ಶಾರದಾ ಮಾತೆ ವಿಗ್ರಹಗಳ ಜಲಸ್ತಂಭನದೊಂದಿಗೆ ಉಡುಪಿ – ಉಚ್ಚಿಲ ದಸರಾ ವೈಭವದ ತೆರೆ
ಉಡುಪಿ: ಶ್ರೀ ಕ್ಷೇತ್ರ ಉಚ್ಚಿಲದಲ್ಲಿ ನವದುರ್ಗೆಯರ ಸಹಿತ ಶಾರದಾ ಮಾತೆ ವಿಗ್ರಹಗಳ ಜಲಸ್ತಂಭನದೊಂದಿಗೆ 10 ದಿನಗಳ ಕಾಲ ನಡೆದ ಉಡುಪಿ- ಉಚ್ಚಿಲ ದಸರಾ ಮಹೋತ್ಸವ ವೈಭವದಿಂದ ಸಮಾಪನಗೊಂಡಿತು.
ಚಂಡಿಕಾ ಯಾಗ ವಿಸರ್ಜನಾ ಶೋಭಾಯಾತ್ರೆಯ ಪ್ರಯುಕ್ತ ಬೆಳಗ್ಗಿನಿಂದಲೇ ಸಹಸ್ರಾರು ಮಂದಿ ಕ್ಷೇತ್ರಕ್ಎಕ ಬಂದಿದ್ದು ಬೆಳಿಗ್ಗೆ 10.30 ಕ್ಕೆ ಪಲ್ಲ ಪೂಜೆ ನೆರವೇರಿಸಿ 11 ರಿಂದಲೇ ಮಹಾ ಅನ್ನಸಂತರ್ಪಣೆ ಆರಂಭವಾಯಿತು. ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ ಸೇವೆ ಹಾಗೂ ಶಾರದಾ ಮಾತೆಗೆ ಮಹಾ ಮಂಗಳಾರತಿ ನಡೆಯಿತು.
ಕ್ಷೇತ್ರದ ಪ್ರಧಾನ ತಂತ್ರಿ ರಾಘವೇಂದ್ರ ತಂತ್ರಿ ಕೊರಂಗ್ರಪಾಡಿ ಮತ್ತು ಮಹಾಲಕ್ಷ್ಮೀ ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ ಅವರ ಪೌರೋಹಿತ್ಯದಲ್ಲಿ ಮಹಾಚಂಡಿಕಾಯಾಗ ನಡೆದು, ಸಹಸ್ರ ಸಂಖ್ಯೆಯಲ್ಲಿ ನಾರಿಕೇಳ, ನವಧಾನ್ಯ, ರವಕೆ ಕಣ, ರೇಷ್ಮೇ ಸೀರೆ, ಫಲವಸ್ತುಗಳನ್ನು ಸಮರ್ಪಿಸಿ ಪೂರ್ಣಾಹುತಿ ನೆರವೇರಿಸಲಾಯಿತು. ದಸರಾ ಪ್ರಯುಕ್ತ ನವದುರ್ಗೆಯರ ಸಹಿತ ಶಾರದಾ ವಿಗ್ರಹಗಳ ಶೋಭಾಯಾತ್ರೆ ನಡೆಯಿತು.
ಶ್ರೀ ಕ್ಷೇತ್ರ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಿಂದ 3 ಗಂಟೆಗೆ ಧಾರ್ಮಿಕ ವಿಧಿವಿಧಾನಗಳ ಬಳಿಕ ಸಂಜೆ 4 ಗಂಟೆಗೆ ದೇವಳದ ಗೋಪುರದ ಮುಂಭಾಗದಲ್ಲಿ ಅಂಬಾರಿ ಹೊತ್ತ ಆನೆಯ ಟ್ಯಾಬ್ಲೋಗೆ ಪುಷ್ಪಾರ್ಚನೆ ನಡೆಸಿ ಶೋಭಾ ಯಾತ್ರೆಗೆ ಗಣ್ಯರು ಚಾಲನೆ ನೀಡಿದರು. ಅಂಬಾರಿ ಹೊತ್ತ ಟ್ಯಾಬ್ಲೊ, ನವದುರ್ಗೆಯು ಮತ್ತು ಶಾರದಾ ಮಾತೆಯ ವಿಗ್ರಹಕ್ಕೆ ಡ್ರೋನ್ ಮೂಲಕ ನಡೆದ ಪುಷ್ಪಾರ್ಚನೆ ಸೇರಿದ ಭಕ್ತರಲ್ಲಿ ಕಣ್ಮನ ಸೆಳೆಯಿತು.
ರಾಷ್ಟ್ರೀಯ ಹೆದ್ದಾರಿ 66 ರ ಉಚ್ಚಿಲ, ಎರ್ಮಾಳು ಜನಾರ್ದನ ದೇವಸ್ಥಾನ, ಎರ್ಮಾಳು ಬಡಾ, ಉಚ್ಚಿಲ ಪೇಟೆ, ಮೂಳೂರು, ಕೊಪ್ಪಲಂಗಡಿಯ ಮೂಲಕ ಸಾಗಿದ ಶೋಭಾ ಯಾತ್ರೆಯಲ್ಲಿ 45 ಟ್ಯಾಬ್ಲೊ, ಭಜನಾ ತಂಡಗಳು, ವಾದ್ಯ ಮೇಳಗಳು ಉಚ್ಚಿಲ ದಸರಾ ವೈಭವಕ್ಕೆ ಮೆರುಗು ತಂದವು. ಬಳಿಕ ಸಾಮೂಹಿಕ ಮಂಗಳರಾತಿ ಬಳಿಕ ಸಮುದ್ರ ಪೂಜೆ ಸಲ್ಲಿಸಲಾಯಿತು.
ಶಾರದೆ ಮತ್ತು ನವದುರ್ಗೆಯರನ್ನು ಹೊತ್ತುಕೊಂಡ ಸ್ತಬ್ಧಚಿತ್ರಗಳ ಸಹಿತವಾಗಿ ದೇವಸ್ಥಾನದ ಬಿರುದಾವಳಿ, ಸಿಂದೂರ ಯುದ್ದ ವಿಮಾನದ ಮಾದರಿ, ವಿಶೇಷ ಗಮನ ಸೆಳೆದಿದ್ದು, ಅದರೊಂದಿಗೆ 20 ಬಣ್ಣದಕೊಡೆ, ಕೊಂಬು ಡೋಲು, ಸ್ಯಾಕ್ಸೋಫೋನ್, ಸಿಂಗಾರಿ ಮೇಳ, ನಾಸಿಕ್ ಬ್ಯಾಂಡ್, ಚೆಂಡೆ, ಬ್ಯಾಂಡ್ ಸೆಟ್, ಕೋಳಿ ಮತ್ತು ಮೀನು, ಸು ಫ್ರಂ ಸೋ ಚಿತ್ರದ ಗೊಂಬೆ ಬಳಗ, ಕೇರಳ ಗೊಂಬೆ, ಕುಣಿತ ಭಜನೆ, ತಾಲೀಮು, ಆಮೆ, ಕುರುಕ್ಷೇತ್ರ, ಮತ್ಸ್ಯಾವತಾರ, ಲಂಕಿಣಿ, ಉಚ್ಚಿಲ ಮಹಾಲಕ್ಷ್ಮೀ, ವರಾಹಾವತಾರ, ಮಂತ್ರ ದೇವತೆ, ಡ್ರ್ಯಾಗನ್ ಟ್ಯಾಬ್ಲೊ, ಪರ್ಸಿನ್ ಬೋಟ್, ಅಯ್ಯಪ್ಪ ಮಹಿಸಾಸುರ ಮರ್ದಿನಿ, ಹುಲಿವೇಷ, ಅಯೋಧ್ಯ, ಪರಿಸರ, ದಶಾವತಾರ, ರಾಕ್ಷಸ ವೇಷಗಳ ಟ್ಯಾಬ್ಲೊ, ಡಿಜೆ ಶೋಭಾ ಯಾತ್ರೆಯ ಮೆರುಗನ್ನು ಹೆಚ್ಚಿಸಿದವು.
ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡವರಿಗೆ ಶುದ್ದ ಕುಡಿಯುವ ನೀರಿನ ಪೊರೈಕೆಗಾಗಿ ನೀರು ಸರಬರಾಜು ವಾಹನ, ಶುಚಿತ್ವ ವಾಹನ, ಕುಡಿಯುವ ನೀರಿನ ವಾಹನ ಮತ್ತು ಮೆಟಲೈಟ್ ವಾಹನಗಳು ಮೆರವಣಿಗೆಗೆ ಸಾಥ್ ನೀಡಿದವು.
ಉಚ್ಚಿಲ ದಸರಾ ರೂವಾರಿ ಜಿ. ಶಂಕರ್, ಶಾಲಿನಿ ಜಿ. ಶಂಕರ್, ಮತ್ತು ಕುಟುಂಬಸ್ಥರು, ದಕ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಯಶಪಾಲ ಸುವರ್ಣ, ಮುಖಂಡರಾದ ವಿನಯ ಕುಮಾರ್ ಸೊರಕೆ, ಪ್ರಸಾದ್ ರಾಜ್ ಕಾಂಚನ್, ಗಿರಿಧರ ಸುವರ್ಣ, ವಿನಯ ಕರ್ಕೆರಾ, ಶರಣ್ ಕುಮಾರ್, ಸತೀಶ್ ಕುಂದರ್, ಸತೀಶ್ ಅಮೀನ್ ಪಡುಕೆರೆ ಹಾಗೂ ಇತರರು ಉಪಸ್ಥಿತರಿದ್ದರು.