ವಿಶ್ವ ಹೃದಯ ದಿನದ ಅಂಗವಾಗಿ ಕೆಎಂಸಿ ಮಂಗಳೂರು ವತಿಯಿಂದ ಮೊದಲ ಬಾರಿ ಫಿಟ್ ಹಾರ್ಟ್ ವರ್ಚುವಲ್ ಕಾರ್ಯಕ್ರಮ

Spread the love

ವಿಶ್ವ ಹೃದಯ ದಿನದ ಅಂಗವಾಗಿ ಕೆಎಂಸಿ ಮಂಗಳೂರು ವತಿಯಿಂದ ಮೊದಲ ಬಾರಿ ಫಿಟ್ ಹಾರ್ಟ್ ವರ್ಚುವಲ್ ಕಾರ್ಯಕ್ರಮ

ಮಂಗಳೂರು: ವಿಶ್ವ ಹೃದಯ ದಿನದ ಅಂಗವಾಗಿ ಮಂಗಳೂರಿನ ಕೆಎಂಸಿ ಹಾಸ್ಪಿಟಲ್, ಇಂದು ಮರೇನಾ ಸ್ಪೋಟ್ಸ್ ಕಾಂಪ್ಲೆಕ್ಸ್‍ನಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಫಿಟ್ ಹಾರ್ಟ್ ವರ್ಚುವಲ್ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕಲ್ಟ್ ಫಿಟ್ನೆಸ್ ಸಹಯೋಗದಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಝೂಮ್ ಮತ್ತು ಫೇಸ್‍ಬುಕ್ ಲೈವ್ ವೇದಿಕೆಗಳಲ್ಲಿ ನಡೆದ ಈ ವರ್ಚುವಲ್ ಕಾರ್ಯಕ್ರಮದಲ್ಲಿ 1000ಕ್ಕೂ ಅಧಿಕ ಮಂದಿ ಭಾಗವಹಿಸಿ ಕಾರ್ಯಕ್ರಮದ ಪ್ರಯೋಜನ ಪಡೆದರು.

ಕಾರ್ಯಕ್ರಮದ ಆರಂಭದಲ್ಲಿ ಮಾತನಾಡಿದ, ಇಂಟರ್‍ವೆನ್ಷನಲ್ ಕಾರ್ಡಿಯಲಾಜಿಸ್ಟ್ (ಹೃದಯ ತಜ್ಞ) ಡಾ. ನರಸಿಂಹ ಪೈ ಅವರು, ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಮಹತ್ವ ಹಾಗೂ ಪ್ರಸ್ತುತ ಸಂದರ್ಭದಲ್ಲಿ ಕ್ರೀಡಾಪಟುಗಳು ಹಾಗೂ ಯುವ ಜನತೆಯಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚಾಗುತ್ತಿರುವ ವಿಷಯದ ಮೇಲೆ ಬೆಳಕು ಚೆಲ್ಲಿದರಲ್ಲದೆ, ಎಲ್ಲರೂ ಎಚ್ಚರಿಕೆ ವಹಿಸುವಂತೆ ಮಾಹಿತಿ ನೀಡಿದರು. ನಂತರ ವ್ಯಾಯಾಮ ಹಾಗೂ ನೃತ್ಯ ಒಳಗೊಂಡಂತೆ 40 ನಿಮಿಷಗಳ ಫಿಟ್ನೆಸ್ ಸೆಷನ್ ನಡೆಯಿತು.

ಈ ವೇಳೆ ಮಾತನಾಡಿದ ಕಾರ್ಡಿಯಾಕ್ ಎಲೆಕ್ಟ್ರೋಫಿಸಿಯೋಲಜಿಸ್ಟ್ ಡಾ.ಮನೀಶ್ ರೈ ಅವರು, “30ರಿಂದ 40 ವರ್ಷ ವಯಸ್ಸಿನ ಜನರನ್ನೂ ಒಳಗೊಂಡಂತೆ ಎಲ್ಲ ವಯೋಮಾನದವರಲ್ಲಿ ಇಂದು ಹೃದಯ ಕಾಯಿಲೆಗಳು ವ್ಯಾಪಕವಾಗಿವೆ. ಧೂಮಪಾನ ಮತ್ತು ಮಧ್ಯಪಾನ ವ್ಯಸನ ಇದಕ್ಕೆ ಪ್ರಮುಖ ಕಾರಣವಾದರೆ, ಈ ಅಭ್ಯಾಸ ಉಳ್ಳವರನ್ನು ಹೊರತುಪಡಿಸಿ ಒತ್ತಡ, ವ್ಯಾಯಾಮದ ಕೊರತೆ ಮತ್ತು ಅನಾರೋಗ್ಯಕರ ಆಹಾರ ಸೇವನೆ ಅಭ್ಯಾಸಗಳು ಸಹ ಹೃದಯದ ವೈಫಲ್ಯಕ್ಕೆ ಪ್ರಮುಖ ಕಾರಣಗಳೆನಿಸಿವೆ. ಪಾಶ್ಚಿಮಾತ್ಯ ರಾಷ್ಟ್ರಗಳ ಜನರಿಗೆ ಹೋಲಿಕೆ ಮಾಡಿದಾಗ ಭಾರತೀಯರಲ್ಲಿ ಅತಿ ಸಣ್ಣ ವಯಸ್ಸಿನಲ್ಲಿಯೇ ಹೃದಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಹೀಗಾಗಿ ಚಿಕ್ಕ ವಯಸ್ಸಿನಲ್ಲಿಯೇ ಆರೋಗ್ಯಕರ ಜೀವನ ಶೈಲಿಯನ್ನು ರೂಢಿಸಿಕೊಳ್ಳುವಂತೆ ನಾನು ಸಲಹೆ ನೀಡುತ್ತೇನೆ. ದೇಹದಲ್ಲಿನ ಕೊಲೆಸ್ಟ್ರಾಲ್ (ಕೊಬ್ಬು) ಪ್ರಮಾಣವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವುದು ಮತ್ತು ಆಗಿಂದಾಗ್ಗೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಗುಣಮಟ್ಟದ ಜೀವನದ ಕೀಲಿಕೈಗಳಾಗಿವೆ. ಭಾರತದಲ್ಲಿ ಪ್ರಸ್ತುತ ಪ್ರತಿ ವರ್ಷ ಸರಿಸುಮಾರು 2 ಮಿಲಿಯನ್ ಹೃದಯಾಘಾತ ಪ್ರಕರಣಗಳು ಸಂಭವಿಸುತ್ತಿದ್ದು, ಈ ಪೈಕಿ ಹೆಚ್ಚಿನವರು ಯುವಕರಾಗಿದ್ದಾರೆ. ಇದು ಆರೋಗ್ಯಕರ ಬೆಳವಣಿಗೆ ಅಲ್ಲ ಎಂಬುದು ನನ್ನ ಅನಿಸಿಕೆ. ಇನ್ನಾದರೂ ಆರೋಗ್ಯಕರ ಜೀವನ ಶೈಲಿಯನ್ನು ರೂಢಿಸಿಕೊಳ್ಳಬೇಕೆಂಬ ಎಚ್ಚರಿಕೆಯ ಸೂಚನೆಯನ್ನು ಈ ಅಂಕಿಸಂಖ್ಯೆಗಳು ನಮಗೆ ನೀಡುತ್ತಿವೆ,” ಎಂದು ತಿಳಿಸಿರು.

ಮಂಗಳೂರಿನ ಕೆಎಂಸಿ ಹಾಸ್ಪಿಟಲ್‍ನ ಪ್ರಾಂತೀಯ ಮುಖ್ಯ ಕಾರ್ಯಕಾರಿ ಅಧಿಕಾರಿ ಸಘೀರ್ ಸಿದ್ದಿಖಿ ಅವರು ಈ ಸಂದರ್ಭದಲ್ಲಿ ಮಾತನಾಡಿ, “ಸಾಮಾನ್ಯ ಜನರ ಮೇಲೆ ಗಂಭೀರವಾಗಿರುವ ಪರಿಣಾಮ ಬೀರುವಂತಹ ಜೀವನ ಶೈಲಿಗೆ ಸಂಬಂಧಿಸಿದ ಪ್ರಮುಖ ಅನಾರೋಗ್ಯ ಸಮಸ್ಯೆಗಳ ಬಗ್ಗೆ ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೆಎಂಸಿ ಹಾಸ್ಪಿಟಲ್ ಸದಾ ಬದ್ಧತೆ ತೋರುತ್ತಾ ಬಂದಿದೆ. ಹೆಚ್ಚುತ್ತಿರುವ ಹೃದಯ ವೈಫಲ್ಯದ ಘಟನೆಗಳು ಹಾಗೂ ಹೃದಯ ರೋಗಿಗಳ ಸಂಖ್ಯೆಯಲ್ಲಿ ಆಗುತ್ತಿರುವ ಏರಿಕೆಯನ್ನು ಪರಿಗಣಿಸಿ, ಹೃದಯ ರೋಗಗಳ ಎಲ್ಲಾ ಹಂತಗಳಿಗೂ ಆರಂಭದಿಂದ ಅಂತ್ಯದವರೆಗೆ ಸಮಗ್ರ ಚಿಕಿತ್ಸೆ ಒದಗಿಸುವ ಕಾರ್ಯಕ್ರಮಗಳ ಅಗತ್ಯವಿದೆ. ಈ ನಿಟ್ಟಿನಲ್ಲಿ ಗ್ರಾಹಕ ಕೇಂದ್ರಿತ ಸೌಲಭ್ಯಗಳು, ಪರಿಣಿತ ತಜ್ಞ ವೈದ್ಯರು ಮತ್ತು ಅತ್ಯುತ್ತಮವಾಗಿರುವ ಫಲಿತಾಂಶವನ್ನು ನೀಡುವ ಟ್ರಾಕ್ ರೆಕಾರ್ಡ್ ಹೊಂದಿರುವ ನಾವು ಹೃದಯದ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಸೌಲಭ್ಯಗಳನ್ನು ಒದಗಿಸಲು ಸದಾ ಬದ್ಧರಾಗಿದ್ದೇವೆ,” ಎಂದು ಮಾಹಿತಿ ನೀಡಿದರು.


Spread the love