ರೆಸಾರ್ಟ್ ನೊಳಗೆ ಗ್ಯಾಸ್ ಲೀಕ್; ನೇಪಾಳಕ್ಕೆ ಪ್ರವಾಸಕ್ಕೆ ತೆರಳಿದ್ದ 8ಮಂದಿ ಭಾರತೀಯರು ಸಾವು

Spread the love

ರೆಸಾರ್ಟ್ ನೊಳಗೆ ಗ್ಯಾಸ್ ಲೀಕ್; ನೇಪಾಳಕ್ಕೆ ಪ್ರವಾಸಕ್ಕೆ ತೆರಳಿದ್ದ 8ಮಂದಿ ಭಾರತೀಯರು ಸಾವು

ಕಾಠ್ಮಂಡು: ರೆಸಾರ್ಟ್ ವೊಂದರ ಕೋಣೆಯೊಳಗೆ ಗ್ಯಾಸ್ ಲೀಕ್ ಆಗಿ ನಾಲ್ವರು ಮಕ್ಕಳು ಸೇರಿದಂತೆ ಎಂಟು ಮಂದಿ ಭಾರತೀಯ ಪ್ರವಾಸಿಗರು ಸಾವನ್ನಪ್ಪಿರುವ ಘಟನೆ ನೇಪಾಳದಲ್ಲಿ ಸಂಭವಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ರೆಸಾರ್ಟ್ ಕೋಣೆಯಲ್ಲಿ ಪ್ರಜ್ಞಾ ಹೀನರಾಗಿ ಬಿದ್ದಿದ್ದ ಎಂಟು ಮಂದಿಯನ್ನು ಏರ್ ಲಿಫ್ಟ್ ಮೂಲಕ ಎಚ್ ಎಎಮ್ ಎಸ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅವರೆಲ್ಲಾ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ಸುಶೀಲ್ ಸಿಂಗ್ ತಿಳಿಸಿದ್ದಾರೆ.

ಸಾವನ್ನಪ್ಪಿದ ಪ್ರವಾಸಿಗರನ್ನು ಪ್ರವೀಣ್ ಕುಮಾರ್ ನಾಯರ್ (39ವರ್ಷ), ಶರಣ್ಯಾ (34), ರಂಜಿತ್ ಕುಮಾರ್ ಟಿಬಿ (39), ಇಂದು ರಂಜಿತ್ (34), ಶ್ರೀ ಭದ್ರಾ (9ವರ್ಷ), ಅಭಿನವ್ ಸೂರ್ಯ(9), ಅಭಿ ನಾಯರ್ (7) ಮತ್ತು ವೈಷ್ಣವ್ ರಂಜಿತ್ (2) ಎಂದು ಗುರುತಿಸಲಾಗಿದೆ ಎಂದು ಕಾಠ್ಮಂಡು ಪೋಸ್ಟ್ ವರದಿ ಮಾಡಿದೆ.

15 ಜನರ ತಂಡ ಕೇರಳದಿಂದ ಪೋಖ್ರಾಗೆ ಪ್ರವಾಸ ತೆರಳಿತ್ತು. ನೇಪಾಳದಲ್ಲಿ ಪ್ರವಾಸ ಕೈಗೊಂಡ ನಂತರ ಊರಿಗೆ ವಾಪಸ್ ಆಗುವ ಮುನ್ನ ಸೋಮವಾರ ರಾತ್ರಿ ಮಕ್ವಾನ್ ಪುರ್ ಜಿಲ್ಲೆಯ ದಮನ್ ನಲ್ಲಿರುವ ಎವರೆಸ್ಟ್ ಪನೋರಮಾ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದರು ಎಂದು ಹಿಮಾಲಯನ್ ಟೈಮ್ಸ್ ವರದಿ ಮಾಡಿದೆ.

ರೆಸಾರ್ಟ್ ಮ್ಯಾನೇಜರ್ ಹೇಳಿಕೆ ಪ್ರಕಾರ, ಅಥಿತಿಗಳು ರೂಂನಲ್ಲಿದ್ದು, ವಿಪರೀತ ಚಳಿಯ ಹಿನ್ನೆಲೆಯಲ್ಲಿ ಬೆಚ್ಚಗಾಗಿಡಲು ಗ್ಯಾಸ್ ಹೀಟರ್ ಅನ್ನು ಆನ್ ಮಾಡಿ ಇಟ್ಟಿರುವುದಾಗಿ ತಿಳಿಸಿದ್ದಾರೆ. ಇವರೆಲ್ಲಾ ಒಟ್ಟು ನಾಲ್ಕು ರೂಂಗಳನ್ನು ಬುಕ್ ಮಾಡಿದ್ದರು. ಎಂಟು ಮಂದಿ ಒಂದು ಕೋಣೆಯಲ್ಲಿ ವಾಸ್ತವ್ಯ ಹೂಡಿದ್ದರು. ಉಳಿದವರು ಬೇರೆ ರೂಂಗಳಲ್ಲಿ ಮಲಗಿದ್ದರು ಎಂದು ವಿವರಿಸಿದ್ದಾರೆ.

ಎಲ್ಲರೂ ಕೋಣೆಯ ಕಿಟಕಿ, ಬಾಗಿಲುಗಳಿಗೆ ಒಳಗಿನಿಂದ ಬೋಲ್ಟ್ ಹಾಕಿಕೊಂಡಿದ್ದರು. ಬಿಸಿ ಗಾಳಿಗೆ ಉಸಿರುಗಟ್ಟಿ ಎಂಟು ಮಂದಿ ಸಾವನ್ನಪ್ಪಿರಬಹುದು ಎಂದು ಪೊಲೀಸರು ಶಂಕಿಸಿರುವುದಾಗಿ ವರದಿ ತಿಳಿಸಿದೆ.

ಮೃತಪಟ್ಟವರೆಲ್ಲಾ ಕೇರಳ ಮೂಲದವರು ಎಂದು ವರದಿ ತಿಳಿಸಿದೆ. ನೇಪಾಳ ರೆಸಾರ್ಟ್ ನಲ್ಲಿ ಸಾವನ್ನಪ್ಪಿರುವ ಎಂಟು ಮಂದಿ ಕೇರಳ ಪ್ರವಾಸಿಗರ ಮೃತದೇಹವನ್ನು ರಾಜ್ಯಕ್ಕೆ ತರಲು ಎಲ್ಲಾ ರೀತಿಯ ನೆರವು ನೀಡುವುದಾಗಿ ಕೇರಳ ಸರ್ಕಾರ ತಿಳಿಸಿದೆ ಎಂದು ವರದಿ ಹೇಳಿದೆ.


Spread the love