ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ  ಸಯಾನ್ಸಿಯೊ-2019 ಕಾರ್ಯಕ್ರಮದ ಉದ್ಘಾಟನೆ

Spread the love

ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ  ಸಯಾನ್ಸಿಯೊ-2019 ಕಾರ್ಯಕ್ರಮದ ಉದ್ಘಾಟನೆ

ವಿದ್ಯಾಗಿರಿ: ನಾವು ಜೀವನದಲ್ಲಿಕಂಡ ಕನಸನ್ನು ನನಸಾಗಿಸುವ ಜವಾಬ್ದಾರಿಯೂ ನಮ್ಮದಾಗಿರಬೇಕು. ಆದ್ದರಿಂದ ಕಠಿಣ ಪರಿಶ್ರಮ ಅಗತ್ಯ ಎಂದು ಕಾರ್ಕಳ ಜ್ಞಾನಸುಧಾ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕ ಡಾ.ಸುಧಾಕರ್ ಶೆಟ್ಟಿ ಹೇಳಿದರು.

ಇವರು ಆಳ್ವಾಸ್ ಕಾಲೇಜಿನ ವಿ.ಎಸ್‍ಆಚಾರ್ಯ ಸಭಾಂಗಣದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ವಿಜ್ಞಾನ ವಿಭಾಗದ ವತಿಯಿಂದ ಆಯೋಜಿಸಲಾದ “ಸಯಾನ್ಸಿಯೊ– 2019” ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ಜೀವನದಲ್ಲಿನ ಅನೇಕ ಉತ್ತಮ ಬದಲಾವಣೆಗಳಿಗೆ ಸಮಾಜ, ಹಾಗೂ ಪೋಷಕರು ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ವಿದ್ಯಾರ್ಥಿಗಳೆಲ್ಲರೂ ವಿಜ್ಞಾನಿಗಳಾಗುವ ಮೊದಲು ಉತ್ತಮ ಪ್ರಜೆಯಾಗಬೇಕು. ಸಮಾಜದ ಬಗೆಗೆ ಸಕಾರಾತ್ಮಕವಾಗಿ ಚಿಂತಿಸಿ, ಅತ್ಯುತ್ತಮ ಕೊಡುಗೆಗಳನ್ನು ನೀಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ನಾವೇ ಒಂದು ಸಮರ್ಪಕ ದಾರಿಯನ್ನು ಸೃಷ್ಟಿಸಿ, ಆ ಹಾದಿಯಲ್ಲಿ ಸಾಗಿದಾಗ ಯಶಸ್ಸು ನಮ್ಮದಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಯಾವುದೇ ಕಾರ್ಯವು ಆರಂಭದಲ್ಲಿ ಕಠಿಣವಾಗಿದ್ದರೂ, ಮುಂದೊಂದು ದಿನ ಅದು ನಮಗೆ ಫಲಪ್ರದವಾಗಿ ಮಾರ್ಪಾಡಗುತ್ತದೆ. ಆದ್ದರಿಂದ ಯಾವುದೇ ಕಾರ್ಯವನ್ನು ಸಕಾರಾತ್ಮಕವಾಗಿ ಚಿಂತಿಸಿ ಆರಂಭಿಸಬೇಕು. ತಾವು ಸಾಧಿಸಬೇಕಾದ ವಿಷಯದ ಕುರಿತು ಉತ್ತಮ ಮನೋಭಾವನೆಯನ್ನು ಬೆಳೆಸಿಕೊಳ್ಳುವುದು ಅಗತ್ಯ. ವಿದ್ಯಾರ್ಥಿಗಳು ತಮ್ಮ ಜ್ಞಾನದ ಪರಿಧಿಯನ್ನು ಒಂದೇ ವಿಷಯಕ್ಕೆ ಸೀಮಿತಗೊಳಿಸದೆ, ಎಲ್ಲಾ ವಿಷಯಗಳಲ್ಲಿ ಆಸಕ್ತಿಯನ್ನು ವಹಿಸಬೇಕು. ಆಗಲೇ ಪ್ರತಿಯೊಬ್ಬ ಪ್ರಜೆಯು ಭವಿಷ್ಯದ ಯುವ ಜನತೆಗೆ ಪ್ರೇರೆಪಣೆ ನೀಡಲು ಸಾಧ್ಯ ಎಂದರು.

ವಿಜ್ಞಾನ ವಿಷಯದ ವಿವಿಧ ವಿಭಾಗಳಿಂದ 25 ಕ್ಕೂಅಧಿಕ ಮಾದರಿಗಳ ಪ್ರದರ್ಶನ ಹಾಗೂ ವಿಜ್ಞಾನಕ್ಕೆ ಸಂಬಂಧಿಸಿದ ಹಲವು ರೀತಿಯ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ವಿಜ್ಞಾನ ವಿಭಾಗದ ಡೀನ್ ರಮ್ಯಾ ರೈ,ಪಿ.ಡಿ ಕಾರ್ಯಕ್ರಮ ಸಂಯೋಜಕಿ ಶ್ವೇತಾ ಡಿ. ಶೆಟ್ಟಿ ಹಾಗೂ ವಿದ್ಯಾರ್ಥಿ ಸಂಯೋಜಕ ಆದರ್ಶ್ ಎಚ್.ಎ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸಮ್ರಿನಾ ವಂದಿಸಿ, ವಿದ್ಯಾರ್ಥಿ ಸಂಯೋಜಕ ನಿಖಿಲ್‍ರೈ ಸ್ವಾಗತಿಸಿ, ಆಯನಾ ಕಾರ್ಯಕ್ರಮವನ್ನು ನಿರೂಪಿಸಿದರು.

ಬಾಕ್ಸ್  ಐಟಮ್:
ವಿಜ್ಞಾನವೆಂಬುದು ಸ್ತಬ್ಧವಾಗಿರದೇ, ದಿನಾಲು ಹೊಸ ತಂತ್ರಜ್ಞಾನಗಳ ಆವಿಷ್ಕಾರ ನಡೆಯುತ್ತಲೇ ಇರುತ್ತದೆ. ಆದ್ದರಿಂದ ವಿಜ್ಞಾನ ಕ್ಷೇತ್ರದಲ್ಲಿ ನೂತನ ಆವಿಷ್ಕಾರಗಳಿಗಾಗಿ ತಮ್ಮ ಚೌಕಟ್ಟನ್ನು ಮೀರುವುದು ಅಗತ್ಯ. ದೈನಂದಿನ ಜೀವನದಲ್ಲಿ ನಾವು ಏನನ್ನು ಅರಿತುಕೊಳ್ಳುತ್ತೇವೆಯೋ ಅವೆಲ್ಲವೂ ವಿಜ್ಞಾನದ ಒಂದು ಭಾಗವಾಗಿದೆ. ಆದ್ದರಿಂದ ವಿಜ್ಞಾನವೆನ್ನುವುದೊಂದು ನಂಬಿಕೆ.


Spread the love