೇಶದಲ್ಲಿ ಇಂತಹ ತಾರತಮ್ಯ ಸಲ್ಲದು.

ದೇಶದ ಸರಕಾರಗಳು ಗಂಡು, ಹೆಣ್ಣು ಮತ್ತು ಮಕ್ಕಳ ಮೇಲೆ ದೌರ್ಜನ್ಯವಾದಾಗ ತಮ್ಮ ಸಹಾಯದ ಹಸ್ತವನ್ನು ಚಾಚುತ್ತಾರೆ ಆದರೆ ಕಾನೂನು ಮಂಗಳಮುಖಿಯರ ವಿಚಾರ ಬಂದಾಗ ಬೆಂಬಲಕ್ಕೆ ನಿಲ್ಲುವುದು ತೀರಾ ಅಪರೂಪದ ಸಂಗತಿಯಾಗಿದೆ ಎಂದರು. ಮುಂಬೈನಲ್ಲಿ ಮಂಗಳಮುಖಿಯರ ಮೇಲೆ ನಡೆದ ಮಾರಾಣಾಂತಿಕ ಹಲ್ಲೆಯನ್ನು ಅಲ್ಲಿನ ಸರಕಾರ ಮತ್ತು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ, ಘಟನೆಗೆ ಕಾರಣರಾದ ಆರೋಪಿಗಳಿಗೆ ತಕ್ಕ ಶಿಕ್ಷೆಯನ್ನು ನೀಡಬೇಕು ಎಂದು ಆಗ್ರಹಿಸಿದರು.


Spread the love