ಮುಲ್ಕಿ ಡಬಲ್ ಮರ್ಡರ್ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ

Spread the love

ಮುಲ್ಕಿ ಡಬಲ್ ಮರ್ಡರ್ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ

ಮರ ಕಡಿಯುವ ವಿಚಾರಕ್ಕೆ ನಡೆದಿದ್ದ ದ್ವೇಷ ಕೊಲೆಯಲ್ಲಿ ಪತಿ–ಪತ್ನಿ ಹತ್ಯೆ, 2 ಲಕ್ಷ ರೂ. ದಂಡ ವಿಧಿಸಿದ ನ್ಯಾಯಾಲಯ

ಮುಲ್ಕಿ: ಮುಲ್ಕಿ ತಾಲೂಕು ಏಳಿಂಜೆ ಗ್ರಾಮದ ಮುತ್ತಯ್ಯಕೆರೆ ಆಗಿಂದಕಾಡು ಪ್ರದೇಶದಲ್ಲಿ 2020ರ ಏಪ್ರಿಲ್ 29ರಂದು ನಡೆದಿದ್ದ ಭೀಕರ ಡಬಲ್ ಮರ್ಡರ್ ಪ್ರಕರಣದಲ್ಲಿ ಆರೋಪಿಗೆ ಮಾನ್ಯ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಮರದ ಗೆಲ್ಲು ಕಡಿಯುವ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪಿ ಆಲ್ಫೋನ್ಸ್ ಸಲ್ದಾಣನು ತನ್ನ ನೆರೆಮನೆಯವರಾದ ವಿನ್ಸಿ ಯಾನೆ ವಿನ್ಸೆಂಟ್ ಡಿ.ಸೋಜಾನನ್ನು ರಾಜಿ ಪಂಚಾಯತಿ ಮಾಡುವ ನೆಪದಲ್ಲಿ ತನ್ನ ಮನೆಗೆ ಕರೆಸಿಕೊಂಡು ಗಲಾಟೆ ನಡೆಸಿ ಚೂರಿಯಿಂದ ತಿವಿದು ಕೊಲೆ ಮಾಡಿದ್ದನು. ಈ ವೇಳೆ ಪತಿಯನ್ನು ರಕ್ಷಿಸಲು ಧಾವಿಸಿದ ಅವರ ಪತ್ನಿ ಶ್ರೀಮತಿ ಹೆಲೆನ್ ಡಿ.ಸೋಜಾ ಯಾನೆ ಹೆಲೆನ್ ರೋಸಿ ರೋಡ್ರಿಗಸ್ ಅವರನ್ನು ಅಟ್ಟಾಡಿಸಿ ಅಮಾನುಷವಾಗಿ ಚೂರಿಯಿಂದ ತಿವಿದು ಕೊಲೆಗೈದಿದ್ದನು.

ಈ ಸಂಬಂಧ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. 31/2020 ಕಲಂ 341, 504, 506, 302 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಮುಲ್ಕಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾಗಿದ್ದ ಶ್ರೀ ಜಯರಾಮ ಡಿ. ಗೌಡ ಅವರು ಪ್ರಕರಣದ ಸಂಪೂರ್ಣ ತನಿಖೆ ನಡೆಸಿ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ತನಿಖೆಗೆ ಎಎಸ್ಐ ಉಮೇಶ್ ಕೆ ಹಾಗೂ ಹೆಡ್ ಕಾನ್ಸ್‌ಟೇಬಲ್ 725ನೇ ವಾದಿರಾಜ್ ಅವರು ಸಹಕರಿಸಿದ್ದರು.

ಪ್ರಕರಣವು ಮಾನ್ಯ ನ್ಯಾಯಾಲಯದಲ್ಲಿ ಎಸ್‌ಸಿ ನಂ. 69/2020 ಅಡಿಯಲ್ಲಿ ವಿಚಾರಣೆ ನಡೆದಿದ್ದು, 1ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಅವರು ವಿಚಾರಣೆ ನಡೆಸಿ, ಪ್ರಸ್ತುತ 2ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಜಗದೀಶ್ ಅವರು ದಿನಾಂಕ 19-01-2026ರಂದು ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 2 ಲಕ್ಷ ರೂ. ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.

ಸಾಕ್ಷಿ ವಿಚಾರಣೆಯ ವೇಳೆ ಸರ್ಕಾರಿ ಅಭಿಯೋಜಕರಾದ ಜುಡಿತ್ ಓಲ್ಗಾ ಮಾರ್ಗರೇಟ್ ಅವರು ಅಭಿಯೋಜನೆ ಪರ ಸಮರ್ಥವಾಗಿ ವಾದ ಮಂಡಿಸಿದ್ದರು. ನ್ಯಾಯಾಲಯದ ಕಾರ್ಯಾಚರಣೆಯಲ್ಲಿ ಮುಲ್ಕಿ ಪೊಲೀಸ್ ಠಾಣೆಯ ಮಪಿಸಿ 827ನೇ ಕಾವ್ಯಾ ಅವರು ಸಹಕರಿಸಿದ್ದರು.


Spread the love
Subscribe
Notify of

0 Comments
Inline Feedbacks
View all comments