ಶಾಸಕ ಲೋಬೊ, ಐವನ್ ರಿಂದ ಸುಂದರರಾಮ ಶೆಟ್ಟಿಯವರ ಗೌರವಕ್ಕೆ ಧಕ್ಕೆ: ವೇದವ್ಯಾಸ ಕಾಮತ್

Spread the love

ಶಾಸಕ ಲೋಬೊ, ಐವನ್ ರಿಂದ ಸುಂದರರಾಮ ಶೆಟ್ಟಿಯವರ ಗೌರವಕ್ಕೆ ಧಕ್ಕೆ: ವೇದವ್ಯಾಸ ಕಾಮತ್

ಮಂಗಳೂರು: ಎಲ್ಲವೂ ಕಾನೂನಾತ್ಮಕವಾಗಿ ನಡೆದು ಮೂಲ್ಕಿ ಸುಂದರರಾಮ ಶೆಟ್ಟಿಯವರ ಹೆಸರನ್ನು ಲೈಟ್ ಹೌಸ್ ಹಿಲ್ ರಸ್ತೆಗೆ ಇಡುವ ಪ್ರಕ್ರಿಯೆ ಕೊನೆಯ ಹಂತದಲ್ಲಿ ಇರುವಾಗ ಅದಕ್ಕೆ ತಡೆಯಾಜ್ಞೆ ತರುವ ಮೂಲಕ ಶಾಸಕದ್ವಯರಾದ ಜೆ ಆರ್ ಲೋಬೋ ಹಾಗೂ ಐವನ್ ಡಿಸೋಜಾ ಅವರು ಬಂಟಶ್ರೇಷ್ಟ ಮಹಾಪುರುಷನೊಬ್ಬನ ಗೌರವಕ್ಕೆ ಕುಂದು ತರುವ ಕೆಲಸ ಮಾಡಿದ್ದಾರೆ ಎಂದು ಮಂಗಳೂರು ನಗರ ದಕ್ಷಿಣ ಬಿಜೆಪಿ ಅಧ್ಯಕ್ಷ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ.

ವಿಜಯಾ ಬ್ಯಾಂಕ್ ವರ್ಕರ್ಸ್ ಯೂನಿಯನ್ ಅವರು ಮಂಗಳೂರು ಮಹಾನಗರ ಪಾಲಿಕೆಗೆ ಮನವಿ ಕೊಟ್ಟಾಗ ಅದನ್ನು ಪ್ರಾರಂಭದಲ್ಲಿ ಸ್ಥಾಯಿ ಸಮಿತಿ ಸಭೆಯಲ್ಲಿ ಇಟ್ಟು ಒಪ್ಪಿಗೆ ಪಡೆದು ನಂತರ ಅದನ್ನು ಪರಿಷತ್ ಸಭೆಯಲ್ಲಿ ಇಟ್ಟು ಅಲ್ಲಿಯೂ ಸಮ್ಮತಿ ಪಡೆದು ಬಳಿಕ ಮಂಗಳೂರಿನ ಪ್ರಮುಖ ಪತ್ರಿಕೆಗಳಲ್ಲಿ ಜಾಹೀರಾತು ಕೊಟ್ಟು ಅದರ ನಂತರ ಜಿಲ್ಲಾಧಿಕಾರಿಯಿಂದ ಹಾಗೂ ಪೊಲೀಸ್ ಕಮೀಷನರ್ ಅವರಿಂದ ಶಾಂತಿ ಸುವ್ಯವಸ್ಥೆಗೆ ಭಂಗ ಬರುವುದಿಲ್ಲ ಎಂದು ಲಿಖಿತ ಅನುಮತಿ ಪಡೆದು ಅಲ್ಲಿಂದ ರಾಜ್ಯದ ನಗರಾಭಿವೃದ್ಧಿ ಇಲಾಖೆಗೆ ವರದಿಯನ್ನು ಕಳುಹಿಸಿ ಅಲ್ಲಿಂದ ಅನುಮತಿ ಪಡೆದ ಬಳಿಕ ಇನ್ನೇನೂ ಭಾನುವಾರ ಜುಲೈ 2 ರಂದು ನಾಮಫಲಕ ಅನಾವರಣಗೊಳ್ಳಬೇಕು ಎಂದು ಕಾರ್ಯಕ್ರಮ ಸಿದ್ಧವಾಗಿರುವಾಗ ಏಕಾಏಕಿ ಜುಲೈ ಒಂದರಂದು ಸಂಜೆಯೊಳಗೆ ಅದಕ್ಕೆ ತಡೆಯಾಜ್ಞೆ ತರುವ ಮೂಲಕ ಶಾಸಕರುಗಳು ಸಮಾಜದ ದೀನದಲಿತರ ಬದುಕಿನ ಆಶಾಕಿರಣವಾಗಿದ್ದ ಮೂಲ್ಕಿ ಸುಂದರರಾಮ ಶೆಟ್ಟಿಯವರ ಜೀವನಗಾಥೆಯನ್ನೆ ಅವಹೇಳನ ಮಾಡಿದಂತೆ ಆಗಿದೆ. ಕಾನೂನುಬದ್ಧ ಪ್ರಕ್ರಿಯೆಗೆ ಒಂದೇ ದಿನದಲ್ಲಿ ತಡೆಯಾಜ್ಞೆ ತರುವ ಶಾಸಕ ಲೋಬೋ ಅವರು ಸ್ಮಾರ್ಟ ಸಿಟಿ ಯೋಜನೆ, ಅಮೃತಯೋಜನೆಗೆ ಬಂದಿರುವ ಅನುದಾನವನ್ನು ಸರಿಯಾದ ರೀತಿಯಲ್ಲಿ ಬಳಸಲು ಅನೇಕ ತಿಂಗಳುಗಳಿಂದ ಮೀನಾಮೇಷ ಏಣಿಸುತ್ತಿರುವುದರಿಂದ ಅಭಿವೃದ್ಧಿ ಕುಂಠಿತವಾಗಿದೆ ಎಂದು ವೇದವ್ಯಾಸ ಕಾಮತ್ ಹೇಳಿದ್ದಾರೆ.

ಕೆಥೊಲಿಕ್ ಕ್ಲಬ್ ನಿಂದ ಬಾವುಟಗುಡ್ಡೆಯಾಗಿ ಅಂಬೇಡ್ಕರ್ ಸರ್ಕಲ್ ತನಕದ ರಸ್ತೆಯ ಯಾವುದೇ ಸಂಘ ಸಂಸ್ಥೆಯ ದಾಖಲೆಯಲ್ಲಿ ಅದು ಲೈಟ್ ಹಿಲ್ ರಸ್ತೆ ಎಂದೇ ದಾಖಲೆ ಇದೆ. ಎಲೋಶಿಯಸ್ ಕಾಲೇಜಿನ ವೆಬ್ ಸೈಟ್ ನಲ್ಲಿ ಕೂಡ ಅದು ಹಾಗೆ ಇದೆ. ಹಾಗಿರುವಾಗ ಬಂಟ, ಬಿಲ್ಲವ ಎನ್ನದೆ ಸಮಾಜದ ಅಷ್ಟೂ ಅಸಹಾಯಕರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುತ್ತಿದ್ದ ಸುಂದರರಾಮ ಶೆಟ್ಟರ ಹೆಸರು ಇಡುವುದು ಬೇಡಾ ಎಂದು ಲೋಬೋ ಅವರಿಗೆ ಅನಿಸಿದ್ದರೆ ಅವರದ್ದೆ ಪಕ್ಷದ ಆಳ್ವಿಕೆ ಇರುವ ಪಾಲಿಕೆಯಲ್ಲಿ ಈ ವಿಷಯ ಪ್ರಸ್ತಾಪ ಆದಾಗ ವಿರೋಧಿಸಬಹುದಿತ್ತು. ಲೇಡಿಹಿಲ್ ಸರ್ಕಲ್ ಗೆ ಬ್ರಹ್ಮಶ್ರೀ ನಾರಾಯಣ ಗುರು ಹೆಸರಿಡುವಾಗ ಇವರು ಪಾಲಿಕೆಯಲ್ಲಿ ವಿರೋಧಿಸಿದ್ದರ ಬಗ್ಗೆ ಜನರಿಗೆ ಸಂದೇಹಗಳಿರುವಾಗ ಇಲ್ಲಿಯೂ ಹಾಗೆ ಮೊದಲೇ ಮಾಡಿದ್ದರೆ ಜನರ ಭಾವನೆಗೆ ಇಷ್ಟು ನೋವಾಗುತ್ತಿರಲಿಲ್ಲ. ಆದರೆ ಎಲ್ಲಾ ರೀತಿಯಲ್ಲಿಯೂ ಕಾನೂನಾತ್ಮಕವಾಗಿ ಒಪ್ಪಿಗೆ ಪಡೆದ ನಂತರ ಏಕಪಕ್ಷೀಯವಾಗಿ ಅದಿಕಾರ ದುರುಪಯೋಗಪಡಿಸಿ ಸುಂದರರಾಮ ಶೆಟ್ಟಿಯವರ ಹೆಸರಿಗೆ ಅವಮಾನ ಮಾಡಿದ್ದು ಖಂಡನಿಯ, ಇದನ್ನು ಭಾರತೀಯ ಜನತಾ ಪಾರ್ಟಿ ತೀವ್ರವಾಗಿ ಖಂಡಿಸುತ್ತದೆ ಎಂದು ವೇದವ್ಯಾಸ ಕಾಮತ್ ಹೇಳಿದ್ದಾರೆ.


Spread the love