ಲಂಚ ಸ್ವೀಕಾರ, ಮೂವರೂ ಆರೋಪಿಗಳ ಜಾಮೀನು ಅರ್ಜಿ ವಜಾ 

Spread the love

ಲಂಚ ಸ್ವೀಕಾರ, ಮೂವರೂ ಆರೋಪಿಗಳ ಜಾಮೀನು ಅರ್ಜಿ ವಜಾ 

ಮಂಗಳೂರು: ಲಂಚ ಸ್ವೀಕಾರ ಸಂದರ್ಭ ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿದ್ದ ಕೆಐಎಡಿಬಿ ವಿಶೇಷ ಭೂಸ್ವಾಧೀನ ಅಧಿಕಾರಿ ದಾಸೇಗೌಡ, ಮ್ಯಾನೇಜರ್ ಚಂದ್ರಶೇಖರ್ ಮತ್ತು ಮಧ್ಯವರ್ತಿ ದೀಪಕ್ ಪೆರ್ಮುದೆ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ.

ಪ್ರಸ್ತುತ ಗೋವಾ ನಿವಾಸಿ ಮೇರಿ ಜಾರ್ಜ್ ಅವರಿಂದ ಅವರ ತಾಯಿಯ ಭೂಸ್ವಾಧೀನದಿಂದ ಬರಬೇಕಿದ್ದ ಪರಿಹಾರದ ಮೊತ್ತದಲ್ಲಿ ದಾಸೇಗೌಡ ಹಾಗೂ ಚಂದ್ರಶೇಖರ್ ಶೇ.3ರಷ್ಟು ಕಮಿಷನ್ ಹಣಕ್ಕೆ ಬೇಡಿಕೆ ಇಟ್ಟು, ಈ ಹಣವನ್ನು ಮಧ್ಯವರ್ತಿ ದೀಪಕ್ ಪೆರ್ಮುದೆ ಮುಖಾಂತರ ಚೆಕ್ ನಲ್ಲಿ ಸ್ವೀಕರಿಸಿದ್ದ. ಈ ಬಗ್ಗೆ ದೂರು ದಾಖಲಿಸಿಕೊಂಡು ಮಂಗಳೂರಿನ ಭ್ರಷ್ಟಾಚಾರ ನಿಗ್ರಹದಳದ ಡಿವೈಎಸ್ಪಿ ಭರತೇಶ್ ರೆಡ್ಡಿ ಮತ್ತು ಇನ್‌ಸ್ಪೆಕ್ಟರ್ ಯೋಗೀಶ್ ಕುಮಾರ್ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದರು. ಆರೋಪಿಗಳ ಕಚೇರಿಯಲ್ಲಿ ಲೆಕ್ಕಾಚಾರವಿಲ್ಲದ ದೊಡ್ಡ ಮೊತ್ತವನ್ನು ವಶಪಡಿಸಿಕೊಂಡಿದ್ದರು.

ಆರೋಪಿಗಳು ಮಂಗಳೂರಿನ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದು, ಮೂವರು ಮಂಗಳೂರಿನ ಮೂರನೇ ಸೆಷೆನ್ಸ್ ನ್ಯಾಯಾಲಯದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.

ಭ್ರಷ್ಟಾಚಾರ ನಿಗ್ರಹದಳದ ಪರ ವಕೀಲ, ವಿಶೇಷ ಸರಕಾರಿ ಅಭಿಯೋಜಕ ಕೆ.ಎಸ್.ಎನ್. ರಾಜೇಶ್ ಆರೋಪಿಗಳ ಜಾಮೀನು ಅರ್ಜಿಗೆ ಪ್ರಬಲ ಆಕ್ಷೇಪ ವ್ಯಕ್ತಪಡಿಸಿದ್ದರು. ವಾದ ಪ್ರತಿವಾದ ಆಲಿಸಿದ್ದ ನ್ಯಾಯಾಧೀಶರಾದ ಮುರಳೀಧರ ಪೈಯವರು ಮೂವರೂ ಆರೋಪಿಗಳ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದ್ದಾರೆ.


Spread the love