ರಾಜ್ಯ ವಿಧಾನ ಪರಿಷತ್ ಚುನಾವಣೆ : ಪಿ ವಿ ಮೋಹನ್ ಆಯ್ಕೆಗೆ ಜನ ಸಂಘಟನೆಗಳ ಮನವಿ

Spread the love

ರಾಜ್ಯ ವಿಧಾನ ಪರಿಷತ್ ಚುನಾವಣೆ : ಪಿ ವಿ ಮೋಹನ್ ಆಯ್ಕೆಗೆ ಜನ ಸಂಘಟನೆಗಳ ಮನವಿ

ಮಂಗಳೂರು : ಸುಮಾರು ನಾಲ್ಕು ದಶಕಗಳಿಗೂ ಅಧಿಕ ಕಾಲ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಪರ ಚಳುವಳಿಗಳ ಒಡನಾಡಿಯಾಗಿರುವ ಜನಪರ ಹೋರಾಟಗಾರ ಹಾಗೂ ಕಾಂಗ್ರೆಸ್ ಪಕ್ಷದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯೂ ಆಗಿರುವ ಪಿ ವಿ ಮೋಹನ್ ಅವರನ್ನು ಜೂನ್ 18 ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ರಾಜ್ಯದ ಎಲ್ಲಾ ವಿಧಾನ ಸದಸ್ಯರು, ಪಕ್ಷ ಬೇಧ ಮರೆತು, ಅತ್ಯಧಿಕ ಮತಗಳಿಂದ ಗೆಲ್ಲಿಸಬೇಕು ಎಂದು ದ.ಕ. ಜಿಲ್ಲೆಯ ಜನಪರ ಸಂಘಟನೆಗಳು ಮನವಿ ಮಾಡಿವೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಎಸ್‌ಸಿಎಸ್‌ಟಿ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಲೋಲಾಕ್ಷ, ಕಲುಷಿತ ಗೊಂಡಿರುವ ರಾಜಕೀಯ ಕ್ಷೇತ್ರದಲ್ಲಿ ಅತ್ಯಂತ ವಿರಳ ಎನ್ನಬಹುದಾದ ಸರಳ – ಸಜ್ಜನಿಕೆಯ ರಾಜಕೀಯ ನೇತಾರರಾದ ಪಿ ವಿ ಮೋಹನ್ ಅವರನ್ನು, ವಿಧಾನ ಪರಿಷತ್ ಚುನಾವಣೆಗೆ ತನ್ನ ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವುದು ಅತ್ಯುತ್ತಮ ನಿರ್ಧಾರವಾಗಿದೆ. ಇದಕ್ಕೆ ಪಕ್ಷದ ಎಲ್ಲಾ ಪ್ರಮುಖರಿಗೂ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

ಸಾಮಾಜಿಕ ಬದ್ಧತೆ ಮತ್ತು ಕಾಳಜಿ ಇರುವ ಪಿ ವಿ ಮೋಹನ್ ಅವರು ರಾಜ್ಯ ಶಾಸನ ಸಭೆಗೆ ಆಯ್ಕೆ ಆಗುವ ದಿನದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾತಿ ಹಾಗೂ ವೃತ್ತಿ ರಾಜಕಾರಣಕ್ಕೆ ಭಿನ್ನವಾದ, ಜನಪರ ರಾಜಕಾರಣದ ಹೊಸ ಅಧ್ಯಾಯವೊಂದು ಆರಂಭಗೊಳ್ಳಲಿದೆ ಮತ್ತು ಇದು ರಾಜ್ಯಕ್ಕೇ ಮಾದರಿಯಾಗಲಿದೆ. ಮಾತ್ರವಲ್ಲ, ಪಿ ವಿ ಮೋಹನ್ ಅವರು ರಾಜ್ಯ ವಿಧಾನ ಪರಿಷತ್ ನಲ್ಲಿ ರಾಜ್ಯದ, ಅದರಲ್ಲೂ ಮುಖ್ಯವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ, ದನಿ ಇಲ್ಲದ ಶೋಷಿತ ಜನಸಮುದಾಯಗಳ, ವಿದ್ಯಾರ್ಥಿ – ಯುವ ಜನರ ಆಶೋತ್ತರಗಳ ಗಟ್ಟಿ ದನಿಯಾಗಿ ಹೊರಹೊಮ್ಮಲಿದ್ದಾರೆ. ಇದರಿಂದ ಇಡೀ ರಾಜ್ಯಕ್ಕೆ ಒಳಿತಾಗಲಿದೆ ಎಂದು ನಾವು ದೃಢ ವಿಶ್ವಾಸ ಹೊಂದಿದ್ದೇವೆ. ಆದ್ದರಿಂದಲೇ ಪಿ ವಿ ಮೋಹನ್ ಅವರನ್ನು ಅತ್ಯಧಿಕ ಮತಗಳಿಂದ ರಾಜ್ಯ ವಿಧಾನ ಸಭೆಯಿಂದ ವಿಧಾನ ಪರಿಷತ್ ಗೆ ಆಯ್ಕೆ ಮಾಡಬೇಕು ಎಂದು ನಾವು ರಾಜ್ಯದ ಎಲ್ಲಾ ಶಾಸಕರನ್ನು ವಿನಂತಿ ಮಾಡುತ್ತಿದ್ದೇವೆ ಎಂದರು.

ಅಹಿಂದ ಉಪಾಧ್ಯಕ್ಷ ಬಿ.ಎ.ಎಂ. ಹನೀಫ್ ಮಾತನಾಡಿ, ಶೋಷಿತ ಸಮುದಾಯದ ಧ್ವನಿಯಾಗಿರುವ ಪಿ.ವಿ. ಮೋಹನ್‌ರವರು ಇತರ ಸಮುದಾಯಗಳ ಜತೆಗೂ ಆತ್ಮೀಯತೆಯನ್ನು ಹೊಂದಿದರು. ಅವರು ಆಯ್ಕೆಯಾದಲ್ಲಿ ಶೋಷಿತರಿಗೆ ಸಮುದಾಯದಕ್ಕೆ ಪೂರಕವಾದ ನೀತಿ ರಚನೆಯಲ್ಲೂ ಮೈಲಿಗಲ್ಲಾಗಬಹುದು ಎಂದರು.

ಗೋಷ್ಠಿಯಲ್ಲಿ ಬಾಲ ಕಾರ್ಮಿಕ ವಿರೋಧಿ ಅಭಿಯಾನದ ಸಂಚಾಲಕ ರೆನ್ನಿ ಡಿಸೋಜಾ, ಎಸ್‌ಎಸ್‌ಟಿ ಅಧ್ಯಯನ ಮತ್ತು ಅಭಿವೃದ್ಧಿ ಟ್ರಸ್ಟ್‌ನ ಅಧ್ಯಕ್ಷ ಮೋಹನಾಂಗಯ್ಯ ಸ್ವಾಮಿ, ಆದಿದ್ರಾವಿಡ ಕೊರಗ ಅಭಿವೃದ್ಧಿ ಸಂಘದ ಮಾಜಿ ಅಧ್ಯಕ್ಷೆ ಕಮಲಾ, ಕರ್ನಾಟಕ ರಾಜ್ಯ ಆದಿದ್ರಾವಿಡ ಸಂಘದ ರಾಜ್ಯ ಸಮಿತಿ ಸಲಹೆಗಾರ ಅನಿಲ್ ಕುಮಾರ್, ಪಾನರ ಯಾನೆ ನಲಿಕೆಯವರ ಸಂಘದ ಅಧ್ಯಕ್ಷ ಪದ್ಮನಾಭ, ಸಾಮಾಜಿಕ ಕಾರ್ಯಕರ್ತ ಅಶೋಕ್ ಭಟ್ ಉಪಸ್ಥಿತರಿದ್ದರು.


Spread the love
Subscribe
Notify of

0 Comments