ರಸ್ತೆಯಲ್ಲಿ ನಮಾಝ್ : ಪೊಲೀಸ್ ಪ್ರಕರಣ ವಾಪಾಸು ಪಡೆಯಲು ಅಲ್ಪಸಂಖ್ಯಾತ ಕಾಂಗ್ರೆಸ್ ಆಗ್ರಹ

Spread the love

ರಸ್ತೆಯಲ್ಲಿ ನಮಾಝ್ : ಪೊಲೀಸ್ ಪ್ರಕರಣ ವಾಪಾಸು ಪಡೆಯಲು ಅಲ್ಪಸಂಖ್ಯಾತ ಕಾಂಗ್ರೆಸ್ ಆಗ್ರಹ

ಮಂಗಳೂರು: ನಗರದ ಕಂಕನಾಡಿ ಮಸೀದಿ ಬಳಿಯ ರಸ್ತೆಯಲ್ಲಿ ನಮಾಝ್ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಿರುವ ಪೊಲೀಸ್ ಕ್ರಮ ಖಂಡಿಸಿ ಕೆ.ಕೆ.ಶಾಹುಲ್ ಹಮೀದ್ ನೇತೃತ್ವದ ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ನಿಯೋಗ ಬುಧವಾರ ಮಂಗಳೂರು ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಪ್ರಕರಣ ವಾಪಸ್ ಪಡೆಯುವಂತೆ ಆಗ್ರಹಿಸಿದೆ.

ಜಿಲ್ಲೆಯ ಇತಿಹಾಸದಲ್ಲೇ ಇದುವರೆಗೆ ಸಾರ್ವಜನಿಕ ರಸ್ತೆಯಲ್ಲಿ ಯಾವುದೇ ಧಾರ್ಮಿಕ ಚಟುವಟಿಕೆಗಳು ನಡೆದಾಗ ಇಲ್ಲದ ಸುಮೋಟೋ ಕೇಸ್ ಕೇವಲ 3 ನಿಮಿಷ ಮಸೀದಿಗೆ ತಾಗಿದ ರಸ್ತೆಯಲ್ಲಿ ನಮಾಝ್ ಮಾಡಿದವರ ಮೇಲೆ ಪೊಲೀಸರು ಹಾಕಿದ್ದಾರೆ. ಕೋಮು ಕ್ರಿಮಿಗಳ ಒತ್ತಡಕ್ಕೆ ಮಣಿದು ಪೊಲೀಸರು ಮಾಡಿದ ಕೃತ್ಯದಿಂದಾಗಿ ಮುಸ್ಲಿಂ ಸಮುದಾಯಕ್ಕೆ ತೀವ್ರ ನೋವುಂಟಾಗಿದೆ. ಪೊಲೀಸರ ತಾರತಮ್ಯ ನೀತಿಯು ಅತಿರೇಕದ ಪರಮಾವಧಿ. ಇದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದೆ.

ಈ ಬಗ್ಗೆ ವಿಧಾನ ಸಭಾಧ್ಯಕ್ಷ, ಗೃಹಸಚಿವ ಮತ್ತು ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದ್ದು, ತಕ್ಷಣ ಕೇಸ್ ವಾಪಸ್ ಪಡೆಯುವುದಾಗಿ ಕಮಿಷನರ್ ಅನುಪಮ್ ಅಗರ್ವಾಲ್ ಭರವಸೆ ನೀಡಿದರು.

ನಿಯೋಗದಲ್ಲಿ ಪಕ್ಷದ ಮುಖಂಡರಾದ ಹಾಜಿ ಇಬ್ರಾಹೀಂ ಕೋಡಿಜಾಲ್, ಕಣಚೂರು ಮೋನು, ಎಂ.ಎಸ್.ಮಹಮ್ಮದ್, ಮಾಜಿ ಮೇಯರ್ ಕೆ.ಅಶ್ರಫ್, ಕಾರ್ಪೊರೇಟರ್ ಗಳಾದ ಲತೀಫ್ ಕಂದಕ್, ಸಂಶುದ್ದೀನ್ ಕುದ್ರೋಳಿ, ಅಶ್ರಫ್ ಬಜಾಲ್, ಪದಾಧಿಕಾರಿಗಳಾದ ಹಬೀಬುಲ್ಲಾ ಕಣ್ಣೂರು, ಮಹಮ್ಮದ್ ಬಪ್ಪಳಿಗೆ, ಸಿರಾಜ್ ಬಜ್ಪೆ, ಅಶ್ರಫ್ ಬೆಂಗ್ರೆ, ಅಬ್ದುಲ್ ಜಲೀಲ್ ಮೋಂಟುಗೋಳಿ, ಮುಸ್ತಫಾ ಪಾವೂರ್, ವಹಾಬ್ ಕುದ್ರೋಳಿ, ಎ.ಆರ್.ಇಮ್ರಾನ್, ಸಲೀಂ ಪಾಂಡೇಶ್ವರ, ನಿಸಾರ್ ಬಜ್ಪೆ, ಮುನೀರ್, ರಫೀಕ್ ಕಣ್ಣೂರು, ಶರೀಫ್ ವಳಾಲು, ಆಸೀಫ್ ಬಜಾಲ್, ಫಯಾಝ್ ಅಮ್ಮೆಮ್ಮಾರ್ ಉಪಸ್ಥಿತರಿದ್ದರು.


Spread the love