ಶತಮನೋತ್ಸವದ ಸಂಭ್ರಮದಲ್ಲಿ ಭಾರತೀಯ ರೆಡ್‍ಕ್ರಾಸ್ – ವಾಕಥಾನ್

Spread the love

ಶತಮನೋತ್ಸವದ ಸಂಭ್ರಮದಲ್ಲಿ ಭಾರತೀಯ ರೆಡ್‍ಕ್ರಾಸ್ – ವಾಕಥಾನ್
ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯು ಶತಮಾನೋತ್ಸವದ ಸಂಭ್ರಮ ಆಚರಣೆ ಅಂಗವಾಗಿ ಕಾರ್‍ಸ್ಟ್ರೀಟ್ ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜನವರಿ 17 ರಂದು ವಾಕ್‍ಥಾನ್ ಮೂಲಕ ಶತಮಾನೋತ್ಸವದ ಆಚರಣೆಗೆ ಚಾಲನೆ ನೀಡಲಾಯಿತು.

ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ದಕ್ಷಿಣ ಕನ್ನಡ ಜಿಲ್ಲಾ ಘಟಕ, ಮಂಗಳೂರು ವಿಶ್ವವಿದ್ಯಾನಿಲಯ ಯುವ ರೆಡ್‍ಕ್ರಾಸ್ ಘಟಕ ಈ ವಾಕ್‍ಥಾನ್‍ನನ್ನು ಆಯೋಜಿಸಿದ್ದು, ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಕರ್ನಾಟಕ ಶಾಖೆಯ ಚೇರ್‍ಮೆನ್ ಎಸ್. ನಾಗಣ್ಣ ಚಾಲನೆ ನೀಡಿ ಮಾತನಾಡಿ, ಭಾರತದಲ್ಲಿ ರೆಡ್‍ಕ್ರಾಸ್ ಸಂಸ್ಥೆ ಆರಂಭಗೊಂಡು 100 ವರ್ಷಗಳಾಗಿದ್ದು, ದೇಶಾದ್ಯಂತ ಮಾನವೀಯ ಸೇವೆಗಳನ್ನು ಅರ್ಥಪೂರ್ಣವಾಗಿ ಮಾಡುತ್ತಾ ಬರುತ್ತಿದೆ. ರಾಜ್ಯದಲ್ಲಿ ಶತಮಾನೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಮಂಗಳೂರಿನಲ್ಲಿ ವಾಕ್‍ಥಾನ್ ಮೂಲಕ ಚಾಲನೆ ನೀಡಲಾಗಿದೆ. ಇಡೀ ವರ್ಷ ಅರ್ಹರಿಗೆ ವಿವಿಧ ಸೇವಾ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ ಎಂದರು.

ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಿನ್ಸಿಪಾಲ್ ಪ್ರೊ. ರಾಜಶೇಖರ್ ಹೆಬ್ಬಾರ್ ಸಿ ಮಾತನಾಡಿ, ವಿಶ್ವದಾದ್ಯಂತ ರೆಡ್‍ಕ್ರಾಸ್ ಸಂಸ್ಥೆ ಮಾನವೀಯ ಮೌಲ್ಯಗಳೊಂದಿಗೆ ಸೇವೆ ಮಾಡುತ್ತಿದೆ. ನಮ್ಮ ದೇಶದಲ್ಲಿ 100 ವರ್ಷಗಳಿಂದ ಸಂತ್ರಸ್ತರ ಸೇವೆಯಲ್ಲಿ ತೊಡಗಿಸಿಕೊಂಡಿರುವ ಈ ಸಂಸ್ಥೆಯಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಇದರ ಶತಮಾನೋತ್ಸವದ ಕಾರ್ಯಕ್ರಮಕ್ಕೆ ನಮ್ಮ ಸಂಸ್ಥೆಯಲ್ಲಿ ಚಾಲನೆ ನೀಡಿರುವುದು ಅತ್ಯಂತ ಸಂತೋಷವಾಗಿದೆ ಎಂದರು.

ರೆಡ್‍ಕ್ರಾಸ್ ದಕ್ಷಿಣ ಕನ್ನಡ ಘಟಕದ ಚೇರ್‍ಮೆನ್ ಸಿಎ. ಶಾಂತಾರಾಮ ಶೆಟ್ಟಿ ಮಾತನಾಡಿ, ರೆಡ್‍ಕ್ರಾಸ್ ಸಂಸ್ಥೆ ಅರ್ಹ ಸಂತ್ರಸ್ತರಿಗೆ ತುರ್ತು ಅಗತ್ಯಗಳಿಗೆ ಸ್ಪಂದಿಸುತ್ತಾ ಮಾನವೀಯ ಸೇವೆಯನ್ನು ಮಾಡುತ್ತಾ ಬರುತ್ತಿದೆ. ಯುವ ಸಮುದಾಯ ಇದರಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದರು.

ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಕರ್ನಾಟಕ ಶಾಖೆಯ ಪದಾಧಿಕಾರಿ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಚಂದ್ರಶೇಖರ್, ವೈಸ್ ಚೇರ್‍ಮೆನ್ ಡಾ. ವಿ.ಎಲ್.ಎಸ್ ಕುಮಾರ್, ಮಂಗಳೂರು ವಿಶ್ವವಿದ್ಯಾನಿಲಯ ಯುವ ರೆಡ್‍ಕ್ರಾಸ್ ಘಟಕದ ನೋಡಲ್ ಅಧಿಕಾರಿ ಡಾ. ಗಣಪತಿ ಗೌಡ, ಕಾರ್ಯಕ್ರಮ ಅಧಿಕಾರಿಗಳು ಡಾ. ಮಹೇಶ್ ಕೆ. ಬಿ., ಪ್ರೊ. ಮಣಿ ಭೂಷಣ್ ಡಿಸೋಜ, ಪ್ರೊ. ನಯನಾ ಕುಮಾರಿ ಕೆ., ರೆಡ್‍ಕ್ರಾಸ್ ಜಿಲ್ಲಾ ಘಟಕದ ಪದಾಧಿಕಾರಿಗಳು ಬಿ. ನಿತ್ಯಾನಂದ ಶೆಟ್ಟಿ, ರವೀಂದ್ರನಾಥ್, ಯತೀಶ್ ಬೈಕಂಪಾಡಿ, ಬಿ. ರವೀಂದ್ರ ಶೆಟ್ಟಿ, ಸಚೇತ್ ಸುವರ್ಣ, ಗೌರವ ಕಾರ್ಯದರ್ಶಿ ಎಸ್. ಎ ಪ್ರಭಾಕರ ಶರ್ಮಾ, ಪ್ರವೀಣ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ನಗರದ ಪ್ರಮುಖ ರಸ್ತೆಗಳಲ್ಲಿ ವಾಕ್‍ಥಾನ್ ಮಾಡಿ ಬಳಿಕ ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಯಕ್ರಮ ಸಮಾಪನಗೊಂಡಿತು.


Spread the love