ರೈತರ ಸಾಲ ಮರುಪಾವತಿ – ಅವಧಿ ವಿಸ್ತರಣೆಗೆ  ಮನವಿ ಸಲ್ಲಿಸಿ: ಎ.ಬಿ.ಇಬ್ರಾಹಿಂ

Spread the love

ಮಂಗಳೂರು:  ಸಹಕಾರ ಸಂಘಗಳು, ಸಹಕಾರ ಬ್ಯಾಂಕುಗಳು ವಾಣಿಜ್ಯ ಬ್ಯಾಂಕುಗಳಲ್ಲಿ ರೈತರು ಪಡೆದ ಸಾಲ ಮರುಪಾವತಿ ಅವಧಿ ಮುಗಿದಿದ್ದರೆ ಅಂತಹ ರೈತರು ತಮ್ಮ ಸಾಲದ ಅವಧಿಯನ್ನು ವಿಸ್ತರಿಸುವಂತೆ/ಸಾಲ ಮರುಹೊಂದಾಣಿಕೆ ಮಾಡಿಕೊಳ್ಳಲು  ಸಂಬಂಧಿಸಿದ ಬ್ಯಾಂಕುಗಳಿಗೆ /ಸಹಕಾರ ಸಂಘಗಳಿಗೆ ಕೋರಿಕೆ ಪತ್ರಗಳನ್ನು ಸಲ್ಲಿಸಿದಲ್ಲಿ ಸಂಬಂಧಿಸಿದ ಹಣಕಾಸು ಸಂಸ್ಥೆಗಳು ಸಾಲಮರುಪಾವತಿಗೆ ರೈತರಿಗೆ ನೋಟೀಸ್‍ಗಳನ್ನು ನೀಡದಂತೆ ಬಲವಂತದ ಸಾಲ ವಸೂಲಿಗೆ ಮುಂದಾಗದಂತೆ ತಡೆಯಬಹುದೆಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ರೈತರಿಗೆ ತಿಳಿಸಿದ್ದಾರೆ.  ಅವರು ಇಂದು ತಮ್ಮ ಕಚೇರಿಯಲ್ಲಿ ರೈತ ಮುಖಂಡರೊಂದಿಗೆ ರೈತರ ಸಮಸ್ಯೆಗಳ ಕುರಿತು ಚರ್ಚಿಸಿದರು.

ಸಭೆಯಲ್ಲಿ ಹಾಜರಿದ್ದ ರೈತ ಮುಖಂಡರು ಹಣಕಾಸು ಸಂಸ್ಥೆಗಳು ಸಾಲ ಪಡೆಯುವಾಗ ಬಲವಂತದಿಂದ ಬಿಳಿಹಾಳೆಗೆ ಸಹಿ ಪಡೆಯುತ್ತಿರುವ ಹಾಗೂ ಖಾಲಿ ಚೆಕ್‍ಗಳನ್ನು ಬಲವಂತವಾಗಿ ಪಡೆಯುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗಳ ಗಮನ ಸೆಳೆದಾಗ ಸಭೆಯಲ್ಲಿ ಹಾಜರಿದ್ದ ಸಹಕಾರ ಸಂಘಗಳ ಉಪನಿಬಂಧಕರಾದ ಬಿ.ಕೆ.ಸಲೀಂ ಮಧ್ಯ ಪ್ರವೇಶಿಸಿ, ರೈತರು ಸಹಕಾರ ಸಂಘಗಳಾಗಲೀ ಅಥವಾ ಇನ್ನಿತರ ವಾಣಿಜ್ಯ ಬ್ಯಾಂಕುಗಳಲ್ಲಿ ಕೃಷಿ ಸಾಲ ಪಡೆಯಲು ಖಾಲಿ ಚೆಕ್ ಯಾ ಬಿಳಿಹಾಳೆಗೆ ಸಹಿ ಹಾಕಿ ಕೊಡುವ ಅವಶ್ಯಕತೆ ಇಲ.್ಲ ಒಂದು ವೇಳೆ ಯಾರಾದರೂ ಈ ರೀತಿ ಮಾಡಿದ್ದಲ್ಲಿ  ಅಂತಹವರ ವಿವರಗಳನ್ನು ದಾಖಲೆ ಸಮೇತ ತಮಗೆ ದೂರು ನೀಡಿದಲ್ಲಿ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದರು.

 ಅಧಿಕ ಬಡ್ಡಿ, ಪರವಾನಿಗೆ ಇಲ್ಲದೆ ಲೇವಾದೇವಿ ವ್ಯವಹಾರ ನಡೆಸುತ್ತಿರುವವರ ಬಗ್ಗೆ ಮಾಹಿತಿ ನೀಡಿದಲ್ಲಿ ಮಾಹಿತಿದಾರರ ಗೌಪ್ಯತೆಯನ್ನು ಕಾಪಾಡಿ ಲೇವಾದೇವಿದಾರರ ವಿರುದ್ಧ ಕ್ರಮ ವಹಿಸಲಾಗುವುದು. ಇಂತಹ ಹೆಚ್ಚು ಪ್ರಕರಣಗಳನ್ನು ಪುತ್ತೂರು ತಾಲೂಕಿನಲ್ಲಿ ಪತ್ತೆ ಹಚ್ಚಿ ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೋಲೀಸ್ ವರಿಷ್ಠಾಧಿಕಾರಿ ವಿ ಶಾಂತಕುಮಾರ್ ತಿಳಿಸಿದರು.

ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ ಅಡಿಕೆ ಕೊಳೆರೋಗಕ್ಕೆ ರೈತರಿಗೆ ರೂ. 30ಕೋಟಿಗೂ ಅಧಿಕ ಪರಿಹಾರವನ್ನು ಸರ್ಕಾರದ ವತಿಯಿಂದ ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಆಗಲವಾಡಿ ಪ್ರಭು, ಜಂಟಿ ಕೃಷಿ ನಿರ್ದೇಶಕ ಕೆಂಪೇಗೌಡ, ತೋಟಗಾರಿಕೆ ಉಪನಿರ್ದೇಶಕ ಯೋಗೀಶ್ ಮುಂತಾದವರು ಉಪಸ್ಥಿತರಿದ್ದರು.


Spread the love