ಶಬರಿಮಲೆ ಯಾತ್ರೆಗೆ ತೆರಳಿದ್ದ ಉಳ್ಳಾಲದ ಮಾಲಾಧಾರಿ ಎರಿಮಲೆಯಲ್ಲಿ ಹೃದಯಾಘಾತದಿಂದ ನಿಧನ

Spread the love

ಶಬರಿಮಲೆ ಯಾತ್ರೆಗೆ ತೆರಳಿದ್ದ ಉಳ್ಳಾಲದ ಮಾಲಾಧಾರಿ ಎರಿಮಲೆಯಲ್ಲಿ ಹೃದಯಾಘಾತದಿಂದ ನಿಧನ

ಮಂಗಳೂರು: ಶಬರಿಮಲೆ ಯಾತ್ರೆ ಕೈಗೊಂಡಿದ್ದ ಉಳ್ಳಾಲ ತಾಲೂಕಿನ ಅಯ್ಯಪ್ಪ ಮಾಲಾ ವೃತಧಾರಿಯೊಬ್ಬರು ಕೇರಳದ ಎರಿಮಲೆಯಲ್ಲಿ ಹೃದಯಾಘಾತಕ್ಕೆ ಬಲಿಯಾದ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.

ಸೋಮೇಶ್ವರ ಪುರಸಭಾ ವ್ಯಾಪ್ತಿಯ ಪಿಲಾರು ದೇಲಂತಬೆಟ್ಟು ನಿವಾಸಿ ಉದ್ಯಮಿ ಚಂದ್ರಹಾಸ್ ಶೆಟ್ಟಿ (55) ಮೃತಪಟ್ಟವರು. ಚಂದ್ರಹಾಸ್ ಅವರು ಇತರ ಅಯ್ಯಪ್ಪ ಮಾಲಾ ವೃತಧಾರಿಗಳ ಜೊತೆ ಶನಿವಾರದಂದು ನಗರದ ಅರ್ಕುಳ, ತುಪ್ಪೇಕಲ್ಲಿನಿಂದ ಶಬರಿಮಲೆ ಯಾತ್ರೆ ಕೈಗೊಂಡಿದ್ದರು. ಸೋಮವಾರ ಬೆಳಿಗ್ಗೆ ಚಂದ್ರಹಾಸ್ ಅವರು ಎರಿಮಲೆಯಿಂದ ಕಾಡಿನ ದಾರಿಯಾಗಿ ಪಂಪೆಗೆ ಪ್ರಯಾಣ ಬೆಳೆಸಿದ್ದ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಮರಣೋತ್ತರ ಪರೀಕ್ಷೆಯನ್ನು ತ್ವರಿತವಾಗಿ ನಡೆಸಿ ಉಳ್ಳಾಲಕ್ಕೆ ತರಲು ಸ್ಪೀಕರ್ ಯು.ಟಿ.ಖಾದರ್ ಅವರು ಕೇರಳದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಮಂಗಳವಾರ ಬೆಳಿಗ್ಗೆ ಪಾರ್ಥಿವ ಶರೀರವು ಉಳ್ಳಾಲ ತಲುಪಲಿದೆ.

ಮೃತ ಚಂದ್ರಹಾಸ್ ಅವರು ಮೂಲತ: ಬಾಕ್ರಬೈಲ್ ನಿವಾಸಿಯಾಗಿದ್ದು, ಮಿನರಲ್ ವಾಟರ್ ಪೂರೈಕೆಯ ಉದ್ಯಮ ನಡೆಸುತ್ತಿದ್ದರು. ಕಳೆದ ಹತ್ತು ವರುಷದ ಹಿಂದೆ ಪಿಲಾರಿನಲ್ಲೇ ಮನೆ ನಿರ್ಮಿಸಿ ವಾಸವಾಗಿದ್ದರು. ಮೃತರು ಪತ್ನಿ, ಪುತ್ರಿ, ಪುತ್ರನನ್ನು ಅಗಲಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments