ವಿಟ್ಲ: ಫೇಸ್‌ಬುಕ್‌ನಲ್ಲಿ ಅಶ್ಲೀಲ ಬರಹ ಶೇರ್ ಮಾಡಿದ ವ್ಯಕ್ತಿ ಪೊಲೀಸರ ವಶಕ್ಕೆ

Spread the love

ವಿಟ್ಲ: ಬಾಲಕಿಯ ಫೋಟೋ ಬಳಸಿಕೊಂಡು ಫೇಸ್‌ಬುಕ್‌ನಲ್ಲಿ ಅಶ್ಲೀಲವಾಗಿ ಬರೆದಿರುವುದನ್ನು ಶೇರ್ ಮಾಡಿದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ಎಚ್ಚರಿಕೆ ನೀಡಿ ಬಿಡುಗಡೆಗೊಳಿಸಿದ್ದಾರೆ.

ಬೆಂಗಳೂರಿನ ಬಾಲಕೃಷ್ಣರಾಜ್ ನೀರ್ಚಾಲ್ ಎಂಬಾತ ಮಾಣಿ ಪೆರಾಜೆ ಸಮೀಪ ಮದುವೆಗೆಂದು ಆಗಮಿಸಿರುವ ಮಾಹಿತಿ ಪಡೆದ ಪೊಲೀಸರು ಆತನನ್ನು ವಶಕ್ಕೆ ಪಡೆದರು. ಆತನಿಂದ ಮುಚ್ಚಳಿಕೆ ಬರೆಸಿಕೊಂಡು ಅಗತ್ಯ ಬಿದ್ದಾಗ ಠಾಣೆಗೆ ಹಾಜರಾಗಿ, ತನಿಖೆಗೆ ಸಹಕರಿಸಬೇಕೆಂದು ಆದೇಶಿಸಿ ಬಿಡುಗಡೆ ಮಾಡಿದರು.

ನೈಜೀರಿಯಾದಲ್ಲಿರುವ ಶಾಂತಾರಾಮ ಹೆಗಡೇಕಟ್ಟೆ ಎಂಬ ವ್ಯಕ್ತಿ ಫೇಸ್‌ಬುಕ್‌ನಲ್ಲಿ ಬಾಲಕಿಯರ, ಮಹಿಳೆಯರ ಫೇಸ್‌ಬುಕ್ ಅಕೌಂಟ್‌ನಿಂದ ಫೋಟೋಗಳನ್ನು ಕದ್ದು ಅವುಗಳನ್ನು ಸತ್ಯಶೋಧ ಮಿತ್ರ ಮಂಡಳಿ ಎಂಬ ಗ್ರೂಪ್‌ನಲ್ಲಿ ಹಾಕಿ, ಅನವಶ್ಯಕ ಕಮೆಂಟ್‌ಗಳನ್ನು ಮಾಡುತ್ತಿದ್ದ. ಆ ಫೋಟೋಗಳ ಮೇಲೆ ಅಶ್ಲೀಲವಾಗಿ ಬರೆಯುತ್ತ ಮಾನಹಾನಿ ಮಾಡುತ್ತ ಕಾಲಹರಣ ಮಾಡುತ್ತಿದ್ದ. ಈತನ ಬರಹಗಳನ್ನು ಬೆಂಗಳೂರಿನ ಬಾಲಕೃಷ್ಣರಾಜ್ ನೀರ್ಚಾಲ್ ಶೇರ್ ಮಾಡುತ್ತ ತಾನೂ ಅದಕ್ಕೆ ವ್ಯಂಗ್ಯವಾದ ಕಮೆಂಟ್‌ಗಳನ್ನು ಸೇರಿಸುತ್ತಿದ್ದ. ವಿಟ್ಲದ ಬಾಲಕಿಯ ಚಿತ್ರವನ್ನೂ ಇದೇ ರೀತಿ ಬಳಸಿ, ಕಮೆಂಟ್ ಮಾಡಿರುವುದರ ವಿರುದ್ಧ ಆಕೆಯ ತಂದೆ ದಾಖಲೆಗಳನ್ನು ಒದಗಿಸಿ ಏ. 13ರಂದು ವಿಟ್ಲ ಠಾಣೆಗೆ ದೂರು ನೀಡಿದ್ದರು.

ಬಂಟ್ವಾಳ ವೃತ್ತ ನಿರೀಕ್ಷಕ ಬೆಳ್ಳಿಯಪ್ಪ ಅವರ ಮಾರ್ಗದರ್ಶನದಲ್ಲಿ ವಿಟ್ಲ ಠಾಣಾಧಿಕಾರಿ ಪ್ರಕಾಶ್ ದೇವಾಡಿಗ ಮತ್ತು ಪೊಲೀಸರಾದ ರಕ್ಷಿತ್, ಚಿದಾನಂದ್ ಅವರು ಬೆಂಗಳೂರಿಗೆ ತೆರಳಿ ಬಾಲಕೃಷ್ಣರಾಜ್‌ನನ್ನು ಪತ್ತೆ ಹಚ್ಚಲು ಪ್ರಯತ್ನಿಸಿದ್ದರು. ಆತನ ಕಚೇರಿಗೆ ಹೋಗಿದ್ದರೂ ಆತ ತಪ್ಪಿಸಿಕೊಂಡಿದ್ದ. ಆತನನ್ನು ಬಂಧಿಸುವುದಕ್ಕಾಗಿ ವಿಟ್ಲ ಪೊಲೀಸರು ಮತ್ತೆ ಬೆಂಗಳೂರಿನ ಪಯಣಕ್ಕೆ ಸಿದ್ಧರಾಗಿದ್ದರು.

ಈ ನಡುವೆ ಮೇ 5ರಂದು ಈತ ತನ್ನ ಸಂಬಂಧಿಯ ಮದುವೆಗೆಂದು ಮಾಣಿ ಪೆರಾಜೆಯ ಸಭಾಭವನಕ್ಕೆ ಆಗಮಿಸಿದ್ದ. ಖಚಿತ ಮಾಹಿತಿ ಪಡೆದ ಠಾಣಾಧಿಕಾರಿ ಪ್ರಕಾಶ್, ಪೊಲೀಸರಾದ ರಕ್ಷಿತ್, ಭವಿತ್ ರೈ ಅವರು ರಾತ್ರಿ 12 ಗಂಟೆಗೆ ದಾಳಿ ಮಾಡಿ, ಆತನನ್ನು ವಶಕ್ಕೆ ತೆಗೆದುಕೊಂಡರು. ವಿಟ್ಲ ಠಾಣೆಗೆ ಕರೆತಂದರು. ಆತ ತನ್ನ ತಪ್ಪನ್ನು ಒಪ್ಪಿಕೊಂಡು ಮದುವೆಗೆ ತೆರಳಲು ಬಿಟ್ಟುಬಿಡಿ ಎಂದು ಅಂಗಲಾಚಿಕೊಂಡ ಬಳಿಕ ಷರತ್ತು ವಿಧಿಸಿ ಬಿಡುಗಡೆಗೊಳಿಸಲಾಯಿತು.


Spread the love