ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನದಲ್ಲಿ ಭಾಗವಹಿಸಲು ಅಮೆರಿಕಕ್ಕೆ ತೆರಳಿದ ಕ್ಯಾ. ಬ್ರಿಜೇಶ್‌ ಚೌಟ

Spread the love

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನದಲ್ಲಿ ಭಾಗವಹಿಸಲು ಅಮೆರಿಕಕ್ಕೆ ತೆರಳಿದ ಕ್ಯಾ. ಬ್ರಿಜೇಶ್‌ ಚೌಟ

  • ನ್ಯೂಯಾರ್ಕ್‌ಗೆ ಭೇಟಿ ನೀಡಿರುವ ಭಾರತದ 15 ಮಂದಿಯ ಸರ್ವಪಕ್ಷ ನಿಯೋಗದಲ್ಲಿ ಸ್ಥಾನ ಪಡೆದಿರುವ ದ.ಕ. ಸಂಸದರು

ಮಂಗಳೂರು: ದಕ್ಷಿಣ ಕನ್ನಡ‌ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ನ್ಯೂಯಾರ್ಕ್‌ನಲ್ಲಿ ನಡೆಯುತ್ತಿರುವ 80ನೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ(UNGA) ಅಧಿವೇಶನದಲ್ಲಿ ಭಾಗವಹಿಸಲು ಬಿಜೆಪಿ ಸಂಸದ ಪಿಪಿ ಚೌಧರಿ ನೇತೃತ್ವದ ನಿಯೋಗದ ಜತೆ ಅಮೆರಿಕ ದೇಶಕ್ಕೆ ತೆರಳಿದ್ದಾರೆ ಎಂದು ಸಂಸದರ ಕಚೇರಿ ಪ್ರಕಟಣೆ ತಿಳಿಸಿದೆ.

ಭಾರತದಿಂದ ವಿವಿಧ ಪಕ್ಷಗಳ ಸಂಸದರನ್ನು ಒಳಗೊಂಡಿರುವ ಎರಡು ನಿಯೋಗವು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಈ ಅಧಿವೇಶನದಲ್ಲಿ ಭಾಗವಹಿಸಲಿದೆ. ಆ ಪೈಕಿ ಪಿಪಿ ಚೌಧರಿ ನೇತೃತ್ವದ ಮೊದಲ ನಿಯೋಗವು ಅ.8ರಿಂದ 14ರವರೆಗೆ ನಡೆಯುವ ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದು, ಈ ತಂಡದಲ್ಲಿ ಕರ್ನಾಟಕದಿಂದ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಸ್ಥಾನ ಪಡೆದಿದ್ದಾರೆ. ಇವರೊಂದಿಗೆ ಸಂಸದರಾಗಿರುವ ಅನಿಲ್ ಬಲೂನಿ, ಡಾ. ನಿಶಿಕಾಂತ್ ದುಬೆ, ಉಜ್ವಲ್ ನಿಕಮ್, ಎಸ್ ಫಾಂಗ್ನಾನ್ ಕೊನ್ಯಾಕ್, ಡಾ. ಮೇಧಾ ವಿಶ್ರಮ್ ಕುಲಕರ್ಣಿ, ಪೂನಂ ಬೆನ್ ಮಾದಮ್, ವಂಶಿ ಕೃಷ್ಣ ಗದ್ದಾಮ್, ವಿವೇಕ್ ತಂಖಾ, ಡಾ. ಟಿ ಸುಮತಿ, ಎನ್.ಕೆ. ಪ್ರೇಮಚಂದ್ರನ್, ಕುಮಾರಿ ಸೆಲ್ಜಾ, ಮಾತುಕುಮಿಲ್ಲಿ ಶ್ರೀಭರತ್ ಮತ್ತು ರಾಜೀವ್ ರೈ ಅವರು ನಿಯೋಗದಲ್ಲಿ ನ್ಯೂಯಾರ್ಕ್‌ಗೆ ತೆರಳಿದ್ದಾರೆ.

ಸುಮಾರು ಎರಡು ದಶಕಗಳ ಬಳಿಕ ಭಾರತದ ಸಂಸದೀಯ ರಾಜತಾಂತ್ರಿಕತೆಯನ್ನು ಪುನರುಜ್ಜೀವಗೊಳಿಸುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಶಯದಂತೆ ಈ ನಿಯೋಗವು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜತಾಂತ್ರಿಕ ಸಂಬಂಧಗಳನ್ನು ಉತ್ತಮಪಡಿಸುವುದು, ಜಾಗತಿಕ ಮಟ್ಟದ ಸಭೆಯಲ್ಲಿ ಭಾರತವನ್ನು ಅಧಿಕಾರಿಗಳ ಹೊರತಾಗಿ ಪ್ರತಿನಿಧಿಸುವುದು, ವಿಶ್ವಸಂಸ್ಥೆಯಲ್ಲಿ ಸಂಸದೀಯ ಪ್ರಜಾಪ್ರಭುತ್ವ ದೇಶದ ಪ್ರತಿನಿಧಿಗಳಾಗಿ ಪ್ರಜಾತಂತ್ರದ ಮೌಲ್ಯಗಳನ್ನು ಪ್ರಚುರಪಡಿಸುವುದು ಈ ನಿಯೋಗದ ಉದ್ದೇಶವಾಗಿದೆ. 15 ಸಂಸದರ ಎರಡನೇ ನಿಯೋಗವು ಈ ತಿಂಗಳ ಕೊನೆಯಲ್ಲಿ ಬಿಜೆಪಿ ಸಂಸದೆ ಡಿ. ಪುರಂದೇಶ್ವರಿ ನೇತೃತ್ವದಲ್ಲಿ ನ್ಯೂಯಾರ್ಕ್ ಗೆ ಪ್ರಯಾಣಿಸಲಿದೆ.


Spread the love
Subscribe
Notify of

0 Comments
Inline Feedbacks
View all comments