ರಾಜ್ಯಪಾಲರು ಕೇಂದ್ರ ಸರಕಾರದ ಕೈಗೊಂಬೆಯಂತೆ ವರ್ತಿಸಿದ್ದಾರೆ – ವೆರೋನಿಕಾ ಕರ್ನೆಲಿಯೋ

Spread the love

ರಾಜ್ಯಪಾಲರು ಕೇಂದ್ರ ಸರಕಾರದ ಕೈಗೊಂಬೆಯಂತೆ ವರ್ತಿಸಿದ್ದಾರೆ – ವೆರೋನಿಕಾ ಕರ್ನೆಲಿಯೋ

ಉಡುಪಿ: ರಾಜ್ಯಪಾಲರು ಕೇಂದ್ರ ಸರಕಾರದ ಕೈಗೊಂಬೆಯಂತೆ ವರ್ತಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದು ಆಪರೇಶನ್ ಕಮಲದ ಮೂಲಕ ಸರಕಾರವನ್ನು ಪತನಗೊಳಿಸುವ ಷಡ್ಯಂತ್ರದ ಒಂದು ಭಾಗವಾಗಿದೆ ಎಂದು ಕೆಪಿಸಿಸಿ ವಕ್ತಾರರಾದ ವೆರೋನಿಕಾ ಕರ್ನೆಲಿಯೋ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯೇತರ ಸರಕಾರಗಳು ಇರುವ ರಾಜ್ಯಗಳಲ್ಲಿ ಕೇಂದ್ರದ ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಸರಕಾರ ರಾಜ್ಯಪಾಲರ ಮೂಲಕ ಷಡ್ಯಂತ್ರಗಳನ್ನು ರಚಿಸಿ ಅಲ್ಲಿನ ಸರಕಾರಗಳನ್ನು ಅಸ್ಥೀರಗೊಳಿಸುವ ಕೆಲಸ ಮಾಡುತ್ತಿರುವುದು ಇದೇನು ಮೊದಲಲ್ಲ. ಕೇರಳ, ಪಶ್ಚಿಮ ಬಂಗಾಳ, ದೆಹಲಿ ಇನ್ನಿತರ ರಾಜ್ಯಗಳಲ್ಲಿ ಇದರ ಅನುಭವ ಈಗಾಗಲೇ ಆಗಿದ್ದು, ಜನರಿಂದ ಬಹುಮತದೊಂದಿಗೆ ಆಯ್ಕೆಯಾಗಿದ್ದ ಕರ್ನಾಟಕದ ಸಿದ್ದರಾಮಯ್ಯ ನೇತೃತ್ವದ ಸರಕಾರದ ಜನಪರ ಗ್ಯಾರಂಟಿ ಯೋಜನೆಗಳಿಂದ ಹತಾಶರಾಗಿರುವ ಬಿಜೆಪಿಗರು ರಾಜ್ಯಪಾಲರನ್ನು ದಾಳವಾಗಿರಿಸಿಕೊಂಡು ಯಾವುದೋ ಸಾಮಾಜಿಕ ಕಾರ್ಯಕರ್ತ ಎಂಬ ವ್ಯಕ್ತಿಯ ಸುಳ್ಳು ದೂರಿನ ಮೇಲೆ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದು ಕಾನೂನು ಬಾಹಿರವಾಗಿದೆ.

ಟಿ.ಜೆ. ಅಬ್ರಹಾಂ ಅವರು ಸಿಎಂ ವಿರುದ್ಧ ದೂರು ಕೊಟ್ಟ ಬಳಿಕ ರಾಜ್ಯಪಾಲರು ನೀಡಿದ ನೋಟಿಸಿಗೆ ಸರಕಾರದ ಮುಖ್ಯ ಕಾರ್ಯದರ್ಶಿಗಳು ರಾಜಭವನಕ್ಕೆ ಸಮರ್ಪಕ ಮಾಹಿತಿ ಕೊಟ್ಟಿದ್ದಾರೆ. ಅದರ ಬಳಿಕವೂ ಬಿಜೆಪಿಗರ ಹಾಗೂ ಕೇಂದ್ರ ಸರಕಾರದ ಒತ್ತಡದೊಂದಿಗೆ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾರೆ. ಎಚ್ ಡಿ ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ ಮುಂತಾದವರ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ಕೋರಿ ಎಂಟು ಹತ್ತು ತಿಂಗಳಿನಿಂದಲೂ ರಾಜ್ಯಪಾಲರ ಮುಂದೆ ಕೋರಿಕೆಗಳಿವೆ. ಅವುಗಳನ್ನು ಉದಾಸೀನ ಮಾಡಿರುವ ಅವರು, ಯಾವ ಹುರುಳೂ ಇಲ್ಲದ ಮುಡಾ ಹಗರಣದ ಬಗ್ಗೆ ವಿಪರೀತ ಆಸಕ್ತಿ ತಾಳಿರುವುದು ಅವರಿಗೆ ಕೇಂದ್ರದ ಮೋದಿ ಸರಕಾರ ನೀಡುತ್ತಿರುವ ಸೂಚನೆ ಎನ್ನುವುದು ಸ್ಪಷ್ಠವಾಗಿ ಗೋಚರಿಸುತ್ತದೆ.

ಕೇಂದ್ರದ ಬಿಜೆಪಿ ಸರಕಾರವು ದೆಹಲಿ, ತಮಿಳುನಾಡು ಮುಂತಾದ ರಾಜ್ಯ ಸರ್ಕಾರಗಳ ವಿರುದ್ಧ ನಡೆಸುತ್ತಿರುವಂತಹ ಕೆಟ್ಟ ರಾಜಕಾರಣವನ್ನು ಈಗ ಕರ್ನಾಟಕದಲ್ಲೂ ಶುರು ಮಾಡಿದೆ. ಇದು ಭಾರೀ ಬಹುಮತದಿಂದ ಆರಿಸಿ ಬಂದಿರುವ ರಾಜ್ಯ ಸರ್ಕಾರದ ವಿರುದ್ಧ ತೋರಿಸುತ್ತಿರುವ ಅಸಹನೆಯಾಗಿದೆ. ಮುಡಾ ಹಗರಣದಲ್ಲಿ ತಪ್ಪು ಮಾಡಿರುವುದು ಆ ಸಂಸ್ಥೆ. ಸಿದ್ದರಾಮಯ್ಯನವರ ಕುಟುಂಬಕ್ಕೆ ಬದಲಿ ನಿವೇಶನಗಳನ್ನು ಕೊಟ್ಟಿದ್ದು ಬಿಜೆಪಿ ಸರಕಾರ. ಆಗ ಮುಡಾ ಸಭೆಯಲ್ಲಿ ಬಿಜೆಪಿ ನಾಯಕರೇ ಇದ್ದರು. ವಸ್ತುಸ್ಥಿತಿ ಹೀಗಿರುವಾಗ ಸಿದ್ದರಾಮಯ್ಯನವರನ್ನು ಬಲಿಪಶು ಮಾಡಲು ಸಂಚು ನಡೆಯುತ್ತಿರುವುದು ಖಂಡನೀಯ

ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಯನ್ನು ಕೇಳಲು ಬಿಜೆಪಿಗೆ ಯಾವ ನೈತಿಕತೆ ಇದೆ? ಸ್ವತಃ ತನ್ನ ಅನ್ನದ ಬಟ್ಟಲಿನಲ್ಲಿ ಇರುವ ಕಸವನ್ನು ಸ್ವಚ್ಚಗೊಳಿಸದೆ ಮುಡಾ ಪ್ರಕಾರದಲ್ಲಿ ಯಾವುದೇ ರೀತಿಯ ತಪ್ಪು ಮಾಡದ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ತೊಂದರೆ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದಕ್ಕೆಲ್ಲಾ ರಾಜ್ಯದ ಜನತೆ ಸೂಕ್ತ ಉತ್ತರ ನೀಡಲಿದ್ದಾರೆ. ಸಿದ್ದರಾಮಯ್ಯ ಅವರ ಬೆನ್ನಿಗೆ ರಾಜ್ಯದ 6 ಕೋಟಿ ಜನತೆ ಬೆಂಬಲವಾಗಿ ನಿಂತಿದ್ದು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಬೇಕಾದ ಅಗತ್ಯವಿಲ್ಲ .ಮುಖ್ಯಮಂತ್ರಿಗಳ ವಿರುದ್ದ ಬಂದಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಇದು ಕೇವಲ ಬಿಜೆಪಿಗರು ಪ್ರಚಾರದ ನಿಟ್ಟಿನಲ್ಲಿ ಮಾಡಿದ ರಾಜಕೀಯ ಷಡ್ಯಂತ್ರವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ


Spread the love
Subscribe
Notify of

0 Comments
Inline Feedbacks
View all comments