ರಾ.ಹೆ ಕಾಮಗಾರಿ ಪೂರ್ಣಗೊಳಿಸಲು ನವಯುಗ ಕಂಪೆನಿಗೆ ಡಿಸೆಂಬರ್ ತನಕ ಗಡುವು – ಶೋಭಾ ಕರಂದ್ಲಾಜೆ
ಉಡುಪಿ: ಕುಂದಾಪುರ ಫ್ಲೈ ಓವರ್ ಹಾಗೂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಪೂರ್ಣಗೊಳಿಸಲು ನವಯುಗ ಕಂಪೆನಿಗೆ ಡಿಸೆಂಬರ್ ತನಕ ಸಮಯ ನೀಡಲಾಗಿದ್ದು, ಅದಕ್ಕೆ ತಪ್ಪಿದ್ದಲ್ಲಿ ಕಂಪೆನಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಅವರು ಸೋಮವಾರ ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವ್ಯವಸ್ಥೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ನಮ್ಮ ಸರಕಾರ ಬರುವ ಮೊದಲು ನವಯುಗ ಕಂಪೆನಿಗೆ ಗುತ್ತಿಗೆ ನೀಡಲಾಗಿತ್ತು. ನಮ್ಮ ಸರಕಾರ ಬಂದ ಮೇಲೆ ತಮ್ಮಲ್ಲಿ ಹಣವಿಲ್ಲ ಎಂದು ಕಾಮಗಾರಿ ಮಾಡದೆ ನಿಲ್ಲಿಸಿದ್ದು, ಬಳಿಕ ಸಚಿವ ನಿತಿನ್ ಗಡ್ಕರಿಯವರು ಸಭೆ ನಡೆಸಿ ಹಣಕಾಸು ಸಹಕಾರ ಮಾಡಿದ್ದರು. ಆದರೆ ಮತ್ತೆ ಕಂಪೆನಿ ಕೆಲಸ ನಿಲ್ಲಿಸಿದ್ದಾರೆ.
ಮತ್ತೆ ಪುನಃ ಇತ್ತೀಚೆಗೆ ಸಚಿವರು ಅವರೊಂದಿ ಸಭೆ ನಡೆಸಿದ್ದು ಮಳೆಗಾಲದ ಬಳಿಕ ಕಾಮಗಾರಿ ಆರಂಭಿಸುವುದಾಗಿ ಹೇಳಿದ್ದಾರೆ. ನಾವು ಡಿಸೆಂಬರ್ ತನಕ ಕಾದು ಬಳಿಕ ಅವರ ಮೇಲೆ ಯಾವ ಕ್ರಮ ಕೈಗೊಳ್ಳಬೇಕು ಅದನ್ನು ಕೈಗೊಳ್ಳಲಿದ್ದೇವೆ ಎಂದರು.













