ಮುನಿಯಾಲು ಉದಯ್ ಶೆಟ್ಟಿ ಕಾರ್ಕಳ  ಕಾಂಗ್ರೆಸ್ ಅಭ್ಯರ್ಥಿಯೆಂದು ಘೋಷಿಸಿ – ಕಾರ್ಯಕರ್ತರ ಆಗ್ರಹ

Spread the love

ಮುನಿಯಾಲು ಉದಯ್ ಶೆಟ್ಟಿ ಕಾರ್ಕಳ  ಕಾಂಗ್ರೆಸ್ ಅಭ್ಯರ್ಥಿಯೆಂದು ಘೋಷಿಸಿ – ಕಾರ್ಯಕರ್ತರ ಆಗ್ರಹ

ಕಾರ್ಕಳ: ಮುನಿಯಾಲು ಉದಯ್ ಶೆಟ್ಟಿಯವರು ಕಳೆದ ಹಲವಾರು ವರ್ಷಗಳಿಂದ ಪಕ್ಷ ಸಂಘಟನೆಗೆ ಒತ್ತುಕೊಟ್ಟು ಕಾರ್ಯಕರ್ತರನ್ನು ಒಟ್ಟು ಸೇರಿಸಿ ಪಕ್ಷದ ಬೆಳವಣಿಗೆಗೆ ಕಾರಣರಾಗಿದ್ದು ಅವರಿಗೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಾರ್ಕಳ ಕ್ಷೇತ್ರದಲ್ಲಿ ಟಿಕೇಟ್ ನೀಡಿದ್ದಲ್ಲಿ ಗೆಲುವು ಖಚಿತ ಎಂದು ಕಾಂಗ್ರೆಸ್ ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಕಾರ್ಕಳ ಕಾಂಗ್ರೆಸ್ ಕಾರ್ಯಕರ್ತರಾದ ಡೇನಿಯಲ್ ರೇಂಜರ್ ಅವರು ಕಾರ್ಕಳದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಸಮರ್ಥ ನಾಯಕತ್ವ ಇಲ್ಲದ ಸಮಯದಲ್ಲಿ ಪಕ್ಷ ಸಂಘಟನೆಗೆ ಒತ್ತುಕೊಟ್ಟು, ಕ್ಷೇತ್ರದಾದ್ಯಂತ ಕಾರ್ಯಕರ್ತರನ್ನು ಒಟ್ಟು ಸೇರಿಸಿದ ಉದಯ್ ಶೆಟ್ಟಿಯವರಿಗೆ ಕಾರ್ಕಳ ಕ್ಷೇತ್ರದ ಅಭ್ಯರ್ಥಿ ಎಂದು ಟಿಕೇಟ್ ನೀಡಬೇಕು ಎಂದು ಹೈಕಮಾಂಡ್ ಮತ್ತು ಕ್ಷೇತ್ರದ ಉಸ್ತುವಾರಿಗಳಲ್ಲಿ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ವೀರಪ್ಪ ಮೊಯ್ಲಿಯವರ ಪುತ್ತ ಹರ್ಷ ಮೊಯ್ಲಿ ಯವರು ಸ್ಪರ್ಧೆಯಿಂದ ಹಿಂದೆ ಸರಿದ ಮೇಲೂ ಅಭ್ಯರ್ಥಿ ಘೋಷಣೆ ಆಗದೇ ಇರುವುದು ಬೇಸರ ತಂದಿದೆ ಎಂದರು.

ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿರುವಾಗ ಕಾರ್ಕಳದಲ್ಲಿ ಕಾಂಗ್ರೆಸ್ ಪಕ್ಷದ ಸ್ಥಿತಿ ಸಂಪೂರ್ಣ ಕಳಪೆಯಾಗಿದ್ದು, ಸಂಘಟನೆಯ ವೇಗ ಕುಂಠಿತಗೊಂಡಿದ್ದು, ಇದೇ ರೀತಿ ಮುಂದುವರೆದಲ್ಲಿ ಪಕ್ಷದ ಪ್ರಚಾರಕ್ಕೆ ಕಾರ್ಯಕರ್ತರೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಬಹುದು. ಮೊಯ್ಲಿ ಪುತ್ರನ ನಿರ್ಗಮನದ ನಂತರ ಕ್ಷೇತ್ರದ ಉಸ್ತುವಾರಿಗಳಾದ ಜಿ ಎ ಬಾವಾ ಮತ್ತು ಭರತ್ ಮುಂಡೋಡಿ ಇವರು ಕ್ಷೇತ್ರದ ಪ್ರಚಾರ ಕಾರ್ಯದಿಂದ ದೂರವಾಗಿದ್ದಾರೆ. ಕಾರ್ಯಕರ್ತರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಕೇವಲ ಮೊಯ್ಲಿಯವರ ನಿರ್ದೇಶನದ ಮೇರೆಗೆ ಅವರಿಗೆ ತಕ್ಕಂತೆ ವರ್ತಿಸುತ್ತಿದ್ದ ಉಸ್ತುವಾರಿಗಳು ಕ್ಷೇತ್ರದ ಉತ್ಸಾಹಿ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ಬಗ್ಗೆ ಈಗಾಗಲೇ ಹೈಕಮಾಂಡಿಗೆ ದೂರು ನೀಡಲಾಗಿದೆ. ಉಸ್ತುವಾರಿಗಳಿಂದ ಆಗಬೇಕಾಗಿದ್ದ ಪಕ್ಷ ಸಂಘಟನೆ ಕೆಲಸ ಅರ್ಧದಲ್ಲೇ ನಿಂತು ಹೋಗಿದೆ.

ಕಾರ್ಯಕರ್ತರ ಅಪೇಕ್ಷೆ ಹಾಗೂ ಒಮ್ಮತದಿಂದ ಉದಯ್ ಶೆಟ್ಟಿಯವರ ಹೆಸರನ್ನು ಅಭ್ಯರ್ಥಿ ಸ್ಥಾನಕ್ಕೆ ಘೋಷಣೆ ಮಾಡಬೇಕು ಎಂದು ಈಗಾಗಲೇ ವಿವಿಧ ರೀತಿಯ ಮನವಿಗಳ ಮೂಲಕ ಹೈಕಮಾಂಡಿಗೆ ತಿಳಿಸಲಾಗಿದೆ ಕಾರ್ಕಳದಲ್ಲಿ ನಿಸ್ತೇಜವಾಗಿದ್ದ ಕಾಂಗ್ರೆಸ್ ಪಕ್ಷವನ್ನು ಕಳೆದ ಎರಡು ವರ್ಷಗಳಿಂದ ತಳಮಟ್ಟದ ಕಾರ್ಯಕರ್ತರಿಂದ ಹಿಡಿದು ಬ್ಲಾಕ್ ಮಟ್ಟದ ಪದಾಧಿಕಾರಿಗಳ ವರೆಗೆ ಸಂಘಟಿಸಿ ಪ್ರತಿಯೊಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುತ್ತಿರುವ ಉದಯ್ ಶೆಟ್ಟಿ ಇವರಿಗೆ ಇಡೀ ಕ್ಷೇತ್ರದ ಕಾರ್ಯಕರ್ತರು ಮತ್ತು ಮತದಾರರ ಬೆಂಬಲವಿದ್ದು, ಖಂಡಿತವಾಗಿ ಗೆಲುವ ಸಾಧಿಸುವ ಧ್ಯೆರ್ಯವಿದ್ದು, ಅಭ್ಯರ್ಥಿ ಘೋಷಣೆ ವಿಳಂಬ ಗೆಲುವಿನ ಅಂತರ ಕಡಿಮೆ ಆಗುವ ಸಾಧ್ಯತೆ ಇದೆ ಎಂದರು.

ವೀರಪ್ಪ ಮೊಯ್ಲಿಯವರ ಮಾರ್ಗದರ್ಶನದಲ್ಲಿ, ಗೋಪಾಲ ಭಂಡಾರಿಯವರ ನಾಯಕತ್ವದಲ್ಲಿ ಕಾರ್ಯಕರ್ತರು ದುಡಿಯಲು ಉತ್ಸುಕರಾಗಿದ್ದು, ಅಭ್ಯರ್ಥಿಯ ಘೋಷಣೆ ವಿಳಂಬ ಕಾರ್ಯಕರ್ತರನ್ನು ಗೊಂದಲಕ್ಕೆ ಅವಕಾಶ ಮಾಡಿದೆ. ಕಾರ್ಯಕರ್ತರು ಉದಯ್ ಕುಮಾರ್ ಶೆಟ್ಟಿ ಯವರೇ ಅಭ್ಯರ್ಥಿಯಾಗಬೇಕು ಎಂಬುದಕ್ಕೆ ಕಾರಣಗಳೂ ಇವೆ. ಸಮರ್ಥ ನಾಯಕತ್ವ, ಯುವ ಸಂಘಟಕ, ಎಲ್ಲಾ ಧರ್ಮಗಳ ಮೇಲೆ ಅಪಾರ ಗೌರವ ಮತ್ತು ನಂಬಿಕೆ ಹಾಗೂ ಉಳ್ಳವರು, ಪರೋಪಕಾರಿ, ಸಮಾಜಸೇವಕ, ಕೊಡುಗೈ ದಾನಿ ಹಾಗೂ ಕಳೆದ ಹಲವು ವರ್ಷಗಳಿಂದ ಪಕ್ಷಕ್ಕಾಗಿ ದುಡಿದವರು, ರಾಜ್ಯದ ಮನೆ ಮನೆ ಕಾಂಗ್ರೆಸ್ ಅಭಿಯಾನವನ್ನು ರಾಜ್ಯದಲ್ಲೇ ಪ್ರಥಮವೆಂಬತೆ ಯಶಸ್ವಿಯಾಗಿ ಈಗಲೂ ನಡೆಸುತ್ತಿರುವ ಯುವ ಮುಂದಾಳು ಆಗಿರುತ್ತಾರೆ. ಇಂತಹ ಉತ್ಸಾಹಿ ಯುವಕ ಕಾರ್ಕಳದ ಶಾಸಕರಾಗಬೇಕು ಎನ್ನುವುದು ಕಾರ್ಯಕರ್ತರ ಅಭಿಲಾಷೆ ಆಗಿದೆ.

ಕಾರ್ಕಳದಲ್ಲಿ ಸಮರ್ಥ ನಾಯಕತ್ವ ಹಾಗೂ ಬ್ಲಾಕ್ ಮಟ್ಟದ ನಾಯಕರ ಉದಾಸೀನ ಸ್ವಭಾವದಿಂದ ಸತತವಾಗಿ 5 ಜಿಲ್ಲಾ ಪಂಚಾಯ್, 19 ತಾಲೂಕು ಪಂಚಾಯತ್ ಹಾಗೂ 26 ಗ್ರಾಮಪಂಚಾಯತುಗಳಲ್ಲಿ ಅಧಿಕಾರ ಕಳೆದುಕೊಂಡು ಸಂಪೂರ್ಣವಾಗಿ ನೆಲಕಚ್ಚಿದ ಕಾಂಗ್ರೆಸ್ ಪಕ್ಷವನ್ನು ಮತ್ತೊಮ್ಮೆ ಆಶಾದಾಯಕ ಮಟ್ಟಕ್ಕೆ ಸಂಘಟಿಸಿದ ಉದಯ್ ಶೆಟ್ಟಿ ಮುನಿಯಾಲು ಅವರಿಗೆ ಅಭ್ಯರ್ಥಿ ಸ್ಥಾನ ಕೂಡ ಘೋಷಣೆ ಮಾಡಬೇಕು ಎಂದು ಕಾರ್ಕಳ ಕ್ಷೇತ್ರದ ಗ್ರಾಮ ಸಮಿತಿ, ಪುರಸಭಾ ಸದಸ್ಯರು ಹಾಗೂ 5 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರ ಪರವಾಗಿ ಹೈಕಮಾಂಡಿಗೆ ಮನವಿ ಮಾಡಲಾಗಿದೆ. ಹೈಕಮಾಂಡ್ ಬಯಸಿದ್ದಲ್ಲಿ ಮುಖತಃ ಬೇಟಿಯಾಗಿ ಕ್ಷೇತ್ರದ ಪ್ರಸ್ತುತ ಪರಿಸ್ಥಿತಿ ಬಗ್ಗೆ ಸವಿಸ್ತಾರವಾಗಿ ತಿಳಿಸಲು ಕಾರ್ಯಕರ್ತರು ತಯಾರಿದ್ದು, ಕ್ಷೇತ್ರದ ಅಭ್ಯರ್ಥಿ ಆಯ್ಕೆ ಗೊಂದಲದ ಬಗ್ಗೆ ಈಗಾಗಲೇ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ರಾಜ್ಯ ಉಸ್ತುವಾರಿಗಳೂ, ಕೆಪಿಸಿಸಿ ಅಧ್ಯಕ್ಷರು, ಹಾಗೂ ಪದಾಧಿಕಾರಿಗಳಿಗೂ ಈ ಬಗ್ಗೆ ಈ ಮೇಲ್ ಮತ್ತು ಪತ್ರದ ಮೂಲಕ ಮನವಿ ಮಾಡಲಾಗಿದೆ.

ಈ ಬಾರಿ ಕಾರ್ಕಳದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಪಣತೊಟ್ಟಿರುವ ಕಾರ್ಯಕರ್ತರು ಒಂದುವೇಳೆ ಕಾರ್ಯಕರ್ತರ ಮನವಿಯನ್ನು ಗಣನೆಗೆ ತೆಗೆದುಕೊಳ್ಳದೆ ಕಾರ್ಯಕರ್ತರ ಅಭಿಪ್ರಾಯದ ವಿರೋಧವಾಗಿ ಅಭ್ಯರ್ಥಿ ಆಯ್ಕೆಯಾದಲ್ಲಿ ಕಾರ್ಯಕರ್ತರು ತಟಸ್ಥ ನೀತಿ ಅನುಸರಿಸಲು ನಿರ್ಧರಿಸಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್, ಕಾರ್ಯಕರ್ತರಾದ ತಾರಾನಾಥ ಕೋಟ್ಯಾನ್, ಶೇಖ್ ಶಬ್ಬೀರ್, ವಲೇರಿಯನ್ ಪಾಯಸ್, ರಂಜಿತ್ ಸಿ ಟಿ ಹಾಗೂ ಇತರರು ಉಪಸ್ಥಿತರಿದ್ದರು.


Spread the love