ರಿಕ್ಷಾದಲ್ಲಿ ಬಂದು, ನಾಲ್ವರನ್ನು ಕೊಂದ!:  ಆರೋಪಿಯ ಕುರಿತು ಮಾಹಿತಿ ನೀಡಿದ ಆಟೋ ಚಾಲಕ

Spread the love

ಆಟೋ ರಿಕ್ಷಾದಲ್ಲಿ ಬಂದು, ನಾಲ್ವರನ್ನು ಕೊಂದ!:  ಆರೋಪಿಯ ಕುರಿತು ಮಾಹಿತಿ ನೀಡಿದ ಆಟೋ ಚಾಲಕ

ಉಡುಪಿ:  ಒಂದೇ ಕುಟುಂಬದ ನಾಲ್ವರ ಹತ್ತೆ ಪ್ರಕರಣ   ಆರೋಪಿ ಬಾಡಿಗೆ ರಿಕ್ಷಾದಲ್ಲಿ ಬಂದು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದ್ದು. ಈ ಬಗ್ಗೆ ರಿಕ್ಷಾ ಚಾಲಕ ಮಾಹಿತಿ ಹಂಚಿಕೊಂಡಿದ್ದಾರೆ.

ಆರೋಪಿ ಸಂತೆಕಟ್ಟೆಯಿಂದ ತೃಪ್ತಿ ನಗರಕ್ಕೆ ಬಾಡಿಗೆ ಮಾಡಿಕೊಂಡು ಬಂದಿದ್ದಾನೆ ಎಂದು ರಿಕ್ಷಾ ಚಾಲಕ ಶ್ಯಾಮ್ ಹೇಳಿದ್ದಾರೆ. ಆರೋಪಿ ಮನೆಯ ವಿಳಾಸವನ್ನು ಸರಿಯಾಗಿಯೇ ತಿಳಿಸಿದ್ದಾನೆ. ದಾರಿ ತಪ್ಪಿದಾಗ ಆರೋಪಿಯೇ ಮನೆಯ ಗುರುತು ಹೇಳಿದ್ದಾನೆ ಎಂದು ಹೇಳಿದ್ದಾರೆ.

ದೃಢಕಾಯದ 45ರ ಆಸುಪಾಸು ವಯಸ್ಸಿನ ವ್ಯಕ್ತಿಯಾಗಿದ್ದು, ಬ್ರೌನ್ ಕಲರ್ ಅಂಗಿ ಧರಿಸಿದ್ದನು. ಬಿಳಿ ಬಣ್ಣದ ಮಾಸ್ಕ್ ಹಾಕಿಕೊಂಡಿದ್ದನು. ಮನೆಯ ಬಿಟ್ಟು ಹೋಗಿ 15 ನಿಮಿಷಕ್ಕೆ ಮತ್ತೆ ಸಂತೆಕಟ್ಟೆ ಸ್ಟ್ಯಾಂಡ್ ಗೆ ಬಂದಿದ್ದಾನೆ. ಗಡಿಬಿಡಿಯಲ್ಲಿ ತನ್ನನ್ನು ಕರೆದುಕೊಂಡು ಹೋಗುವಂತೆ ರಿಕ್ಷಾ ಚಾಲಕರಿಗೆ ಕೇಳಿಕೊಂಡಿದ್ದಾನೆ.

ಆರೋಪಿ ಘಟನಾ ಸ್ಥಳದಿಂದ ದ್ವಿಚಕ್ರ ವಾಹನದಲ್ಲಿ ರಿಕ್ಷಾ ಸ್ಟಾಂಡ್ ತಲುಪಿದ್ದು. ಬೆಂಗಳೂರು ಕನ್ನಡ ಮಾತನಾಡುತ್ತಿದ್ದನು. ಮನೆಯವರ ಪರಿಚಯದವನಿಂದಲೇ ಕೃತ್ಯ ನಡೆದಿರುವ ಸಾಧ್ಯತೆ ಎಂದು ರಿಕ್ಷಾ ಚಾಲಕರಿಗೆ ಶ್ಯಾಮ್​ ಹೇಳಿದ್ದಾರೆ.

ಶಾಸಕ ಯಶ್ಪಾಲ್ ಸುವರ್ಣ ಭೇಟಿ

ಘಟನಾ ಸ್ಥಳಕ್ಕೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಭೇಟಿ ನೀಡಿ ಕುಟುಂಬಿಕರಿಂದ ಹಾಗೂ ಪೊಲೀಸರಿಂದ ಮಾಹಿತಿಯನ್ನು ಪಡೆದುಕೊಂಡರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಈ ಕೃತ್ಯ ಬಹಳ ಬೇಸರ ತರಿಸುವಂತದ್ದಾಗಿದ್ದು ದೀಪಾವಳಿ ಈ ಸಂದರ್ಭದಲ್ಲಿ ಘಟನೆ ಎಲ್ಲರನ್ನ ದುಃಖಕ್ಕೆ ತಳ್ಳಿದೆ. ಘಟನೆಯ ಬಗ್ಗೆ ಪೊಲೀಸರ ಜೊತೆ ಮಾತನಾಡಿದ್ದು ಕೌಟುಂಬಿಕ ವಿಚಾರ ಹಿನ್ನೆಲೆಯಲ್ಲಿ ಕೃತ್ಯ ಆಗಿರಬಹುದು ಎಂದು ಅನ್ನಿಸುತ್ತಿದೆ. ಉಡುಪಿ ಎಸ್ಪಿ ಡಾ. ಅರುಣ್ ಈಗಾಗಲೇ ತಂಡವನ್ನು ರಚನೆ ಮಾಡಿದ್ದು ಆರೋಪಿಯನ್ನ ಪತ್ತೆಹಚ್ಚಲು ಈಗಾಗಲೇ ಪೊಲೀಸರು ಬೆನ್ನುಬಿದ್ದಿದ್ದಾರೆ, ಇದು ಕುಟುಂಬದ ಹಿನ್ನೆಲೆಯ ಜಗಳ ಎಂದು ಅನಿಸುತ್ತಿದ್ದು, ಮಂಗಳೂರಿನಲ್ಲಿ ಕೆಲಸಕ್ಕೆ ಇದ್ದ ಮಕ್ಕಳು ಇಲ್ಲಿಗೆ ಬಂದಿದ್ದಾರೆ. ಇದರ ಬಗ್ಗೆ ಮತ್ತು ಕುಟುಂಬದ ಬಗ್ಗೆ ಮಾಹಿತಿ ಇದ್ದೇ ಈ ಕೃತ್ಯ ಎಸಗಿರುವ ಬಗ್ಗೆ ಶಂಕೆ ಇದೆ ಎಂದರು.

ಇದನ್ನೂ ಓದಿ: ಮಲ್ಪೆ: ಒಂದೇ ಕುಟುಂಬದ ನಾಲ್ವರ ಬರ್ಬರ ಕೊಲೆ

ಕೊಲೆಯಾದ ತಾಯಿ ಹಸೀನಾ ಗೃಹಿಣಿಯಾಗಿದ್ದು ಅವರ ಪತಿ ನೂರ್ ಮಹಮ್ಮದ್ ಸೌದಿಯಲ್ಲಿ ಉದ್ಯೋಗದಲ್ಲಿದ್ದಾರೆ. ಮಕ್ಕಳಾದ ಅಫ್ನಾನ್ ಏರ್ ಇಂಡಿಯಾ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ಅಯ್ನಾಸ್  ಲಾಜಿಸ್ಟಿಕ್ಸ್ ಸಂಸ್ಥೆಯಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದರೆ, ಆಸಿಂ ಉಡುಪಿಯಲ್ಲಿ 8 ನೇ ತರಗತಿ ಒದುತ್ತಿದ್ದರು. ಇನ್ನೊರ್ವ ಮಗ ಇಂಡಿಗೋ ಸಂಸ್ಥೆಯಲ್ಲಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಶೌಚಾಲಯದಲ್ಲಿ ಅವಿತು ಜೀವ ಉಳಿಸಿಕೊಂಡ ವೃದ್ಧೆ

ಚೂರಿ ಇರಿತಕ್ಕೊಳಗಾದ ಹಾಜಿರಾ (70) ಹಂತಕನಿಂದ ತಪ್ಪಿಸಿಕೊಂಡು ಮನೆಯ ಶೌಚಾಲಯದೊಳಗೆ ಹೋಗಿ ಬಾಗಿಲು ಹಾಕಿಕೊಂಡು ಜೀವ ಉಳಿಸಿಕೊಂಡಿದ್ದಾರೆ. ಘಟನೆಯಿಂದ ತೀವ್ರ ಆಘಾತಕ್ಕೊಳಗಾಗಿದ್ದ ವೃದ್ಧೆ ಪೊಲೀಸರು ಬಂದು ಬಾಗಿಲು ಬಡಿದರೂ ತೆಗೆದಿರಲಿಲ್ಲ. ಬಳಿಕ ಬಾಗಿಲನ್ನು ದೂಡಿ ಗಂಭೀರ ಸ್ಥಿತಿಯಲ್ಲಿದ್ದ ವೃದ್ಧೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ಬಾಲಕ ಅಸೀಮ್ ಬೆಳಿಗ್ಗೆ ಸ್ನೇಹಿತರ ಜತೆ ಆಟವಾಡಿ ಉಪಾಹಾರ ಸೇವಿಸಲು ಮನೆಗೆ ಬಂದಿದ್ದ. ಅಂಗಳದಲ್ಲಿ ಆಟವಾಡುತ್ತಿದ್ದಾಗ ತಾಯಿ ಹಾಗೂ ಅಕ್ಕಂದಿರ ಚೀರಾಟ ಕೇಳಿ ಮನೆಯೊಳಗೆ ಹೋಗಿದ್ದಾನೆ. ಈ ವೇಳೆ ಬಾಲಕನನ್ನೂ ಬರ್ಬರವಾಗಿ ಕೊಲೆ ಮಾಡಲಾಗಿದೆ.

ಮನೆಯ ಅಂಗಳದಲ್ಲಿ ಅನಾಥವಾಗಿ ಬಿದ್ದ ಅಸೀಮ್‌ ಬಳಸುತ್ತಿದ್ದ ಸೈಕಲ್‌

ಮೃತ ಬಾಲಕ ಅಸೀಮ್‌ ಬಳಸುತ್ತಿದ್ದ ಸೈಕಲ್‌ ಮನೆಯ ಅಂಗಳದಲ್ಲಿ ಅನಾಥವಾಗಿ ಬಿದ್ದಿರುವುದನ್ನು ಕಂಡ ಸ್ಥಳೀಯರು ಮಮ್ಮಲ ಮರುಗಿದರು. ಸೈಕಲ್ ತುಳಿಯುತ್ತಿದ್ದ ಮುಗ್ಧ ಬಾಲಕನನ್ನೂ ಬಿಡದೆ ಹತ್ಯೆ ಮಾಡಿದ ಕೊಲೆಗಾರನಿಗೆ ತಕ್ಕ ಶಿಕ್ಷೆಯಾಗುವಂತೆ ಶಪಿಸುತ್ತಿದ್ದ ದೃಶ್ಯ ಕಂಡುಬಂತು. ಪ್ರಕರಣದಲ್ಲಿ ಪ್ರಮುಖ ಸಾಕ್ಷ್ಯವಾಗಿ ಪರಿಗಣಿಸಿದ್ದರಿಂದ ಅಂಗಳದಲ್ಲಿ ಬಿದ್ದಿದ್ದ ಸೈಕಲ್‌ ಅನ್ನು ಪೊಲೀಸರು ತೆರವುಗೊಳಿಸಿರಲಿಲ್ಲ.

ತನಿಖೆಗಾಗಿ ಐದು ತಂಡಗಳ ರಚನೆ
ನೇಜಾರಿನ ತೃಪ್ತಿ ನಗರದಲ್ಲಿ ನಡೆದ ತಾಯಿ ಮತ್ತು ಮೂವರು ಮಕ್ಕಳ ಕೊಲೆ ಪ್ರಕರಣದ ತನಿಖೆಗಾಗಿ ಎಸ್ಪಿ ಡಾ. ಅವರು ಐದು ತಂಡಗಳನ್ನು ರಚಿಸಿದ್ದು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಕೌಟುಂಬಿಕ ಕಾರಣ ,ಪೂರ್ವದ್ವೇಷ ಅಥವಾ ವ್ಯವಹಾರ ಮತ್ತಿತರ ಆಯಾಮಗಳಲ್ಲಿ ತನಿಖೆ ನಡೆಯುತ್ತಿದ್ದು ಕೊಲೆಯಾದ ಕುಟುಂಬದ ಸದಸ್ಯರು ಕೆಲಸ ಮಾಡುತ್ತಿರುವ ಕಡೆ ಮಾಹಿತಿ ಸಂಗ್ರಹ ಕಾರ್ಯ ನಡೆದಿದೆ. ಸಂತೆಕಟ್ಟೆ ,ಕರಾವಳಿ ಜಂಕ್ಷನ್ ಗಳ ಸಿಸಿಟಿವಿ ಫೂಟೇಜ್ ಗಳನ್ನು ಪೊಲೀಸರು ಕಲೆ ಹಾಕಿದ್ದು ಆರೋಪಿಯನ್ನು ಮನೆಗೆ ಬಿಟ್ಟುಬಂದ ಆಟೋ ಚಾಲಕನಿಂದಲೂ ಮಾಹಿತಿ ಸಂಗ್ರಹ ಮಾಡಿದ್ದು ಶೀಘ್ರ ಆರೋಪಿಯನ್ನು ಪತ್ತೆಹಚ್ಚುವ ವಿಶ್ವಾಸವನ್ನು ಎಸ್ಪಿ ವ್ಯಕ್ತಪಡಿಸಿದ್ದಾರೆ.

ಪೋಲಿಸರ ಮಹಜರು ಪ್ರಕ್ರಿಯೆ ಮುಗಿಸಿದ ಬಳಿಕ ನಾಲ್ಕು ಮೃತದೇಹಗಳನ್ನು ನಾಲ್ಕು ಅಂಬುಲೆನ್ಸ್ ಗಳ ಮೂಲಕ ಮಣಿಪಾಲದ ಕೆ ಎಂ ಸಿ ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಯಿತು. ಸಂಜೆ ವೇಳೆಗೆ ಬೆಂಗಳೂರಿನಲ್ಲಿ ಇಂಡಿಗೋ ಏರ್ ಲೈನ್ಸ್ ನಲ್ಲಿ ಉದ್ಯೋಗಿಯಾಗಿರುವ ಪುತ್ರ ಆಸಾದ್ ಮಣಿಪಾಲಕ್ಕೆ ಆಗಮಿಸಿದರು.


Spread the love