ರಾಹುಲ್ ಗಾಂಧಿ ವಿರುದ್ಧದ ಹೇಳಿಕೆ ಖಂಡನೀಯ: ಬಿಜೆಪಿ ಶಾಸಕ ಯಶ್ಪಾಲ್ ಸುವರ್ಣ ವಿರುದ್ಧ ಯು.ಟಿ. ಖಾದರ್ ವಾಗ್ದಾಳಿ
ಮಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕುರಿತು ಬಿಜೆಪಿ ಶಾಸಕ ಯಶ್ಪಾಲ್ ಸುವರ್ಣ ನೀಡಿರುವ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್, ಇಂತಹ ಹೇಳಿಕೆಗಳು ಕರಾವಳಿಯ ಜನಪ್ರತಿನಿಧಿಗಳಿಗೆ ಕಪ್ಪು ಚುಕ್ಕೆ ಎಂದು ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ರಾಹುಲ್ ಗಾಂಧಿಯ ಕಿರುಬೆರಳಿಗೂ ಅವರು ಸಮನಲ್ಲ. ಇಂತಹ ಜನಪ್ರತಿನಿಧಿಗಳ ಹೇಳಿಕೆಗಳು ಕರಾವಳಿಯ ಘನತೆಗೆ ಧಕ್ಕೆ ತರುತ್ತವೆ. ಕರಾವಳಿಯ ಜನಪ್ರತಿನಿಧಿಗಳಿಗೆ ವಿಶೇಷ ಗೌರವವಿದ್ದು, ನಾವು ಬೇರೆ ಜಿಲ್ಲೆಯವರಂತಲ್ಲ. ಈ ರೀತಿಯ ಹೇಳಿಕೆಯನ್ನು ಯಾರೂ ಒಪ್ಪುವುದಿಲ್ಲ. ಅವರ ಮನೆಯವರೇ ಸಹ ಇಂತಹ ಹೇಳಿಕೆಯನ್ನು ಒಪ್ಪುವುದಿಲ್ಲ,” ಎಂದು ಹೇಳಿದರು.
“ಉತ್ತರ ಭಾರತದಲ್ಲಿ ಶಾಂತಿ ನೆಲೆಸಲೆಂದು ಇಂದಿರಾ ಗಾಂಧಿ ತಮ್ಮ ರಕ್ತವನ್ನು ಕೊಟ್ಟಿದ್ದಾರೆ. ದಕ್ಷಿಣ ಭಾರತದಲ್ಲಿ ಶಾಂತಿ ಉಳಿಯಲೆಂದು ರಾಜೀವ್ ಗಾಂಧಿ ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಆದರೆ ಇಂತಹ ಹೇಳಿಕೆಗಳನ್ನು ನೀಡುವವರದ್ದು ತಾಲಿಬಾನ್ ಡಿಎನ್‌ಎ ಇರಬೇಕು. ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಈ ರೀತಿಯ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ,” ಎಂದು ಖಾದರ್ ವಾಗ್ದಾಳಿ ನಡೆಸಿದರು.
ಕರಾವಳಿಯ ಜನರು ಸಂಯಮ, ಸೌಹಾರ್ದ ಮತ್ತು ಪ್ರಬುದ್ಧತೆಗೆ ಹೆಸರುವಾಸಿಯಾಗಿದ್ದು, ಮಂಗಳೂರಿನವರ ಬಗ್ಗೆ ದೇಶಾದ್ಯಂತ ವಿಶೇಷ ಗೌರವವಿದೆ. ಅಂತಹ ಪ್ರದೇಶದ ಜನಪ್ರತಿನಿಧಿಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಯು.ಟಿ. ಖಾದರ್ ಹೇಳಿದರು.
ಯುವಜನರಲ್ಲಿ ಎಚ್‌ಐವಿ ಸೋಂಕು ಏರಿಕೆ ವರದಿ: ಕಡ್ಡಾಯ ಪರೀಕ್ಷೆಗೆ ಯಾವುದೇ ಆದೇಶ ನೀಡಿಲ್ಲ
ಮಂಗಳೂರು: ರಾಜ್ಯದ ಯುವಜನರಲ್ಲಿ ಎಚ್‌ಐವಿ (HIV) ಸೋಂಕು ಹೆಚ್ಚಳವಾಗಿದ್ದು, 7,000ಕ್ಕೂ ಅಧಿಕ ಯುವಕರಲ್ಲಿ ಸೋಂಕು ಪತ್ತೆಯಾಗಿದೆ ಎಂಬ ವರದಿಗಳ ಕುರಿತು ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಯು.ಟಿ. ಖಾದರ್, ರಾಜ್ಯದಲ್ಲಿ ಕಡ್ಡಾಯ ಎಚ್‌ಐವಿ ಪರೀಕ್ಷೆ ನಡೆಸುವಂತೆ ಸರ್ಕಾರ ಯಾವುದೇ ಆದೇಶ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
“ಎಚ್‌ಐವಿ ಪರೀಕ್ಷೆಯನ್ನು ಕಡ್ಡಾಯಗೊಳಿಸುವಂತೆ ಎಲ್ಲಿಯೂ ಯಾವುದೇ ಆದೇಶ ನೀಡಿಲ್ಲ. ಕಾನೂನಾತ್ಮಕವಾಗಿಯೂ ಕಡ್ಡಾಯ ಪರೀಕ್ಷೆ ನಡೆಸಲು ಸಾಧ್ಯವಿಲ್ಲ. ಕೆಲವೆಡೆ ಜಾಗೃತಿ ಹಾಗೂ ಆರೋಗ್ಯ ಶಿಬಿರಗಳ ಮಾದರಿಯಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಆದರೆ ಅದನ್ನು ಕಡ್ಡಾಯ ಮಾಡಬೇಕು ಎಂದು ಸರ್ಕಾರ ಹೇಳಿಲ್ಲ,” ಎಂದರು.
ಎಚ್‌ಐವಿ ಸೋಂಕಿನ ಪ್ರಮಾಣದಲ್ಲಿ ಹಿಂದಿನ ಅನುಪಾತವೇ ಮುಂದುವರಿದಿದ್ದು, ಸೋಂಕು ಗಣನೀಯವಾಗಿ ಹೆಚ್ಚಾಗಿದೆ ಅಥವಾ ಕಡಿಮೆಯಾಗಿದೆ ಎಂಬುದಾಗಿ ಹೇಳಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.
ಈ ಕುರಿತು ಆರೋಗ್ಯ ಇಲಾಖೆಯ ಅಧಿಕಾರಿಗಳು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ನಾಳೆ ಮತ್ತೊಮ್ಮೆ ಸಂಪೂರ್ಣ ಮಾಹಿತಿ ಪಡೆದು ಪರಿಶೀಲನೆ ನಡೆಸುತ್ತೇನೆ. ಈ ರೀತಿಯ ಸುದ್ದಿ ಹೇಗೆ ಹರಡಿತು ಎಂಬುದನ್ನೂ ಪರಿಶೀಲಿಸಲಾಗುವುದು ಎಂದು ಸಚಿವ ಯು.ಟಿ. ಖಾದರ್ ಹೇಳಿದರು.













